Mysore tatayya image

ತಾತಯ್ಯ ನವರ ಪರಿಚಯ :

ನಮ್ಮ ಕನ್ನಡ ನಾಡಿನಲ್ಲಿ ಜನಿಸಿ ಚಿರಕಾಲ ಪ್ರೀತಿ ಭಕ್ತಿಗಳಿಂದ ನಾಡು ನುಡಿಗಳ ಸೇವೆ ಮಾಡಿದ ಪ್ರಾತಃ ಸ್ಮರಣೀಯರಾದ ಮಹನೀಯರಲ್ಲಿ ಅತ್ಯುನ್ನತ ಶ್ರೇಣಿಗೆ ಸೇರಿದ ಪೂಜ್ಯರಲ್ಲೊಬ್ಬರು, ದಿವಂಗತ ವೃದ್ಧ ಪಿತಾಮಹ ದಯಾಸಾಗರ ಎಂ. ವೆಂಕಟಕೃಷ್ಣಯ್ಯ (ತಾತಯ್ಯ)ನವರು.

ಸ್ವಾತಂತ್ರ್ಯ ಪೂರ್ವದಲ್ಲೇ ದೇಶದ ಮಾದರಿ ಪ್ರಾಂತ್ಯವೆನ್ನಿಸಿಕೊಂಡಿದ್ದ, ದಕ್ಷಿಣಭಾರತದಲ್ಲೇ 'ಶಿಕ್ಷಣಕಾಶಿ' ಎಂಬ ಪ್ರಖ್ಯಾತಿಗೆ ಪಾತ್ರವಾಗಿದ್ದ ಮೈಸೂರು ನಗರವನ್ನು ಕಟ್ಟಿ ಬೆಳೆಸುವಲ್ಲಿ ಬದುಕನ್ನೇ ಸಮರ್ಪಿಸಿ ದುಡಿದ ಮಹನೀಯರಲ್ಲಿ ದಯಾಸಾಗರ ಎಂ.ವೆಂಕಟಕೃಷ್ಣಯ್ಯನವರ ಪಾತ್ರ ಬಲು ದೊಡ್ಡದು. ಮೈಸೂರಿನ ಪತ್ರಿಕೋದ್ಯಮ ಪಿತಾಮಹರಾಗಿ, ರಾಜಗುರು-ರಾಜನೀತಿಜ್ಞರಾಗಿ,ಆದರ್ಶ ಅಧ್ಯಾಪಕರಾಗಿ,ಸಾಮಾಜಿಕ ಕಾರ್ಯಕರ್ತರಾಗಿ, ಶ್ರೇಷ್ಠ ಸಾಹಿತಿಗಳಾಗಿ,ಸ್ತ್ರೀ ವಿದ್ಯಾಭ್ಯಾಸ ಪ್ರವರ್ತಕರಾಗಿ, ಅಸ್ಪೃಶ್ಯೋದ್ಧಾರಕರಾಗಿ, ಶಿಕ್ಷಣ ಸಂಸ್ಥೆಗಳ ಸ್ಥಾಪಕರಾಗಿ, ದೀನದುರ್ಬಲರ ದನಿಯಾಗಿ ಅವರು ಸಲ್ಲಿಸಿದ ಸೇವೆ ಅನುಪಮ ಮತ್ತು ಅವಿಸ್ಮರಣೀಯ. ಅದಕ್ಕಾಗಿಯೇ ಮೈಸೂರಿನ ನಾಗರೀಕರು ಅವರನ್ನು 'ತಾತಯ್ಯ' ನೆಂದು, ವೃದ್ಧಪಿತಾಮಹ, ದಯಾಸಾಗರ ಎಂದು ಕರೆದು ಗೌರವಿಸಿದ್ದು. ಮೈಸೂರಿನ ಇಂದಿನ ನಗರ ಬಸ್ ನಿಲ್ದಾಣದ ಎದುರಿಗಿರುವ 'ತಾತಯ್ಯ ಪಾರ್ಕ್' ನಲ್ಲಿ ಶ್ರೀ ವೆಂಕಟಕೃಷ್ಣಯ್ಯನವರ ಪ್ರತಿಮೆಯನ್ನು ಸ್ಥಾಪಿಸಿ ಮೈಸೂರು ಮಹಾಜನತೆ ಅವರಿಗೆ ಗೌರವ ಸಮರ್ಪಿಸಿದೆ.

