Mysore tatayya image

'ತಾತಯ್ಯ ವಿಚಾರ ವೇದಿಕೆ' , ಮೈಸೂರು :

ಆಶಯಗಳು ಮತ್ತು ಕನಸುಗಳು :

ಪ್ರತಿಯೊಂದು ದೇಶ, ರಾಜ್ಯ, ನಗರ ಸಮಾಜಗಳ ಇತಿಹಾಸದಲ್ಲಿ ಅದನ್ನು ಕಟ್ಟಿ ಬೆಳೆಸಿದ ಮಹನೀಯರ ಪರಿಶ್ರಮ,ಕಳಕಳಿ,ತ್ಯಾಗ ಬಲಿದಾನಗಳ ಪಾತ್ರ ಮಹತ್ತರವಾದುದು. ನಮ್ಮ ದೇಶದಲ್ಲಂತೂ 'ಸ್ವಂತಕ್ಕಾಗಿ ಸ್ವಲ್ಪ,ಸಮಾಜಕ್ಕಾಗಿ ಸರ್ವಸ್ವ' ಎಂಬುದನ್ನೇ ಬದುಕಿನ ಧ್ಯೇಯವಾಗಿಸಿಕೊಂಡು ಸಮಾಜದ ಹಿತಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿದ ಮಹಾನುಭಾವರ, ಧೀಮಂತರ ಪರಂಪರೆಯೇ ಇದೆ. ಸ್ವಾತಂತ್ರ್ಯ ಪೂರ್ವದಲ್ಲೇ ದೇಶದ ಮಾದರಿ ಪ್ರಾಂತ್ಯವೆನ್ನಿಸಿಕೊಂಡಿದ್ದ, ದಕ್ಷಿಣಭಾರತದಲ್ಲೇ ’ಶಿಕ್ಷಣಕಾಶಿ’ ಎಂಬ ಪ್ರಖ್ಯಾತಿಗೆ ಪಾತ್ರವಾಗಿದ್ದ ಮೈಸೂರು ನಗರವನ್ನು ಕಟ್ಟಿ ಬೆಳೆಸುವಲ್ಲಿ ಬದುಕನ್ನೇ ಸಮರ್ಪಿಸಿ ದುಡಿದ ಮಹನೀಯರಲ್ಲಿ ದಯಾಸಾಗರ ಎಂ.ವೆಂಕಟಕೃಷ್ಣಯ್ಯನವರ ಪಾತ್ರ ಬಲು ದೊಡ್ಡದು. ಮೈಸೂರಿನ ಪತ್ರಿಕೋದ್ಯಮ ಪಿತಾಮಹರಾಗಿ,ರಾಜಗುರು-ರಾಜನೀತಿಜ್ಞರಾಗಿ,ಆದರ್ಶ ಅಧ್ಯಾಪಕರಾಗಿ,ಸಾಮಾಜಿಕ ಕಾರ್ಯಕರ್ತರಾಗಿ, ಶ್ರೇಷ್ಠ ಸಾಹಿತಿಗಳಾಗಿ,ಸ್ತ್ರೀ ವಿದ್ಯಾಭ್ಯಾಸ ಪ್ರವರ್ತಕರಾಗಿ, ಅಸ್ಪೃಶ್ಯೋದ್ಧಾರಕರಾಗಿ, ಶಿಕ್ಷಣ ಸಂಸ್ಥೆಗಳ ಸ್ಥಾಪಕರಾಗಿ,ದೀನದುರ್ಬಲರ ದನಿಯಾಗಿ ಅವರು ಸಲ್ಲಿಸಿದ ಸೇವೆ ಅನುಪಮ ಮತ್ತು ಅವಿಸ್ಮರಣೀಯ.ಅದಕ್ಕಾಗಿಯೇ ಮೈಸೂರಿನ ನಾಗರೀಕರು ಅವರನ್ನು 'ತಾತಯ್ಯ' ನೆಂದು, ವೃದ್ಧಪಿತಾಮಹ,ದಯಾಸಾಗರ ಎಂದು ಕರೆದು ಗೌರವಿಸಿದ್ದು.

