Mysore tatayya image

ಬರಹಗಳು

ಕನ್ನಡ ಪತ್ರಿಕೋದ್ಯಮ ಪಿತಾಮಹ ತಾತಯ್ಯನವರು

ಆಧುನಿಕ ಕನ್ನಡ ಪತ್ರಿಕೋದ್ಯಮದ ಅಡಿಪಾಯವನ್ನು ಹಾಕಿದ ಕೀರ್ತಿಯು ತಾತಯ್ಯನವರದು. ಉದಾತ್ತ ಧ್ಯೇಯಗಳನ್ನಿಟ್ಟುಕೊಂಡು ಕನ್ನಡ ಪತ್ರಿಕೋದ್ಯಮದ ಮೂಲಕ ಸಾರ್ವಜನಿಕ ಸೇವೆ ಮಾಡಿದ ತಾತಯ್ಯನವರನ್ನು ಕನ್ನಡ ಪತ್ರಿಕೋದ್ಯಮದ ಪಿತಾಮಹ ರೆಂದು ಕರೆದು ಅವರನ್ನು ಸ್ಮರಿಸಿಕೊಳ್ಳಲಾಗಿದೆ. ಸರಳವಾಗಿ ಮತ್ತು ನೇರವಾಗಿ ಪ್ರಭಾವಯುತವಾದ ಅವರ ಬರವಣಿಗೆಗೆ ಅವರ ಲೇಖನಗಳು ಹೆಸರುವಾಸಿಯಾಗಿದ್ದವು. ಅವರು ಸ್ವಭಾವತಃ ಬುದ್ದಿವಂತರೂ, ದಕ್ಷರೂ, ಪ್ರಾಮಾಣಿಕರೂ, ವಿದ್ವಾಂಸರೂ ಆಗಿದ್ದರು. ಸಾರ್ವಜನಿಕ ವಿಷಯಗಳಲ್ಲಿ ಶಿಸ್ತು ಮತ್ತು ಸತ್ಯಸಂಧತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರು. ಆಗ ಮೈಸೂರಿನ ದಿವಾನರಾಗಿ ಕೆ. ರಂಗಾಚಾರ‍್ಲುರವರು ನೇಮಿತರಾಗಿದ್ದರು. ಅವರು ಪ್ರಜಾನುರಾಗಿಗಳಾಗಿದ್ದರು. ಪ್ರಜಾಪ್ರಭುತ್ವದ ತತ್ವಗಳನ್ನು ಕ್ರಮವಾಗಿ ಜಾರಿಗೆ ತರಬೇಕೆಂದು ಅಭಿಪ್ರಾಯವುಳ್ಳವರಗಿದ್ದರು. ಅವರಿಗೆ ಬೆಂಬಲ ಕೊಡಲು ವೆಂಕಟಕೃಷ್ಣಯ್ಯನವರು 'ವೃತ್ತಾಂತ ಚಿಂತಾಮಣಿ' ಎಂಬ ವಾರಪತ್ರಿಕೆಯನ್ನು ೧೮೮೫ರಲ್ಲಿ ಪ್ರಾರಂಭಿಸಿದರು. ಅದು ಅದ್ಭುತ ಜಯಗಳಿಸಿತು. ಅನಂತರ ಅವರು ಅನೇಕ ಪತ್ರಿಕೆಗಳನ್ನು ಕನ್ನಡದಲ್ಲಿಯೂ, ಇಂಗ್ಲೀಷಿನಲ್ಲಿಯೂ ಪ್ರಾರಂಭಿಸಿದರು.

ತಾತಯ್ಯ ನವರು ಆರಂಭಿಸಿ ಮುನ್ನಡೆಸಿದ ಪತ್ರಿಕೆಗಳು:

ಕನ್ನಡ ಪತ್ರಿಕೆಗಳು :

  • 'ವೃತ್ತಾಂತ ಚಿಂತಾಮಣಿ'
  • 'ಹಿತ ಬೋಧಿನಿ',
  • 'ಸಂಪದಭ್ಯುದಯ',
  • 'ಸಾಧ್ವಿ' ,
  • 'ಪೌರ ಸಾಮಾಜಿಕ ಪತ್ರಿಕೆ'

ಇಂಗ್ಲಿಷ್ ಪತ್ರಿಕೆಗಳು :

  • 'ಮೈಸೂರು ಪೇಟ್ರಿಯಟ್',
  • 'ವೆಲ್ತ್ ಆಫ್ ಮೈಸೂರು',
  • 'ನೇಚರ್ ಕ್ಯೂರ್'
  • 'ಮೈಸೂರು ಹೆರಾಲ್ಡ್' .