ವೆಂಕಟಕೃಷ್ಣಯ್ಯನವರ ಬದುಕನ್ನು ಬರೆಯುವುದೆಂದರೆ ಅದು ಒಂದೆರಡು ಶತಮಾನದ ಮೈಸೂರಿನ ಇತಿಹಾಸ ಬರೆಯುವಷ್ಟೇ ಸಾಹಸದ ಕೆಲಸ. ಅವರ ಇಡೀ ಜೀವನವೂ ಪೂರಾ ಹೋರಾಟದ ಬದುಕೇ ಆಗಿತ್ತು. ಸಾಂಸಾರಿಕ ಜೀವನದಲ್ಲಿ ಆರಂಭದಿಂದಲೇ ಬಡತನ, ದಾರಿದ್ರ್ಯ, ದುಃಖ ಸಂಕಟಗಳ ಸರಮಾಲೆಯೇ ಅವರನ್ನು ಕಾಡಿಸಿದವು. ಅವರು ಎದೆಗುಂದದೆ ಅವೆಲ್ಲವನ್ನೂ ಧೀಮಂತರಾಗಿಯೇ ಎದುರಿಸಿದರು. ಜನಪರರ ದುಃಖ ಸಂಕಷ್ಟಗಳಿಗೆ ಅವರ ನಿರಕ್ಷರತೆಯೇ ಕಾರಣವೆಂಬುದನ್ನು ತೀರಾ ತಾರುಣ್ಯದಲ್ಲಿಯೇ ಕಂಡುಕೊಂಡ ವೆಂಕಟಕೃಷ್ಣಯ್ಯ ಶಾಲೆಗಳನ್ನು ಸ್ಥಾಪಿಸುವುದರ ಮೂಲಕ ಅಂದಿನ ಮೈಸೂರು ನಗರದಲ್ಲಿ ವಿದ್ಯಾಪ್ರಸಾರದ ಚಳುವಳಿಯನ್ನೇ ಕೈಗೊಂಡರು. ಇಂದಿನ ಪ್ರಖ್ಯಾತ ವಿದ್ಯಾಸಂಸ್ಥೆಗಳಾದ ಮರಿಮಲ್ಲಪ್ಪ ಶಾಲೆ,ಮಹಾರಾಣಿ ಕಾಲೇಜ್, ಶಾರದಾವಿಲಾಸ ಕಾಲೇಜ್, ಸದ್ವಿದ್ಯಾ ಪಾಠಶಾಲೆ ಇವೆಲ್ಲಾ ತಾತಯ್ಯನವರ ಕೈಗೂಸುಗಳು.ಶಿಕ್ಷಣಕ್ಕೆ ಅಷ್ಟೇನು ಮಹತ್ವವೂ, ಅವಕಾಶವೂ ಇರದಿದ್ದ ಕಾಲದಲ್ಲಿ ತಾವೇ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ,ಸ್ವತಃ ೩೫ ವರ್ಷ ಅಧ್ಯಾಪಕರಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರಜ್ಞಾನದ ಬೆಳಕು ನೀಡಿದರು. ದಟ್ಟದರಿದ್ರರಾದ, ತಬ್ಬಲಿಗಳಾದ ವಿದ್ಯಾರ್ಥಿಗಳಿಗಾಗಿ ಅನಾಥಾಲಯವನ್ನು ಸ್ಥಾಪಿಸಿದರು. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದನ್ನು ಬಹುತೇಕರು ವಿರೋಧಿಸುತ್ತಿದ್ದ ಕಾಲದಲ್ಲಿ ಸ್ವತಃ ತಾವೇ ಹೆಣ್ಣುಮಕ್ಕಳಿಗಾಗಿ ಶಾಲೆ ಆರಂಭಿಸಿದರು. ವಿಧವಾ ವಿವಾಹ ಏರ್ಪಡಿಸಿದರು. ವಿಧವೆಯರಿಗಾಗಿ ವೃತ್ತಿಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಮನೆ ತಪ್ಪಿದ, ತಬ್ಬಲಿ ಹೆಣ್ಣುಮಕ್ಕಳು ಪರಾಶ್ರಯಕ್ಕೆ ಬೀಳುವುದನ್ನು ತಪ್ಪಿಸಲು ಅವರಿಗಾಗಿ ಒಂದು ಉದ್ಯೋಗ ಕೇಂದ್ರವನ್ನು ಸ್ಥಾಪಿಸಿದರು.ಅಸ್ಪೃಶ್ಯರಿಗಾಗಿ ಶಾಲೆಗಳನ್ನು ಆರಂಭಿಸಿದರಲ್ಲದೆ ಅವರಿಗೆ ವೃತ್ತಿಶಿಕ್ಷಣವನ್ನು ಕಲಿಸುವ ಏರ್ಪಾಟು ಮಾಡಿದರು. ಗಾಂಧೀಜಿ ಹರಿಜನ ಸಮಸ್ಯೆಯನ್ನು ಕೈಗೆತ್ತಿಕೊಳ್ಳುವ ಎಷ್ಟೋ ಮೊದಲು ಹರಿಜನರಿಗಾಗಿ ಹಾಸ್ಟೆಲುಗಳನ್ನು ತಾವೇ ತೆರೆದು ಮೈಸೂರು ಸಂಸ್ಥಾನದ ನಾನಾ ಕಡೆ ಅವರಿಗಾಗಿ ವೃತ್ತಿ ಶಿಕ್ಷಣ ಶಾಲೆಗಳನ್ನು ಸರ್ಕಾರದಿಂದ ತೆರೆಸಿದ ಕೀರ್ತಿ ಅವರದು. ಅಶಕ್ತ ಪ್ರ್ರಾಣಿಗಳಿಗಾಗಿ ಪಿಂಜರಾಪೋಲನ್ನು ಸ್ಥಾಪಿಸಲು ನೆರವಾದರು.'ಮೈಸೂರು ಪತ್ರಿಕೋದ್ಯಮ ಪಿತಾಮಹ'ರಾಗಿ ಹತ್ತಾರು ಪತ್ರಿಕೆಗಳನ್ನು ಆರಂಭಿಸಿ ಜನಜಾಗೃತಿ ಉಂಟುಮಾಡಿದರು. ಪ್ರಜಾಪ್ರತಿನಿಧಿ ಸಭೆ, ನ್ಯಾಯವಿಧಾಯಕ ಸಭೆ, ಪೌರಸಭೆ ಮತ್ತು ಎಕನಾಮಿಕ್ ಕಾನ್ಫರೆನ್ಸ್ ಗಳಲ್ಲಿ ಸದಸ್ಯರಾಗಿ ಪ್ರಜೆಗಳ ಪ್ರತಿನಿಧಿಯಾಗಿ ವಿರೋಧಪಕ್ಷವಾಗಿ ಜನಪರವಾಗಿ ದುಡಿದರು.ಸುಮಾರು ೫೦ ವರ್ಷಕ್ಕೂ ಮೇಲ್ಪಟ್ಟು ಸಂಪೂರ್ಣ ಸಮಾಜದ ಏಳಿಗೆಗಾಗಿ ಅಹರ್ನಿಶಿ ಸೇವೆ ಸಲ್ಲಿಸಿದರು. ತಮ್ಮ ಪತ್ರಿಕಾ ವೃತ್ತಿಯಿಂದಾಗಿ, ಸಾರ್ವಜನಿಕ ಜೀವನದಿಂದಾಗಿ ಅವರು ತಮ್ಮ ಮನೆ, ಹೊಲ ಎಲ್ಲ ಮಾರಿಕೊಳ್ಳಬೆಕಾಯಿತು. ಆದರೆ ಯಾವುದರಿಂದಲೂ ಧೃತಿಗೆಡದೆ,ಅನ್ಯಾಯದೊಂದಿಗೆ ರಾಜಿಮಾಡಿಕೊಳ್ಳದೆ ಬಡವರ ನಿಸ್ಸಹಾಯಕರ ಸೇವೆಯನ್ನು ಕೊನೆಯುಸಿರೆಳೆವವರೆಗೂ ವ್ರತವಾಗಿ ಸ್ವೀಕರಿಸಿ ಸಮಾಜಕ್ಕಾಗಿ ಧೀಮಂತ ಸೇವೆ ಸಲ್ಲಿಸಿದ ಶ್ರೇಷ್ಠ ಕರ್ಮಯೋಗಿ ಶ್ರೀ ಎಂ.ವೆಂಕಟಕೃಷ್ಣಯ್ಯನವರು.

೧೮೪೪ ರಲ್ಲಿ ಹೆಗ್ಗಡದೇವನಕೋಟೆಯ ಮಗ್ಗೆ ಗ್ರಾಮದಲ್ಲಿ ಜನಿಸಿದ ವೆಂಕಟಕೃಷ್ಣಯ್ಯ ಬಾಲ್ಯದಿಂದಲೇ ಬಡತನವನ್ನು ಬಳುವಳಿಯಾಗಿ ಪಡೆದಿದ್ದರು. ಅವರು ಓದಿದ್ದು ಮೆಟ್ರಿಕ್ಯುಲೇಶನ್ ಅಷ್ಟೆ. ಆದರೂ ವಿದ್ವತ್ಪೂರ್ಣ ಶಿಕ್ಷಕರಾಗಿ ಮರಿಮಲ್ಲಪ್ಪ ಶಾಲೆ,ಸದ್ವಿದ್ಯಾ ಶಾಲೆಗಳಲ್ಲಿ ಸುಮಾರು ೪೦ ವರ್ಷಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಸಾಮಾಜಿಕ ಜಾಗೃತಿಗಾಗಿ ಪತ್ರಿಕೋದ್ಯಮವನ್ನು ಪ್ರಾರಂಭಿಸಿದರು. ಕನ್ನಡದಲ್ಲಿ ಸ್ವತಂತ್ರ ಪತ್ರಿಕೆಗಳೇ ಇಲ್ಲದಿದ್ದ ಕಾಲದಲ್ಲಿ ಸಾಧ್ವಿ, ಉದಯ ಚಿಂತಾಮಣಿ,ವಿದ್ಯಾದಾಯಿನಿ,ವೃತ್ತಾಂತ ಚಿಂತಾಮಣಿ, ಹಿತಭೋದಿನಿ, ಸಂಪದಭ್ಯುದಯ ಮುಂತಾದ ಕನ್ನಡ ಪತ್ರಿಕೆಗಳನ್ನು, Wealth of Mysore, Mysore Patriot, The civil and social journal, Nature cure ಮುಂತಾದ ಇಂಗ್ಲೀಷ್ ಪತ್ರಿಕೆಗಳನ್ನು ನಡೆಸಿ ಜನಜಾಗೃತಿಯನ್ನುಂಟುಮಾಡಿದರು. ಜನಪರವಾಗಿದ್ದ ಹಾಗೂ ಭ್ರಷ್ಟ ಅಧಿಕಾರಿಗಳಿಗೆ ಸಿಂಹ ಸ್ವಪ್ನವಾಗಿದ್ದ ಕಾರಣಕ್ಕೆ ಇವರ ಅನೇಕ ಪತ್ರಿಕೆಗಳು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ಮುಟ್ಟುಗೋಲಾದವು. ತಮ್ಮ ಪತ್ರಿಕೆಗಳ ಮೂಲಕ ನಿರ್ಭಯವಾಗಿ ಆಳುವವರ ಅನ್ಯಾಯಗಳನ್ನು ಹೊರಹಾಕಿ ಸಾರ್ವಜನಿಕ ಸಭೆಗಳನ್ನು ಏರ್ಪಡಿಸಿ ಜಾಗೃತಿಯನ್ನು ಉಂಟುಮಾಡುತ್ತಿದ್ದ ವೆಂಕಟಕೃಷ್ಣಯ್ಯನವರು ಆ ಮೂಲಕ 'ಕನ್ನಡ ಪತ್ರಿಕಾ ಪಿತಾಮಹ' ಎಂಬ ಕೀರ್ತಿಗೆ ಭಾಜನರಾದರು. ಜೊತೆಗೆ ಸಾಹಿತಿಗಳೂ, ವಿದ್ವಾಂಸರೂ ಆಗಿದ್ದ ತಾತಯ್ಯ ಅರ್ಥಸಾಧನ, ದೇಶಾಭಿಮಾನ,ವಿದ್ಯಾರ್ಥಿ ಕರಭೂಷಣ, ಆರೋಗ್ಯಸಾಧನ ಪ್ರಕಾಶಿಕೆ, ಹರಿಶ್ಚಂದ್ರ ಚರಿತ್ರೆ ಮುಂತಾದ ವಿದ್ವತ್ಪೂರ್ಣ ಗ್ರಂಥಗಳನ್ನು ಬರೆದಿದ್ದಾರೆ. ಕನ್ನಡ ಸಾಹಿತ್ಯ ಪರಂಪರೆಗೆ ಗಣನೀಯ ಕೊಡುಗೆ ಸಲ್ಲಿಸಿರುವ ಶ್ರೀ ವೆಂಕಟಕೃಷ್ಣಯ್ಯನವರನ್ನು ೧೯೨೨ ರಲ್ಲಿ ದಾವಣಗೆರೆಯಲ್ಲಿ ನಡೆದ ೮ ನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆರಿಸಿ ಗೌರವ ಅರ್ಪಿಸಲಾಯಿತು.