ಆದರಿಂದು ಸಮಾಜದ ಪರಿಕಲ್ಪನೆಯನ್ನೇ ಮರೆತು ನಮ್ಮ ನಮ್ಮ ಸುತ್ತ ಸ್ವಾರ್ಥದ ಗೋಡೆಗಳನ್ನು ಕಟ್ಟಿಕೊಂಡಿರುವ ನಮಗೆ ಸಮಾಜಕ್ಕಾಗಿ ತಮ್ಮ ಇಡೀ ಬದುಕನ್ನೇ ಸಮರ್ಪಿಸಿದ ಇಂತಹ ಮಹಾನುಭಾವರ ಬದುಕು,ಆದರ್ಶಗಳ ನೆನಪೇ ಇಲ್ಲದಿರುವುದು ದುರಂತ. ನಮ್ಮೊಳಗಿನ ಅಂತಃ ಕಲಹದ ಪರಿಣಾಮವಾಗಿ ನಮ್ಮ ಸಾಮಾಜಿಕ ವ್ಯವಸ್ಥೆ ಶಿಥಿಲಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಸಮಾಜವನ್ನು ಒಗ್ಗೂಡಿಸಿದ, ಕಟ್ಟಿ ಬೆಳೆಸಿದ ಇಂತಹ ಮಹನೀಯರ ಸ್ಮರಣೆ ಇಂದು ಅನಿವಾರ್ಯ ಅಗತ್ಯ.

ಮೈಸೂರಿನ ತಾತಯ್ಯ ವಿಚಾರ ವೇದಿಕೆ ತಾತಯ್ಯ ನವರ ಅಭಿಮಾನಿಗಳು ಹಾಗೂ ಸಾಮಾಜಿಕ ಕಾಳಜಿಯುಳ್ಳ ಸಮಾನಾಸಕ್ತರನ್ನು ಜತೆಯಾಗಿಸಿಕೊಂಡು ಇಂದಿನ ಯುವಜನತೆಯಲ್ಲಿ ತಾತಯ್ಯ ನವರ ಬದುಕು ಹಾಗೂ ಸಾಮಾಜಿಕ ಕಾರ್ಯದ ಕುರಿತು ಅರಿವು ಮೂಡಿಸುವ, ಆ ಮೂಲಕ ನಮ್ಮೆಲ್ಲರ ಬದುಕಿಗೆ ಹೊಸತನವನ್ನು ತಂದುಕೊಳ್ಳುವ ಉದ್ದೇಶ ಹೊಂದಿದೆ. ತಾತಯ್ಯ ನವರು ರೂಪಿಸಿದ ಸಂಸ್ಥೆಗಳು ಹಾಗೂ ಮೈಸೂರಿನ ಸಾರ್ವಜನಿಕರ ಸಹಕಾರದಿಂದ 'ಒಂದು ಸಾರ್ವಜನಿಕ ಸಂಸ್ಥೆ' ಯ ರೀತಿಯಲ್ಲಿ ರೂಪುಗೊಂಡು ಇಂದಿನ ಸಾರ್ವಜನಿಕ ಜೀವನಕ್ಕೆ ಅತ್ಯಗತ್ಯವಾದ ಅವರ ವಿಚಾರಗಳನ್ನು ಉಳಿಸಿ ಬೆಳೆಸುವತ್ತ ಶ್ರಮಿಸುವ ಹಂಬಲ ತಾತಯ್ಯ ವಿಚಾರ ವೇದಿಕೆ ಯದು.

ಆಶಯಗಳು :