ಮೈಸೂರು ಹೆರಾಲ್ಡ್ ಪತ್ರಿಕೆಯು ತುಂಬಾ ಜನಾದರಣೀಯವಾಗಿತ್ತು. ಬಹಳ ಜನರು ಆ ಪತ್ರಿಕೆಯನ್ನು ಓದುತ್ತಿದ್ದರು. ಲೇಖನಗಳು ಶ್ರೇಷ್ಠಮಟ್ಟದಲ್ಲಿರುತ್ತಿದ್ದವು. ವೆಂಕಟಕೃಷ್ಣಯ್ಯನವರು ಪತ್ರಿಕೋದ್ಯಮವನ್ನು ತಮ್ಮ ಜೀವನದ ಮುಖ್ಯ ಕೆಲಸಗಳಲ್ಲೊಂದೆಂದು ಪರಿಗಣಿಸಿ ತಮ್ಮ ಕೊನೆಯ ದಿನಗಳನ್ನು ಪತ್ರಿಕೋದ್ಯಮದ ಬೆಳವಣಿಗೆಯಲ್ಲೇ ಕಾಲ ಕಳೆದರು. ಕನ್ನಡ ಭಾಷೆಯಲ್ಲಿ ಇಂದು ಪತ್ರಿಕೋದ್ಯಮವು ಉತ್ತಮ ರೀತಿಯಲ್ಲಿ ಬೆಳೆದಿದ್ದರೆ ಅದಕ್ಕೆ ವೆಂಕಟಕೃಷ್ಣಯ್ಯನವರೇ ಕಾರಣ. ವೆಂಕಟಕೃಷ್ಣಯ್ಯನವರು ಪತ್ರಿಕೋದ್ಯಮ ವ್ಯವಸಾಯದಲ್ಲಿ ಸ್ವತಃ ನುರಿತವರಾದರೂ ಮುಂದೆ ಈ ವ್ಯವಸಾಯವು ಬೆಳೆಯಲು ತರುಣರನ್ನು ತರಬೇತು ಮಾಡಬೇಕೆಂದು, ಯುವಕ ಬರಹಗಾರರಿಗೆ ಉತ್ತೇಜನ ಕೊಡುತ್ತಿದ್ದರು. ಹಾಗೆ ಸ್ಫೂರ್ತಿ ಪಡೆದವರಲ್ಲಿ ಎಂ. ಗೋಪಾಲಕೃಷ್ಣ ಅಯ್ಯಂಗಾರ್ ಮತ್ತು ಎಂ. ಶ್ರೀನಿವಾಸ ಅಯ್ಯಂಗಾರ್ ಎಂಬಿಬ್ಬ ಸಹೋದರರು ಮುಖ್ಯರಾದವರು. ವೆಂಕಟಕೃಷ್ಣಯ್ಯನವರ ನೇತೃತ್ವದಲ್ಲಿ ಅವರು ಸಂಪೂರ್ಣ ತರಬೇತಿಯನ್ನು ಪಡೆದರು. ಅನಂತರ ಅವರು ಬೆಂಗಳೂರಿಗೆ ಹೋಗಿ ಕನ್ನಡ ನಡೆಗನ್ನಡಿ ಎಂಬ ಪತ್ರಿಕೆಯನ್ನು ೧೮೯೫ರಲ್ಲಿ ಸಾಪಿಸಿದರು. ಇದು ಜನಾದರಣೀಯ ವಾರಪತ್ರಿಕೆಯಾಗಿತ್ತು. ಇದರ ಜೊತೆಯಲ್ಲಿ ಮೈಸೂರು ಸ್ವ್ಯಾಂಡರ‍್ಡ್ ಎಂಬ ದ್ವಿವಾರ ಪತ್ರಿಕೆಯನ್ನು ಪ್ರಾರಂಭಿಸಿದರು. ಮೈಸೂರು ಸಂಸ್ಥಾನದಲ್ಲಿ ಸಂಪೂರ್ಣವಾಗಿ ಪತ್ರಿಕಾವೃತ್ತಿಯನ್ನೇ ತಮ್ಮ ಊರುಗೋಲನ್ನಾಗಿ ಮಾಡಿಕೊಂq ಪ್ರಥಮ ಪತ್ರಿಕೋದ್ಯಮಿಗಳು ಈ ಸಹೋದರರು. ಮೈಸೂರಿನ ನ್ಯಾಯವಿಧಾಯಕ ಸಭೆಯು ೧೯೦೮ರಲ್ಲಿ ಒಂದು ಶಾಸನವನ್ನು ಅಂಗೀಕರಿಸಿ ರಾಷ್ಟ್ರೀಯ ಆಂದೋಳನಕ್ಕೆ ಸಹಾಯ ಮಾಡುವ ಮತ್ತು ಸ್ವತಂತ್ರವಾಗಿ ಸರ್ಕಾರದ ಆಡಳಿತವನ್ನು ಟೀಕಿಸುವ ಪತ್ರಿಕೆಗಳ ಸ್ವತಂತ್ರವನ್ನು ಕುಂಠಿತಗೊಳಿಸುವ ಕ್ರಮವನ್ನು ಕೈಗೊಂಡಿತು.