ವಿಶ್ವವಿಖ್ಯಾತ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿ ಕನ್ನಡ ನಾಡಿಗೆ ಅದ್ವಿತೀಯ ಕೊಡುಗೆ ನೀಡುವಲ್ಲಿ ತಾತಯ್ಯನವರ ಪಾತ್ರ ಬಹು ಮುಖ್ಯವಾದುದು. ಆಗ ಬೊಂಬಾಯಿ ಸರ್ಕಾರದಲ್ಲಿ ಚೀಫ್ ಇಂಜಿನಿಯರ್ ಆಗಿದ್ದ ವಿಶ್ವೇಶ್ವರಯ್ಯನವರ ಬುದ್ದಿವಂತಿಕೆ, ಕಾರ್ಯದಕ್ಷತೆಗಳು ಅವರದೇ ನಾಡಾದ ಮೈಸೂರಿಗೇ ಲಭಿಸಬೇಕೆಂದು ಮಹಾರಾಜರಿಗೆ ಪತ್ರ ಬರೆದು, ಅನುಮತಿ ಪಡೆದು ವಿಶ್ವೇಶ್ವರಯ್ಯನವರು ಮೈಸೂರಿಗೆ ಮರಳುವಂತೆ ಮನವೊಲಿಸಿ ಕರೆತಂದವರು ತಾತಯ್ಯ. ಸ್ವಾಮಿ ವಿವೇಕಾನಂದರು, ವಿಶ್ವವಿಖ್ಯಾತ ಕವಿ ರವೀಂದ್ರನಾಥ ಟ್ಯಾಗೋರ್ ರು, ಮಹಾತ್ಮಾ ಗಾಂಧೀಜಿ, ಜವಾಹರಲಾಲ್ ನೆಹರು ಮುಂತಾದ ಮಹನೀಯರು ತಾತಯ್ಯನವರನ್ನು ಭೇಟಿಯಾಗಿ ಅವರ ಸಮಾಜಕಾರ್ಯಗಳನ್ನು ಪ್ರಶಂಶಿಸಿದ್ದಾರೆ.೧೯೨೭ರಲ್ಲಿ ಅನಾಥಾಲಯಕ್ಕೆ ಭೇಟಿ ನೀಡಿದ್ದ ಗಾಂಧೀಜಿಯವರು ವೆಂಕಟಕೃಷ್ಣಯ್ಯನವರನ್ನು ಆತ್ಮೀಯತೆಯಿಂದ ಆಲಂಗಿಸಿಕೊಂಡು 'ಮೈಸೂರಿನ ಭೀಷ್ಮ' ಎಂದು ಸಂಭೋಧಿಸಿ ಗೌರವಿಸಿದ್ದಾರೆ. 'ಸುಖದಲ್ಲಿ ಕಷ್ಟದಲ್ಲಿ ಅಚಲವಾಗಿ ನಿಂತು ರಾಷ್ಟ್ರದ ಏಳಿಗೆಗಾಗಿ ದುಡಿದ ರಾಷ್ಟ್ರ ವೀರರೆಂದರೆ ಪೂಜ್ಯ ವೆಂಕಟಕೃಷ್ಣಯ್ಯನವರು' ಎನ್ನುತ್ತಾರೆ ಅವರ ಶಿಷ್ಯರು, ಒಡನಾಡಿಗಳಲ್ಲೊಬ್ಬರಾದ ನಾಡಿನ ಶ್ರೇಷ್ಟ ಕವಿ ಡಿ.ವಿ.ಜಿಯವರು.

ವೆಂಕಟಕೃಷ್ಣಯ್ಯನವರು ೧೮೯೬ ರಲ್ಲಿ ಅನಾಥ ಹಾಗೂ ಬಡಮಕ್ಕಳಿಗಾಗಿ ಸ್ಥಾಪಿಸಿದ 'ಅನಾಥಾಲಯ' ಸಾವಿರಾರು ಬಡಮಕ್ಕಳಿಗೆ ಅನ್ನ ಆಶ್ರಯ ನೀಡಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಅವರು ಪ್ರೇರಣೆ ನೀಡಿ ಕಟ್ಟಿ ಬೆಳೆಸಿದ ಮಹಾರಾಣಿ ಶಾಲೆ , ಮರಿಮಲ್ಲಪ್ಪ ಶಾಲೆ, ಸದ್ವಿದ್ಯಾ ಹಾಗೂ ಶಾರದಾವಿಲಾಸ ಶಾಲೆಗಳು ಇಂದು ನಾಡಿನ ಪ್ರಖ್ಯಾತ ವಿದ್ಯಾಸಂಸ್ಥೆಗಳಾಗಿವೆ. ಲಕ್ಷಾಂತರ ಜನರಿಗೆ ಅಕ್ಷರಜ್ಞಾನದ ಬೆಳಕು ನೀಡುತ್ತಿವೆ. ತಾತಯ್ಯನವರು ಮಾಡಿರುವ ಮಹತ್ಕಾರ್ಯಗಳೆಂದರೆ ಅಷ್ಟಿಷ್ಟಲ್ಲ; ಪತ್ರಿಕಾ ವೃತ್ತಿಯಲ್ಲಿ ಅವರದು ಬ್ರಹ್ಮಪಟ್ಟ. ವಿದ್ಯಾಭಿವೃದ್ಧಿಯಲ್ಲಿ ಅವರದು ಸರಸ್ವತೀ ಪೀಠ. ಬಡ ಬಗ್ಗರ ಸೇವೆಯನ್ನು ಗಣನೆಗೆ ತೆಗೆದುಕೊಂಡರೆ ದರಿದ್ರರ ರಕ್ಷಕನಾದ ಶ್ರೀಮನ್ನಾರಾಯಣ. ರಾಜಕೀಯವನ್ನು ತೆಗೆದುಕೊಂಡರೆ ಮೈಸೂರಿನ ರಾಜಕೀಯದ ಆದಿಪುರುಷ. ಇಂಥಾ ಮಹಾತ್ಮರ ವಿಚಾರವಾಗಿ ಎಷ್ಟು ಹೇಳಿದರೂ ಕಡಿಮೆಯೇ. ಹರಿಜನೋದ್ಧಾರದಿಂದ ಹಿಡಿದು ಎಲ್ಲಾ ಸಾರ್ವಜನಿಕ ರಂಗದಲ್ಲಿ ಸೇವೆಗೈದಿರುವ ಅವರದು ಬಹುಮುಖೀ ವ್ಯಕ್ತಿತ್ವ.