  • ಶ್ರೀ ಎಂ.ವೆಂಕಟಕೃಷ್ಣಯ್ಯ ನವರ ಬದುಕು ಹಾಗೂ ಅವರ ವಿಚಾರಗಳನ್ನು ಇಂದಿನ ಜನತೆಗೆ ತಲುಪಿಸುವ ಉದ್ದೇಶದಿಂದ ಇಂದು ಅಲಭ್ಯವಾಗಿರುವ ಅವರ ಸಮಗ್ರ ಸಾಹಿತ್ಯ ಕೃತಿಗಳನ್ನು ಈ ಕಾಲಕ್ಕೆ ತಕ್ಕ ಸೂಕ್ತ ಪೀಟಿಕೆ, ಟಿಪ್ಪಣಿ ಗಳೊಡನೆ ಮರುಮುದ್ರಣ ಮಾಡುವುದು. ಅವರು ತಮ್ಮ ಪತ್ರಿಕೆಗಳಿಗೆ ಬರೆಯುತ್ತಿದ್ದ ಸಂಪಾದಕೀಯ ಲೇಖನಗಳು ಹಾಗೂ ಬೇರೆಡೆಗಳಲ್ಲಿ ಬರೆದ ಇಂಗ್ಲಿಷ್ ಹಾಗೂ ಕನ್ನಡ ಬಿಡಿ ಬರಹಗಳನ್ನು ಸಂಪಾದಿಸಿ ಸೂಕ್ತ ವಿಮರ್ಶೆಯೊಂದಿಗೆ ಪ್ರಕಟಿಸುವುದು.
  • ಶ್ರೀ ತಾತಯ್ಯ ನವರ ವ್ಯಕ್ತಿತ್ವದ ಹಲವು ಮುಖಗಳ ಅನಾವರಣದ ಆಶಯದಿಂದ ಅವರ ಸಮಕಾಲೀನರು ಹಾಗೂ ಇತ್ತೀಚಿನ ಲೇಖಕರು ಅವರ ಕುರಿತು ಬರೆದಿರುವ ಎಲ್ಲ ಲೇಖನಗಳು, ಸ್ಮರಣಸಂಚಿಕೆಯ ಬರಹಗಳನ್ನು ಒಂದುಗೂಡಿಸಿ ಪ್ರಕಟಿಸುವುದು. ಅವರು ನಡೆಸಿದ ಪತ್ರಿಕೆಗಳು, ಅವರ ಕುರಿತು ಬಂದಿರುವ ಎಲ್ಲ ಸಂಶೋಧನಾತ್ಮಕ ವಿಮರ್ಶಾ ಗ್ರಂಥಗಳನ್ನೂ , ಜೀವನ ಚರಿತ್ರೆಗಳನ್ನೂ, ಸ್ಮರಣ ಸಂಪುಟಗಳನ್ನೂ ಎಲ್ಲರಿಗೂ ಲಭ್ಯವಾಗುವಂತೆ ಸಂಗ್ರಹಿಸಿಡುವುದು.
  • ಶ್ರೀ ವೆಂಕಟಕೃಷ್ಣಯ್ಯನವರ ಪುಸ್ತಕಗಳು, ಪತ್ರಿಕೆಗಳು, ಭಾವಚಿತ್ರಗಳು, ಅವರಿಗೆ ಸಂಬಂಧಿಸಿದ ಎಲ್ಲ ವಸ್ತುಗಳು ಸಂಶೋಧನಸಕ್ತರಿಗೆ,ಜನಸಾಮಾನ್ಯರಿಗೆ ಸುಲಭವಾಗಿ ಸಿಗುವ ರೀತಿಯಲ್ಲಿ ಸಂಗ್ರಹಾಲಯ ವನ್ನು ತೆರೆಯುವುದು . ಅವರು ಪ್ರತಿಪಾದಿಸಿದ ಎಲ್ಲ ಸಾರ್ವಜನಿಕ ವಿಚಾರಗಳಿಗೆ ಬೆಂಬಲ ವಾಗುವ ರೀತಿಯಲ್ಲಿ, ಬೆಂಗಳೂರಿನ ಗೋಖಲೆ ಸಾರ್ವಜನಿಕ ಸಂಸ್ಥೆಯ ಮಾದರಿಯಲ್ಲಿ ಮೈಸೂರಿನ ಸಾರ್ವಜನಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾಳಜಿಯ ಕೇಂದ್ರವಾಗಿ ಅದನ್ನು ರೂಪಿಸಲು ಪ್ರಯತ್ನ ಮಾಡುವುದು.
  • ವೆಂಕಟಕೃಷ್ಣಯ್ಯ ನವರು ಪ್ರತಿಪಾದಿಸಿದ ಎಲ್ಲ ಸಾರ್ವಜನಿಕ ವಿಚಾರಗಳಿಗೆ ಪ್ರಾಮಾಣಿಕ ಬದ್ದತೆಯಿಂದ ಸ್ಪಂದಿಸುವುದು,ನಿಸ್ವಾರ್ಥವಾಗಿ ಬೆಂಬಲಿಸುವುದು.

ನಿಮ್ಮೆಲ್ಲರ ಸಲಹೆ, ಸೂಚನೆ, ಅಭಿಪ್ರಾಯ, ಮಾರ್ಗದರ್ಶನ ಗಳಿಗೆ ಸದಾ ಸ್ವಾಗತ.

ಕಾರ್ಯಕ್ರಮ

ತಾತಯ್ಯ ನವರ ಜನ್ಮದಿನಾಚರಣೆ ಹಾಗೂ ವೆಬ್ ಸೈಟ್ ಲೋಕಾರ್ಪಣೆ : ಸೆಪ್ಟೆಂಬರ್ ೧೧, ೨೦೧೧ , ಶಾರದಾವಿಲಾಸ ಸಭಾಂಗಣ , ಮೈಸೂರು

ಸುದ್ದಿ ಹಾಗೂ ಕಾರ್ಯಕ್ರಮಗಳು

ಕಾರ್ಯಕ್ರಮ :
ತಾತಯ್ಯ ನವರ ಜನ್ಮದಿನಾಚರಣೆ ಹಾಗೂ ವೆಬ್ ಸೈಟ್ ಲೋಕಾರ್ಪಣೆ : ಸೆಪ್ಟೆಂಬರ್ ೧೧, ೨೦೧೧ , ಶಾರದಾವಿಲಾಸ ಸಭಾಂಗಣ , ಮೈಸೂರು ಮುಂದೆ ಓದಿ