ಸರ್ಕಾರದ ಈ ದಬ್ಬಾಳಿಕೆಯ ಕ್ರಮಗಳನ್ನು ಮೈಸೂರಿನ ಕನ್ನಡ ಪತ್ರಿಕೋದ್ಯಮಿಗಳು ಸಹಿಸಲಿಲ್ಲ. ವೆಂಕಟಕೃಷ್ಣಯ್ಯನವರ ನಾಯಕತ್ವದಲ್ಲಿ ಸಭೆ ಸೇರಿ ಸಂಸ್ಥಾನದಲ್ಲಿದ್ದ ಎಲ್ಲಾ ಕನ್ನಡ ಪತ್ರಿಕೆಗಳನ್ನು ಈ ಕರಾಳ ಶಾಸನದ ವಿರುದ್ಧ ನಿಲ್ಲಿಸಿಬಿಡಬೇಕೆಂದು ತೀರ್ಮಾನಿಸಿದರು. ವೆಂಕಟಕೃಷ್ಣಯ್ಯನವರು ಖುದ್ದಾಗಿ ದಿವಾನರುಗಳನ್ನು ಭೇಟಿ ಮಾಡಿ ಈ ಶಾಸನವು ಹೇಗೆ ಜನತೆಯ ಹಕ್ಕು ಭಾಧ್ಯತೆಗಳನ್ನು ಹತ್ತಿಕ್ಕಿರುವುದೆಂಬುದನ್ನು ಮನಗಾಣಿಸಿದರು. ಪತ್ರಿಕಾ ಸ್ವಾತಂತ್ರವನ್ನು ಕಿತ್ತುಕೊಳ್ಳುವುದರಿಂದ ಜನತೆಯ ಜನ್ಮಸಿದ್ಧವಾದ ಆ ಹಕ್ಕುಗಳಿಗೆ ಹೇಗೆ ಕುಂದಕ ಬಂದಿತೆಂಬುದನ್ನು ತಿಳಿಯಪಡಿಸಿದರು. ಆಡಳಿತಗಾರರು ಈ ಯಾವ ವಾದಗಳಿಗೂ ಜಗ್ಗಲಿಲ್ಲ. ಜನತೆಯ ಹೋರಾಟವು ಕುಗ್ಗಲಿಲ್ಲ. ಅಲ್ಲಲ್ಲಿ ಶಾಸನದ ಹಿಡಿತವನ್ನು ತಪ್ಪಿಸಿಕೊಳ್ಳಲು ಕೈಬರಹದ ಭಿತ್ತಿಪತ್ರಗಳು ಆಡಳಿತದ ಲೋಪದೋಷಗಳನ್ನು ತೋರಿಸಿ ಹೊರಬಂದವು.ಸರ್ಕಾರವೇ ಇಂತಹ ಚಟುವಟಿಕೆಗಳಿಗೆ ಸ್ಫೂರ್ತಿ ಕೊಟ್ಟಂತಾಯಿತು. ಈ ಶಾಸನವು ಎರಡು ವರ್ಷಗಳವರೆಗೆ ಜಾರಿಯಲ್ಲಿತ್ತು. ಆಮೇಲೆ ಪುನಃ ಕನ್ನಡ ಪತ್ರಿಕೆಗಳು ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಪ್ರಾರಂಭವಾದವು. ವೆಂಕಟಕೃಷ್ಣಯ್ಯನವರು೧೯೧೧ರಲ್ಲಿ ಸಾಧ್ವಿ ಎಂಬ ಪತ್ರಿಕೆಯನ್ನು ಸ್ಥಾಪಿಸಿದರು.