ಕನ್ನಡ ಪತ್ರಿಕೋದ್ಯಮವು ಇನ್ನೂ ಕಣ್ಣು ಬಿಡುತ್ತಿದ್ದ ಕಾಲದಲ್ಲೇ, ೧೨೫ ವರ್ಷಗಳ ಹಿಂದೆಯೇ ಧೈರ್ಯದಿಂದ ಪತ್ರಿಕಾ ವ್ಯವಸಾಯಕ್ಕೆ ತೊಡಗಿದವರು ತಾತಯ್ಯನವರು. ಪ್ರಾಮಾಣಿಕತೆಯಿಂದ ಪತ್ರಿಕೋದ್ಯಮದ ತತ್ವಗಳನ್ನು ಪಾಲಿಸಿಕೊಂಡು ಸಾರ್ವಜನಿಕ ಸೇವೆ ಮಾಡಿದ ಅನೇಕರಲ್ಲಿ ತಾತಯ್ಯನವರಿಗೆ ಅಗ್ರಸ್ಥಾನ ಸಲ್ಲುವುದು. ಉದಾತ್ತ ಧ್ಯೇಯಗಳನ್ನಿಟ್ಟುಕೊಂಡು ಕನ್ನಡ ಪತ್ರಿಕೋದ್ಯಮದ ಮೂಲಕ ಸಾರ್ವಜನಿಕ ಸೇವೆ ಮಾಡಿದ ತಾತಯ್ಯನವರನ್ನು 'ಕನ್ನಡ ಪತ್ರಿಕೋದ್ಯಮದ ಪಿತಾಮಹ' ಎಂದು ಕರೆದು ಅವರನ್ನು ಸ್ಮರಿಸಿಕೊಳ್ಳಲಾಗಿದೆ.

ವಿದ್ಯಾಕ್ಷೇತ್ರದಲ್ಲಿ ಅವರ ಸಾಧನೆ ಅಪಾರ; ಒಂದು ಶತಮಾನಕ್ಕೂ ಮಿಕ್ಕಿ ಸೇವೆಗೈದು ಇಂದಿಗೂ ರಾಜ್ಯದ ಮುಂಚೂಣಿಯಲ್ಲಿರುವ ಸದ್ವಿದ್ಯಾ, ಶಾರದಾವಿಲಾಸ, ಮರಿಮಲ್ಲಪ್ಪ ಹಾಗೂ ಮಹಾರಾಣಿ ಬಾಲಿಕಾ ಶಾಲೆಗಳು ಅವರ ದೂರದರ್ಶಿತ್ವದ ಫಲ. ಈ ಸಂಸ್ಥೆಗಳ ಸ್ಥಾಪನೆ ಅಥವಾ ಅಭಿವೃದ್ಧಿಯಲ್ಲಿ ತಾತಯ್ಯನವರ ಪಾತ್ರ ಹಿರಿದಾದ್ದು. ಇನ್ನು ದೀನದಲಿತರ ಉದ್ಧಾರಕರಾಗಿಯಂತೂ ಅವರ ಕೊಡುಗೆ ಅದ್ವಿತೀಯ. ಕಳೆದ ೧೨೦ ವರ್ಷಗಳಿಂದ ಅನಾಥ ವಿದ್ಯಾರ್ಥಿಗಳನ್ನು ಪೋಷಿಸಿ ಇಂದಿಗೂ 'ತಾತಯ್ಯನವರ ಅನಾಥಾಲಯ'ವೆಂದೇ ಖ್ಯಾತವಾಗಿರುವ ಮೈಸೂರು ಅನಾಥಾಲಯ ಅವರ ತ್ಯಾಗಕ್ಕೆ ಒಂದು ಜೀವಂತ ಸ್ಮಾರಕ. ತಮ್ಮ ೯೦ನೇ ವರ್ಷದಲ್ಲಿ ಅವರು ನಿಧನ ಹೊಂದುವಾಗ ಅವರು ಆಡಿದ ಕೊನೆಯ ಮಾತು 'ಅನಾಥಾಲಯವನ್ನು ಚೆನ್ನಾಗಿ ನಡೆಸಿಕೊಂಡು ಹೋಗಿ' ಎಂಬುದಾಗಿತ್ತು!. ಮಹಾತ್ಮ ಗಾಂಧಿಯವರಿಗಿಂತ ಮುಂಚೆಯೇ ಹಳೆಯ ಮೈಸೂರು ಪ್ರಾಂತ್ಯದಲ್ಲಿ ಹರಿಜನರ ಸೇವೆಗಾಗಿ 'ಪಂಚಮ ಎಜುಕೇಶನ್ ಲೀಗ್' ಸ್ಥಾಪಿಸಿ ಸುಮಾರು ೧೯ ಶಾಲೆಗಳು ಹಾಗೂ ಅವರ ಜೀವನೋಪಾಯಕ್ಕಾಗಿ ಅನೇಕ ವೃತ್ತಿ ಶಾಲೆಗಳು ಹಾಗೂ ಸಹಕಾರ ಬ್ಯಾಂಕೊಂದನ್ನು ಸ್ಥಾಪಿಸಿದ್ದರು!. ಸುಮಾರು ೬೦ ವರ್ಷಗಳ ಕಾಲ ಅವರು ಸಾರ್ವಜನಿಕ ಜೀವನಕ್ಕಾಗಿ ವ್ಯವಸ್ಥೆಯಲ್ಲೂ ಕೂಡ ಪ್ರಜೆಗಳ ಪಕ್ಷ ವಹಿಸಿ ಏಕಾಂಗಿ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ರಾಜಕೀಯ ಗುರುವಾದ ದಿ. ರಂಗಾಚಾರ‍್ಲು ಅವರು 'ಪ್ರಜಾ ಪ್ರತಿನಿಧಿ ಸಭೆ'ಯನ್ನು ಸ್ಥಾಪಿಸಿದರೂ ಅದರ ವಿಕಾಸದಲ್ಲಿ ಶ್ರಮಿಸಿ ಪ್ರಜಾಪ್ರಭುತ್ವದ ತಳಪಾಯವನ್ನು ಹಾಕಿಕೊಟ್ಟವರು ತಾತಯ್ಯನವರೇ. ಇದರಿಂದಾಗಿ ಅವರು ಬಹುತೇಕ ಎಲ್ಲ ದಿವಾನರ ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು; ಇದು ಅವರ ವೃತ್ತಿಯ ಮೇಲೂ ಪರಿಣಾಮ ಬೀರಿತು. ಇದ್ಯಾವುದಕ್ಕೂ ಅಂಜದೆ ಸ್ಥಿತಪ್ರಜ್ಞರಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀರರು ತಾತಯ್ಯ. ಅವರಿಂದ ಪ್ರಭಾವಿತರಾಗಿ ತಾತಯ್ಯನವರನ್ನು ತಮ್ಮ ರಾಜಕೀಯ ಗುರುವಾಗಿ ಸ್ವೀಕರಿಸಿದ ಖ್ಯಾತನಾಮರು ನೂರಾರು ಜನ.