ಗ್ಯಾಲರಿ

Mysore Thathayya Gallery

ಶ್ರೀ ವೆಂಕಟ ಕೃಷ್ಣಯ್ಯ ನವರ ಸಾರ್ವಜನಿಕ ಸೇವೆ ಹಾಗೂ ಅಸ್ಪೃಶ್ಯತಾ ನಿವಾರಣೆ ಮತ್ತು ದೀನ ದಲಿತರ ಬಗೆಗಿನ ಅವರ ಕಾಳಜಿಯ ಪ್ರಯತ್ನಗಳು ನನ್ನ ಮನಸ್ಸು ಗೆದ್ದಿವೆ . ನಾನು ಅವರನ್ನು 'ಮೈಸೂರಿನ ಭೀಷ್ಮ ' ನೆಂದು ಪ್ರಶಂಸಿಸುವೆ . ಮೈಸೂರಿನ ಜನತೆಯಲ್ಲಿ ಅವರು 'Grand old man of Mysore' ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ .

– ಮಹಾತ್ಮಾ ಗಾಂಧಿ

ಶುದ್ಧ, ನಿಷ್ಕಳಂಕ ಜೀವನ ಹಾಗೂ ಸಾಮಾಜಿಕ ಸೇವೆಗೆ ಪ್ರಸಿದ್ಧರಾಗಿರುವ ಶ್ರೀ ವೆಂಕಟಕೃಷ್ಣಯ್ಯ ನವರು ಮೈಸೂರು ಪ್ರಾಂತ್ಯದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ನಿಸ್ವಾರ್ಥವಾಗಿ ದುಡಿದಿದ್ದಾರೆ. ಅವರ ಸರಳತೆ ಹಾಗೂ ಸಾಮಾಜಿಕ ಕಾಳಜಿಯ ಕಾರಣದಿಂದ ಮೈಸೂರಿನ ಜನತೆ ಅವರನ್ನು 'ತಾತಯ್ಯ' ಎಂದು ಪ್ರೀತಿಯಿಂದ ಕರೆದು ಗೌರವಿಸಿದೆ.

– ದಿವಂಗತ ಶ್ರೀ ಚಾಮರಾಜ ಒಡೆಯರ್, ಮೈಸೂರಿನ ಮಹಾರಾಜರು

ಜನತೆಯ ಹಿತಕ್ಕಾಗಿ ಜೀವಾವಧಿ ಸೇವೆ ಮಾಡಿರುವ ವೆಂಕಟಕೃಷ್ಣಯ್ಯನವರ ದೇಶಾಭಿಮಾನ, ಸಾರ್ವಜನಿಕ ಸೇವಾವೃತ್ತಿ ಮತ್ತು ಸ್ವಾರ್ಥತ್ಯಾಗ ಇವುಗಳ ಬಗ್ಗೆ ಗೌರವ ಅಭಿಮಾನವನ್ನು ಹೊಂದಿರುವವರ ಪೈಕಿ ನಾನು ಯಾರಿಗೂ ಹಿಂದಿಲ್ಲ. ಮೈಸೂರಿನಲ್ಲಿ ನನ್ನ ಅಧಿಕಾರ ಸೇವಾವಧಿಯಲ್ಲಿ ಅವರು ನನಗೆ ಇತ್ತ ಬೆಂಬಲದ ಕೃತಜ್ಞತಾಪೂರ್ವಕ ನೆನಪುಗಳು ನನ್ನಲ್ಲಿ ಎಂದಿಗೂ ಉಳಿಯುವುವು.

– ಎಂ. ವಿಶ್ವೇಶ್ವರಯ್ಯನವರು :

ಮೈಸೂರಿನ ಜನತೆಯಲ್ಲಿ ಸ್ವಾತಂತ್ರ್ಯದ ಬಗೆಗಿನ ಜಾಗೃತಿ ಹಾಗೂ ಸಾಮಾಜಿಕ ಅರಿವು ಮೂಡಿಸುವಲ್ಲಿ ಶ್ರೀ ವೆಂಕಟಕೃಷ್ಣಯ್ಯನವರ ಪಾತ್ರ ಅತ್ಯಂತ ಮಹತ್ವಪೂರ್ಣವಾದುದು. ಮೈಸೂರು ಪ್ರಾಂತ್ಯದ ಸಾಮಾಜಿಕ ಹಾಗೂ ಅರ್ಥಿಕ ಬೆಳವಣಿಗೆಗೆ ಅವರು ಅವಿಶ್ರಾಂತವಾಗಿ ದುಡಿದವರು.

– ಶ್ರೀ ವಿ.ವಿ. ಗಿರಿ, ಭಾರತದ ಮಾಜಿ ರಾಷ್ಟ್ರಪತಿಗಳು

The Anathalaya website