ಪತ್ರಿಕೋದ್ಯಮ ಶಿಕ್ಷಣವನ್ನು ವಿಶ್ವವಿದ್ಯಾಲಯದ ಮಟ್ಟದಲ್ಲಿ ಕೊಡಬೇಕೆಂಬ ಅಭಿಪ್ರಾಯವನ್ನು ಬಲವಾಗಿ ಪುಷ್ಟೀಕರಿಸಿ ಅದಕ್ಕೆ ಬೆಂಬಲ ಕೊಟ್ಟವರು ವೆಂಕಟಕೃಷ್ಣಯ್ಯನವರು. ಮೈಸೂರು ವಿಶ್ವವಿದ್ಯಾಲಯವು ಆಗಿನ್ನೂ ಪತ್ರಿಕೋದ್ಯಮ ಶಿಕ್ಷಣವನ್ನು ಕೊಡುತ್ತಿರಲಿಲ್ಲ. ಆದರೂ ಮುಂದೆ ಎಂದಾದರೂ ಪತ್ರಿಕೋದ್ಯಮ ಶಿಕ್ಷಣವು ಬಂದೇ ಬರುವುದೆಂಬ ನಂಬಿಕೆಯಿದ್ದ ವೆಂಕಟಕೃಷ್ಣಯ್ಯನವರು, ಎರಡು ಸಾವಿರ ರೂಪಾಯಿಗಳನ್ನು ವಿಶ್ವವಿದ್ಯಾನಿಲಯಕ್ಕೆ ದತ್ತಿಕೊಟ್ಟು ಪತ್ರಿಕೋದ್ಯಮ ಶಾಸ್ರ್ತದಲ್ಲಿ ಶ್ರೇಷ್ಠ ರೀತಿಯ ಯಶಸ್ಸನ್ನು ಪಡೆದ ವಿದ್ಯಾರ್ಥಿಗೆ ಬಹುಮಾನವನ್ನು ಕೊಡಬೇಕೆಂದು ತಿಳಿಸಿದ್ದರು. ಮೂವತ್ತು ವರ್ಷಗಳ ನಂತರ ತಾತಯ್ಯನವರು ಕಂಡ ಕನಸು ನನಸಾಯಿತು. ೧೯೫೧ನೇ ಇಸವಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಮಹಾರಾಜಾ ಕಾಲೇಜಿನಲ್ಲಿ ಪತ್ರಿಕೋದ್ಯಮ ಶಾಸ್ತ್ರವನ್ನು ಬಿ.ಎ.ಡಿಗ್ರಿ ಪದವಿಗೆ ಒಂದು ಐಚ್ಛಿಕ ವಿಷಯವನ್ನಾಗಿಟ್ಟಿತು. ಅಂದಿನಿಂದ ಇಂದಿನವರಗೆ ಪತ್ರಿಕೋದ್ಯಮ ಶಾಸ್ತ್ರದಲ್ಲಿ ಪ್ರಥಮ ತರಗತಿಯಲ್ಲಿ ಉತ್ತೀರ್ಣನಾಗಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಈ ಬಹುಮಾನವನ್ನು ವೆಂಕಟಕೃಷ್ಣಯ್ಯನವರ ಜ್ಞಾಪಕಾರ್ಥವಾಗಿ ಕೊಡಲಾಗುವುದು. ಈ ಬಹುಮಾನವನ್ನು 'ವೃದ್ಧಪಿತಾಮಹ ವೆಂಕಟಕೃಷ್ಣಯ್ಯ ಪತ್ರಿಕೋದ್ಯಮ ಬಹುಮಾನ' ಎಂದು ಕರೆಯಲಾಗಿದೆ. ನಿಜವಾಗಿಯೂ ವೆಂಕಟಕೃಷ್ಣಯ್ಯನವರು ಪತ್ರಿಕೋದ್ಯಮವು ಬೆಳೆಯಲು ತುಂಬಾ ನೆರವಿತ್ತರು. ಆದುದರಿಂದಲೇ ಅವರನ್ನು ಮೈಸೂರಿನಲ್ಲಿ ಕನ್ನಡ ಪತ್ರಿಕೋದ್ಯಮದ ಪಿತಾಮಹರು ಎಂದು ಕರೆಯಲಾಗುತ್ತಿದೆ.