ಸಮಾಜ ಸುಧಾರಕರಾಗಿ ಅವರು ಅಸ್ಪೃಶ್ಯತೆ, ಜಾತಿ ಪದ್ಧತಿಗಳನ್ನು ದೂರ ಮಾಡಲು ದುಡಿದುದಲ್ಲದೇ ಮಹಿಳಾ ವಿದ್ಯಾಭ್ಯಾಸ ಹಾಗೂ ವಿಧವಾ ವಿವಾಹಗಳಿಗೆ ಪ್ರೋತ್ಸಾಹ ನೀಡಿದುದು ಅಂದಿನ ಸಾಮಾಜಿಕ ವಾತಾವರಣದಲ್ಲಿ ಕ್ರಾಂತಿಕಾರಕವಾದುದೆಂದೇ ಹೇಳಿದರೆ ಅತಿಶಯೋಕ್ತಿಯಲ್ಲ. ಒಬ್ಬ ಆದರ್ಶ ಶಿಕ್ಷಕರಾಗಿ ಅವರು ಒಂದು ತಲೆಮಾರಿನವರಲ್ಲಿ ಬದ್ಧತೆ ಹಾಗೂ ಆದರ್ಶವನ್ನು ಬೆಳೆಸಿದರು. ಕಾಲಕ್ರಮದಲ್ಲಿ ಅವರ ಅನೇಕ ಶಿಷ್ಯರು ನ್ಯಾಯಾಂಗ, ವೈದ್ಯರಂಗ, ರಾಜಕೀಯ, ಪತ್ರಿಕೋದ್ಯಮ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿದರು.

ದೇಶ ಪ್ರೇಮದಿಂದಲೂ, ಜನಪರ ಕಾಳಜಿಯಿಂದಲೂ ಅನೇಕ ಕ್ಷೇತ್ರಗಳಲ್ಲಿ ತಮ್ಮ ಬಹುಮುಖಿ ಸೇವೆಯಿಂದಾಗಿ ಅವರು ವಿದ್ಯಾವಂತ ಜನರಿಂದ 'ವೃದ್ಧ ಪಿತಾಮಹ', 'ದಯಾ ಸಾಗರ' ಮತ್ತು ಸಾಮಾನ್ಯ ಜನತೆಯಿಂದ 'ತಾತಯ್ಯ' ಎಂದು ಅನ್ವರ್ಥಕವಾಗಿ ಕರೆಯಿಸಿಕೊಂಡರು. ಮುಂದಿನ ಪೀಳಿಗೆಗಾಗಿ ತಮ್ಮ ಕೆಲಸದ ಫಲಗಳನ್ನು ಬಿಟ್ಟು, ಅವರು ತಮ್ಮನ್ನು ಎಂದೆಂದಿಗೂ ನೆನೆಸಿಕೊಂಡು ಅನುಸರಿಸಬೇಕಾದ ಆದರ್ಶಗಳನ್ನು ಬಿಟ್ಟು ಹೋಗಿರುವುದೇ ಶ್ರೀ ವೆಂಕಟಕೃಷ್ಣಯ್ಯನವರ ಹೆಸರು ಎಂದೆಂದಿಗೂ ಈ ದೇಶದ ಜನರಿಗೆ ಪ್ರಿಯವಾಗಲು ಕಾರಣವಾಗಿದೆ. ತಾತಯ್ಯನವರು ಬರಿಯ ಒಬ್ಬ ವ್ಯಕ್ತಿಯಲ್ಲ; ಮೈಸೂರು (ಇಂದಿನ ಕರ್ನಾಟಕ) ಒಂದು ಪ್ರತೀಕ ಮತ್ತು ಒಂದು ಸಂಸ್ಥೆ.

ವೆಂಕಟಕೃಷ್ಣಯ್ಯನವರಂತಹ ಅಪ್ರತಿಮ ದೇಶಭಕ್ತ, ಧೀಮಂತ ರಾಜಕಾರಣಿ, ಪ್ರಾಮಾಣಿಕ ಪ್ರಜಾ ಸೇವಕ, ಸಾಮಾಜಿಕ ಜಾಗೃತಿಯ ಹರಿಕಾರ, ಲೋಕಹಿತಚಿಂತಕನ ಜೀವನ-ಸಾಧನೆಗಳ ಅಧ್ಯಯನ ನಮ್ಮೆಲ್ಲರ ಬದುಕಿಗೆ ದಾರಿದೀಪ,ಒಂದು ಮಹತ್ತರ ಮಾರ್ಗದರ್ಶಿ.

ತಾತಯ್ಯನವರ ಜೀವನದ ಮುಖ್ಯ ಘಟನೆಗಳು

೧೮೪೪ ಮಗ್ಗೆಯಲ್ಲಿ ಜನನ.
೧೮೫೪ ತಂದೆಯವರ ಮರಣ.
೧೮೫೪-೬೭ ಮೈಸೂರು ನಗರಕ್ಕೆ ಬಂದುದು. ಮೈಸೂರಿನಲ್ಲಿ ವಿದ್ಯಾಭ್ಯಾಸ. ಮೆಟ್ರಿಕ್ಯುಲೇಶನ್ ಪರೀಕ್ಷೆ ತೇರ್ಗಡೆ.
೧೮೬೮ ಮುಮ್ಮಡಿ ಕೃಷ್ಣರಾಜ ಒಡೆಯರ ನಿಧನ. ಸಿ. ರಂಗಾಚಾರ್ಲುರವರು ಅರಮನೆ ಕಂಟ್ರೋಲರಾಗಿ ನೇಮಕವಾದುದು.
೧೮೭೫ ರಂಗಾಚಾರ್ಲುರೊಡನೆ ವೆಂಕಟಕೃಷ್ಣಯ್ಯನವರ ಪ್ರಥಮ ಭೇಟಿ.
೧೮೭೬ ಮರಿಮಲ್ಲಪ್ಪ ಸ್ಕೂಲಿನಲ್ಲಿ ದ್ವಿತೀಯ ಉಪಾಧ್ಯಾಯರಾಗಿ ಸೇರಿದ್ದು.
೧೮೭೮ ಇದೇ ಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾಗಿ ನೇಮಕವಾದುದು.
೧೮೮೧ ಮೈಸೂರು ರೆಂಡಿಷನ್ (ಬ್ರಿಟಿಷ್ ಸರ್ಕಾರ ಶ್ರೀಚಾಮರಾಜ ಒಡೆಯರಿಗೆ ಅಧಿಕಾರ ಹಿಂತಿರುಗಿ ಕೊಟ್ಟುದು). ರಂಗಾಚಾರ್ಲುರವರು ಪ್ರಥಮ ದಿವಾನರಾಗಿ ನೇಮಕವಾದುದು. ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸ್ಥಾಪನೆ.
೧೮೮೩ ರಂಗಾಚಾರ್ಲುರವರ ಮರಣ. ಕೆ.ಶೇಷಾದ್ರಿಅಯ್ಯರ್ ದಿವಾನರಾಗಿ ನೇಮಕವಾದುದು. ಎಂ.ಎಸ್. ಪುಟ್ಟಣ್ಣನವರು ಹಿತಬೋಧಿನಿ ಎಂಬ ಪತ್ರಿಕೆಯನ್ನು ಸ್ಥಾಪಿಸಿದುದು.
೧೮೮೪ ವೆಂಕಟಕೃಷ್ಣಯ್ಯನವರು ಹಿತಬೋಧಿನಿಯನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡು ಸಂಪಾದಕರಾದುದು.
೧೮೮೫ ಸ್ಟ್ಯಾಂಡಿಂಗ್ ಕಮಿಟಿ ಸ್ಥಾಪಿಸಬೇಕೆಂದು ವೆಂಕಟಕೃಷ್ಣಯ್ಯನವರು ಮತ್ತು ಇತರರು ದಿವಾನ್ ಶೇಷಾದ್ರಿ ಅಯ್ಯರ್‌ರವರನ್ನು ಪ್ರಾರ್ಥಿಸಿದುದು.
೧೮೯೦ ಸ್ಟ್ಯಾಂಡಿಂಗ್ ಕಮಿಟಿ ಆರಂಭವಾದುದು. ವಿದ್ಯಾದಾಯಿನಿ ಬಂದ ಮೇಲೆ, ಹಿತಬೋಧಿನಿ ನಿಲ್ಲಿಸಿದುದು. ವೆಂಕಟಕೃಷ್ಣಯ್ಯನವರು ವೃತ್ತಾಂತ ಚಿಂತಾಮಣಿ ಇಂಬ ಕನ್ನಡ ವಾರಪತ್ರಿಕೆಯನ್ನೂ, ಮೈಸೂರು ಹೆರಾಲ್ಡ್ ಇಂಬ ಇಂಗ್ಲಿಷ್ ವಾರಪತ್ರಿಕೆಯನ್ನೂ ಸ್ಥಾಪಿಸಿದುದು.
೧೮೯೧ ಮೈಸೂರು ಮೈಸೂರಿನವರಿಗೆ (ಮೈಸೂರ್ ಫಾರ್ ಮೈಸೂರಿಯನ್ಸ್) ಎಂಬ ಹೋರಾಟದ ಆರಂಭ.
೧೮೯೨ ಸ್ಟ್ಯಾಂಡಿಂಗ್ ಕಮಿಟಿಯ ಕಾರ‍್ಯದರ್ಶಿಯಾಗಿ ವೆಂಕಟಕೃಷ್ಣಯ್ಯನವರು ಚುನಾಯಿತರಾದುದು.
೧೮೯೨-೯೫ ಸ್ಟ್ಯಾಂಡಿಂಗ್ ಕಮಿಟಿಗಾಗಿ ಹೋರಾಟ.
೧೮೯೪ ಶ್ರೀಚಾಮರಾಜ ಒಡೆಯರ ಮರಣ.
೧೮೯೪-೯೫ ರೀಜೆಂಟ್ ಪದವಿಗಾಗಿ ಹೋರಾಟ.
೧೮೯೫ ಶ್ರೀಮನ್ ಮಹಾರಾಣಿ ವಾಣಿವಿಲಾಸ ಸನ್ನಿಧಾನದವರು ರೀಜೆಂಟರಾಗಿ ನೇಮಕವಾದುದು.
೧೮೯೭ ಶ್ರೀಜಯಲಕ್ಷಮ್ಮಣ್ಣಿಯವರ ವಿವಾಹ. ಈ ವಿವಾಹ ಸಮಯದಲ್ಲಿ ಹಳೇ ಅರಮನೆಗೆ ಬೆಂಕಿ ಬಿದ್ದುದು.
೧೮೯೭-೯೮ ದಿವಾನ್ ಶೇಷಾದ್ರಿ ಅಯ್ಯರ್ರವರಿಗೆ ಅನಾರೋಗ್ಯ.
೧೮೯೮ ಟಿ.ಆರ್.ಎ. ತಂಬೂಚೆಟ್ಟಿ ಆಕ್ಟಿಂಗ್ ದಿವಾನರಾದುದು. ಸಂಸ್ಥಾನಕ್ಕೆ ಮೊದಲನೇ ಪ್ಲೇಗ್ ಪ್ರವೇಶ.
೧೮೯೯ ವೆಂಕಟಕೃಷ್ಣಯ್ಯನವರು ಸಾಧ್ವಿ ಕನ್ನಡ ವಾರಪತ್ರಿಕೆ ಸ್ಥಾಪಿಸಿದುದು. ದಿವಾನ್ ಶೇಷಾದ್ರಿ ಅಯ್ಯರ್‌ರವರಿಗೆ ಪುನಃ ಅಸ್ವಸ್ಥತೆ.
೧೯೦೦ ದಿವಾನ್ ಶೇಷಾದ್ರಿ ಅಯ್ಯರ್‌ರವರು ರಜ ಪಡೆದುದು. ಶೇಷಾದ್ರಿಅಯ್ಯರ್‌ರವರು ದಿವಾನ್ ಪದವಿಯಿಂದ ನಿವೃತ್ತರಾದುದು.
೧೯೦೧ ಶೇಷಾದ್ರಿ ಅಯ್ಯರ್ ರವರ ಮರಣ. ಪಿ.ಎನ್. ಕೃಷ್ಣಮೂರ್ತಿ ದಿವಾನರಾದುದು.
೧೯೦೨ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರಿಗೆ ರಾಜ್ಯಾಧಿಕಾರ ಬಂದುದು.
೧೯೦೪ ದಿವಾನ್ ಕೃಷ್ಣಮೂರ್ತಿಗಳು ಶ್ರೀ ಶ್ರೀನಿವಾಸ ಅಯ್ಯಂಗಾರ್‌ರವರನ್ನು ಪ್ರಜಾಪ್ರತಿನಿಧಿಸಭೆಯಿಂದ ಹೊರಗೆ ಹಾಕಿದುದು.
೧೯೦೫ ಬಂಗಾಳವನ್ನು ಬ್ರಿಟಿಷ್ ಸರ್ಕಾರ ಎರಡು ಭಾಗ ಮಾಡಿದುದು.
೧೯೦೫-೦೮ ಬಿರುಗಾಳಿಯಂತಹ ರಾಜಕೀಯ ಚಳುವಳಿ, ವಂದೇಮಾತರಂ ಎಂಬ ಹೆಸರಿನದು.
೧೯೦೬ ದಿವಾನ್ ಕೃಷ್ಣಮೂರ್ತಿಯವರು ನಿವೃತ್ತರಾದುದು. ವಿ.ಪಿ. ಮಾಧವರಾಯರು ದಿವಾನರಾದುದು.
೧೯೦೮ ಮೈಸೂರಿನಲ್ಲಿ ಪತ್ರಿಕಾಕಾನೂನು ಜಾರಿಗೆ ಬಂದುದು. ವೆಂಕಟಕೃಷ್ಣಯ್ಯನವರು ಪತ್ರಿಕಾಕಾನೂನಿನ ಪ್ರತಿಭಟನೆಗಾಗಿ ತಮ್ಮ ಪತ್ರಿಕೆಗಳನ್ನು ನಿಲ್ಲಿಸಿದುದು. ಬೆಂಗಳೂರಿನಲ್ಲಿಯೂ ’ಮೈಸೂರು ಸ್ಟಾಂಡರ್ಡ್’ ಮತ್ತು ’ನಡೆಗನ್ನಡಿ’ ಪತ್ರಿಕೆಗಳನ್ನು ನಿಲ್ಲಿಸಿದುದು. ಮೈಸೂರು ನ್ಯಾಯವಿಧಾಯಕಸಭೆಯ ಸ್ಥಾಪನೆ. ವೆಂಕಟಕೃಷ್ಣಯ್ಯನವರು ನ್ಯಾಯವಿಧಾಯಕಸಭೆಗೆ ಪ್ರಜಾಪ್ರತಿನಿಧಿಸಭೆಯಿಂದ ಸರ್ವಾನುಮತವಾಗಿ ಚುನಾಯಿತರಾದದ್ದನ್ನು ದಿವಾನ್ ಮಾಧವರಾಯರು ರದ್ದುಪಡಿಸಿದುದು. ತಿಲಕರನ್ನು ಮಾಂಡಲೆಗೆ ೬ ವರ್ಷಕಾಲ ಗಡೀಪಾರು ಮಾಡಿದುದು.
೧೯೦೯ ದಿವಾನ್ ಮಾಧವರಾಯರು ದಿವಾನ್ ಪದವಿಯಿಂದ ನಿವೃತ್ತರಾದುದು. ಟಿ.ಆನಂದರಾಯರು ದಿವಾನರಾದುದು. ವೆಂಕಟಕೃಷ್ಣಯ್ಯನವರು ತಮ್ಮ ಪತ್ರಿಕೆಗಳಾದ ’ಸಾಧ್ವಿ’ ಕನ್ನಡ ವಾರಪತ್ರಿಕೆ ಹಾಗೂ ಮೈಸೂರು ಪೇಟ್ರಿಯಟ್ ಇಂಗ್ಲಿಷ್ ವಾರಪತ್ರಿಕೆಗಳನ್ನು ಪುನಃ ಆರಂಭಿಸಿದುದು.
೧೯೧೧ ದಿವಾನ್ ಆನಂದರಾಯರು ಬೆಂಗಳೂರು ಶಂಕರಮಠದಲ್ಲಿ ವಿ.ಪಿ. ಮಾಧವರಾಯರ ಅಧ್ಯಕ್ಷತೆಯಲ್ಲಿ ನಡೆಯಬೇಕಾಗಿದ್ದ ರೈಟ್ ಆನರಬಲ್ ವಿ.ಎಸ್. ಶ್ರೀನಿವಾಸಶಾಸ್ತ್ರಿಗಳವರ ಭಾಷಣವನ್ನು ಪ್ರತಿಬಂಧಿಸಿದ್ದು. ವಿಶ್ವೇಶ್ವರಯ್ಯನವರು ಮೈಸೂರಿಗೆ ಚೀಫ್ ಇಂಜಿನಿಯರಾಗಿ ಬಂದುದು. ಮೈಸೂರು ಸಿವಿಲ್ ಸರ‍್ವಿಸ್ ಪರೀಕ್ಷೆಯನ್ನು ಮೈಸೂರಿನವರಿಗೆ ಮಾತ್ರ ನಿಯಮಿತ ಮಾಡಿದುದು.
೧೯೧೨ ಆನಂದರಾಯರು ದಿವಾನ್ ಪದವಿಯುಂದ ನಿವೃತ್ತರಾದುದು. ವಿಶ್ವೇಶ್ವರಯ್ಯನವರು ದಿವಾನರಾದುದು. ವೆಂಕಟಕೃಷ್ಣಯ್ಯನವರು ವೆಲ್ತ್ ಆಫ್ ಮೈಸೂರ್ ಎಂಬ ಇಂಗ್ಲಿಷ್ ದಿನಪತ್ರಿಕೆಯನ್ನು ಮತ್ತು ಸಂಪದಭ್ಯುದಯ ಎಂಬ ಕನ್ನಡ ದಿನಪತ್ರಿಕೆಯನ್ನು ಸ್ಥಾಪಿಸಿದುದು. ವಿದ್ಯಾರ್ಥಿಕರಭೂಷಣ ಮುಂತಾದ ಗ್ರಂಥಗಳನ್ನು ಬರೆಯಲು ಆರಂಭಿಸಿದುದು.
೧೯೧೬ ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ.
೧೯೧೯ ಬ್ರಾಹ್ಮಣೇತರ ಚಳುವಳಿ ಆರಂಭ. ವೆಂಕಟಕೃಷ್ಣಯ್ಯನವರು ಮರಿಮಲ್ಲಪ್ಪ ಹೈಸ್ಕೂಲ್ ಮುಖ್ಯೋಪಾಧ್ಯಾಯ ಪದವಿಯಿಂದ ನಿವೃತ್ತರಾದುದು.
೧೯೧೯ ಜನವರಿ ತಿಂಗಳಿನಿಂದ ವಿಶ್ವೇಶ್ವರಯ್ಯನವರು ನಿವೃತ್ತರಾದುದು. ಎಂ. ಕಾಂತರಾಜೇಅರಸ್ ದಿವಾನರಾದುದು. ಪಂಜಾಬಿನ ದುರಂತ, ಜಲಿಯನ್‌ವಾಲಾಬಾಗ್ ಕೊಲೆ.
೧೯೨೦ ಗಾಂಧೀಜಿ ಅಸಹಕಾರ ಸಂಗ್ರಾಮ ಆರಂಭಿಸಿದುದು.
೧೯೨೧ ಬೆಂಗಳೂರಿನಲ್ಲಿ ಮಿಲ್ಲರ್‌ಕಮಿಟಿ ಆರ್ಡರ್ ಜಾರಿಗೆ ಬಂದುದು.
೧೯೨೨ ಬೆಂಗಳೂರಿನಲ್ಲಿ ನ್ಯಾಷನಲ್ ಕಾಂಗ್ರೆಸ್ ಕಮಿಟಿ ಸ್ಥಾಪನೆ. ದಾವಣಗೆರೆಯಲ್ಲಿ ವೆಂಕಟಕೃಷ್ಣಯ್ಯನವರ ಅಧ್ಯಕ್ಷತೆಯಲ್ಲಿ ಕರ್ಣಾಟಕ ಸಾಹಿತ್ಯಸಮ್ಮೇಳನ ನಡೆದುದು.
೧೯೨೩ ಕಾಂತರಾಜ್ ಅರಸರು ದಿವಾನ್ ಪದವಿಯಿಂದ ನಿವೃತ್ತರಾದುದು. ಎ.ಆರ್. ಬ್ಯಾನರ್ಜಿ ದಿವಾನರಾದುದು. ಡಾ.ಬ್ರಜೇಂದ್ರನಾಥ್ ಸೀಲ್‌ರವರು ಸೂಚಿಸಿದ ರಾಜಕೀಯ ಸುಧಾರಣೆಗಳನ್ನು ಮೈಸೂರಿನಲ್ಲಿ ಜಾರಿಗೆ ತಂದುದು.
೧೯೨೬ ಬ್ಯಾನರ್ಜಿ ದಿವಾನ್ ಪದವಿಯಿಂದ ನಿವೃತ್ತರಾದುದು. ಮಿರ್ಜಾ ಇಸ್ಮಾಯಿಲರು ದಿವಾನರಾದುದು.
೧೯೨೭ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ ಆಳ್ವಿಕೆಯ ರಜತೋತ್ಸವ. ಗಾಂಧೀಜಿ ವಿಶ್ರಾಂತಿಗಾಗಿ ನಂದಿಬೆಟ್ಟದಲ್ಲಿ ವಾಸಮಾಡಿದುದು. ಗಾಂಧೀಜಿ ಮೈಸೂರಿಗೆ ಆಗಮಿಸಿದುದು. ಇದೇ ಕಾಲದಲ್ಲಿ ವೆಂಕಟಕೃಷ್ಣಯ್ಯನವರು ಗಾಂಧೀಜಿಯನ್ನು ಭೇಟಿಮಾಡಿ, ಸಂಭಾಷಣೆ ನಡೆಸಿದುದು.
೧೯೨೮ ಬೆಂಗಳೂರಿನಲ್ಲಿ ಸುಲ್ತಾನ್‌ಪೇಟೆ ಗಣೇಶನ ಸಂಬಂಧವಾಗಿ ಗಲಾಟೆ, ಮೈಸೂರು ನಗರದಲ್ಲಿ ವೆಂಕಟಕೃಷ್ಣಯ್ಯನವರ ಸ್ವಾಗತಸಮಿತಿಯ ಅಧ್ಯಕ್ಷತೆಯಲ್ಲಿ ಸಂಸ್ಥಾನದ ಮೊದಲನೇ ಕಾಂಗ್ರೆಸ್ ಅಧಿವೇಶನ. ನಿವೃತ್ತ ದಿವಾನ್ ಎಂ. ವಿಶ್ವೇಶ್ವರಯ್ಯನವರ ಅಧ್ಯಕ್ಷತೆಯಲ್ಲಿ ಗಣೇಶನಗಲಾಟೆ ಸಂಬಂಧವಾಗಿ ವಿಚಾರ ನಡೆಸಲು ಸಮಿತಿ ನೇಮಕ ಮತ್ತು ಸಮಿತಿಯ ವರದಿ.
೧೯೨೯ ವೆಂಕಟಕೃಷ್ಣಯ್ಯನವರ ಪತ್ರಿಕೆಗಳನ್ನೆಲ್ಲಾ ಸರ್ಕಾರ ನಿಲ್ಲಿಸಿದುದು. ವೆಂಕಟಕೃಷ್ಣಯ್ಯನವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಮೈಸೂರು ಕಾಂಗ್ರೆಸ್ ದ್ವಿತೀಯ ಅಧಿವೇಶನ.
೧೯೩೨ ಬೆಂಗಳೂರಿನಲ್ಲಿ ಡಿ.ವಿ.ಗುಂಡಪ್ಪನವರ ಅಧ್ಯಕ್ಷತೆಯಲ್ಲಿ ಪತ್ರಿಕೋದ್ಯೋಗಿಗಳ ಸಂಘದ ಸ್ಥಾಪನೆ. ವೆಂಕಟಕೃಷ್ಣಯ್ಯನವರನ್ನು ಈ ಸಂಸ್ಥೆ ಗೌರವಿಸಿದ್ದು. ನಿವೃತ್ತ ದಿವಾನ್ ವಿ.ಪಿ. ಮಾಧವರಾಯರ ಅಧ್ಯಕ್ಷತೆಯಲ್ಲಿ ಬೆಂಗಳೂರು ಸಾರ್ವಜನಿಕ ಸಮಾರಂಭದಲ್ಲಿ, ವೆಂಕಟಕೃಷ್ಣಯ್ಯನವರ ಭಾವಚಿತ್ರದ ಅನಾವರಣ.
೧೯೩೩ ಮೈಸೂರಿನಲ್ಲಿ ವೆಂಕಟಕೃಷ್ಣಯ್ಯನವರಿಗೆ ಮಹಾರಾಜರ ಗೌರವ. ವೆಂಕಟಕೃಷ್ಣಯ್ಯನವರ ಅಸ್ವಸ್ಥತೆ; ನವೆಂಬರ್ ೮ರಲ್ಲಿ ಅವರು ದಿವಂಗತರಾದುದು.

ಸುದ್ದಿ ಹಾಗೂ ಕಾರ್ಯಕ್ರಮಗಳು

ಕಾರ್ಯಕ್ರಮ :
ತಾತಯ್ಯ ನವರ ಜನ್ಮದಿನಾಚರಣೆ ಹಾಗೂ ವೆಬ್ ಸೈಟ್ ಲೋಕಾರ್ಪಣೆ : ಸೆಪ್ಟೆಂಬರ್ ೧೧, ೨೦೧೧ , ಶಾರದಾವಿಲಾಸ ಸಭಾಂಗಣ , ಮೈಸೂರು ಮುಂದೆ ಓದಿ

ಗ್ಯಾಲರಿ

Mysore Thathayya Gallery

ಶ್ರೀ ವೆಂಕಟ ಕೃಷ್ಣಯ್ಯ ನವರ ಸಾರ್ವಜನಿಕ ಸೇವೆ ಹಾಗೂ ಅಸ್ಪೃಶ್ಯತಾ ನಿವಾರಣೆ ಮತ್ತು ದೀನ ದಲಿತರ ಬಗೆಗಿನ ಅವರ ಕಾಳಜಿಯ ಪ್ರಯತ್ನಗಳು ನನ್ನ ಮನಸ್ಸು ಗೆದ್ದಿವೆ . ನಾನು ಅವರನ್ನು 'ಮೈಸೂರಿನ ಭೀಷ್ಮ ' ನೆಂದು ಪ್ರಶಂಸಿಸುವೆ . ಮೈಸೂರಿನ ಜನತೆಯಲ್ಲಿ ಅವರು 'Grand old man of Mysore' ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ .

– ಮಹಾತ್ಮಾ ಗಾಂಧಿ

ಶುದ್ಧ, ನಿಷ್ಕಳಂಕ ಜೀವನ ಹಾಗೂ ಸಾಮಾಜಿಕ ಸೇವೆಗೆ ಪ್ರಸಿದ್ಧರಾಗಿರುವ ಶ್ರೀ ವೆಂಕಟಕೃಷ್ಣಯ್ಯ ನವರು ಮೈಸೂರು ಪ್ರಾಂತ್ಯದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ನಿಸ್ವಾರ್ಥವಾಗಿ ದುಡಿದಿದ್ದಾರೆ. ಅವರ ಸರಳತೆ ಹಾಗೂ ಸಾಮಾಜಿಕ ಕಾಳಜಿಯ ಕಾರಣದಿಂದ ಮೈಸೂರಿನ ಜನತೆ ಅವರನ್ನು 'ತಾತಯ್ಯ' ಎಂದು ಪ್ರೀತಿಯಿಂದ ಕರೆದು ಗೌರವಿಸಿದೆ.

– ದಿವಂಗತ ಶ್ರೀ ಚಾಮರಾಜ ಒಡೆಯರ್, ಮೈಸೂರಿನ ಮಹಾರಾಜರು

ಜನತೆಯ ಹಿತಕ್ಕಾಗಿ ಜೀವಾವಧಿ ಸೇವೆ ಮಾಡಿರುವ ವೆಂಕಟಕೃಷ್ಣಯ್ಯನವರ ದೇಶಾಭಿಮಾನ, ಸಾರ್ವಜನಿಕ ಸೇವಾವೃತ್ತಿ ಮತ್ತು ಸ್ವಾರ್ಥತ್ಯಾಗ ಇವುಗಳ ಬಗ್ಗೆ ಗೌರವ ಅಭಿಮಾನವನ್ನು ಹೊಂದಿರುವವರ ಪೈಕಿ ನಾನು ಯಾರಿಗೂ ಹಿಂದಿಲ್ಲ. ಮೈಸೂರಿನಲ್ಲಿ ನನ್ನ ಅಧಿಕಾರ ಸೇವಾವಧಿಯಲ್ಲಿ ಅವರು ನನಗೆ ಇತ್ತ ಬೆಂಬಲದ ಕೃತಜ್ಞತಾಪೂರ್ವಕ ನೆನಪುಗಳು ನನ್ನಲ್ಲಿ ಎಂದಿಗೂ ಉಳಿಯುವುವು.

– ಎಂ. ವಿಶ್ವೇಶ್ವರಯ್ಯನವರು :

ಮೈಸೂರಿನ ಜನತೆಯಲ್ಲಿ ಸ್ವಾತಂತ್ರ್ಯದ ಬಗೆಗಿನ ಜಾಗೃತಿ ಹಾಗೂ ಸಾಮಾಜಿಕ ಅರಿವು ಮೂಡಿಸುವಲ್ಲಿ ಶ್ರೀ ವೆಂಕಟಕೃಷ್ಣಯ್ಯನವರ ಪಾತ್ರ ಅತ್ಯಂತ ಮಹತ್ವಪೂರ್ಣವಾದುದು. ಮೈಸೂರು ಪ್ರಾಂತ್ಯದ ಸಾಮಾಜಿಕ ಹಾಗೂ ಅರ್ಥಿಕ ಬೆಳವಣಿಗೆಗೆ ಅವರು ಅವಿಶ್ರಾಂತವಾಗಿ ದುಡಿದವರು.

– ಶ್ರೀ ವಿ.ವಿ. ಗಿರಿ, ಭಾರತದ ಮಾಜಿ ರಾಷ್ಟ್ರಪತಿಗಳು

The Anathalaya website