ತಾತಯ್ಯನವರ ಸಾಹಿತ್ಯ ಸೇವೆ:

ಸಾರ್ವಜನಿಕ ಕ್ಷೇತ್ರದಲ್ಲಿ ಒಂದು ಉದ್ಧಾರಕಶಕ್ತಿಯಾಗಿ, ರಾಜಕೀಯ ಕ್ಷೇತ್ರದಲ್ಲಿ ಎಚ್ಚರಿಸುವ ಆತ್ಮಸಾಕ್ಷಿಯಾಗಿ, ಶಿಕ್ಷಣಕ್ಷೇತ್ರದಲ್ಲಿ ಜ್ಞಾನಮಯ ಪ್ರದೀಪವಾಗಿ ದಶಕಗಳ ಉದ್ದಕ್ಕೆ ದುಡಿದು ಹಲವು ಜಲಚಿಹ್ನೆಗಳನ್ನು ನಿರ್ಮಿಸಿದ ವೆಂಕಟಕೃಷ್ಣಯ್ಯನವರು ತಮ್ಮಿಂದಾದ ಮಟ್ಟಿಗೆ ಸಾಹಿತ್ಯಕ್ಷೇತ್ರದಲ್ಲಿಯೂ ದುಡಿದರು. ಕನ್ನಡ ಭಾಷೆ ಪುಷ್ಟಿಗೊಳ್ಳುವಂತೆ ಮಾಡಿದರು. ಮೈಸೂರಿನ ತುಂಬ ಹಳೆಯ ಸಾಹಿತ್ಯ ಸಂಸ್ಥೆಯಾದ ’ಲಿಟರರಿ ಯೂನಿಯನ್’ ಚಟುವಟಿಕೆಗಳಲ್ಲಿ ಅವರ ಪಾತ್ರವಿತ್ತು.

ಸ್ವತ: ಹಲವು ಗ್ರಂಥಗಳನ್ನು, ಹೇಗೋ ಕಾಲಾವಕಾಶ ಮಾಡಿಕೊಂಡು ಅವರು ಬರೆದು ಪ್ರಕಟಿಸಿದರು. ಅವರ ಈ ಸಾಹಿತ್ಯ ಸೇವೆಯನ್ನು ಗಮನಿಸಿ ಕನ್ನಡ ಸಾಹಿತ್ಯಪರಿಷತ್ತು ಅವರನ್ನು ೧೯೨೨ರಲ್ಲಿ ದಾವಣಗೆರೆಯಲ್ಲಿ ನಡೆದ ೮ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಗೌರವಿಸಿತು. ಅವರ ಅಧ್ಯಕ್ಷ ಭಾಷಣ ಈವರೆಗೆ ಆದ ಅಧ್ಯಕ್ಷಭಾಷಣಗಳಲೆಲ್ಲ ತೀರ ಚಿಕ್ಕದು ಎಂದು ತೋರುತ್ತದೆ. ನಾಲ್ಕೂವರೆ ಪುಟಗಳಲ್ಲಿ ಭಾಷಣ ಮುಗಿಸಿದ್ದರೂ, ಮೈಸೂರಿನಲ್ಲಿ ಭಾಷೆ ಸಾಹಿತ್ಯಗಳಿಗೆ ನವೋದಯ ಪೂರ್ವಕಾಲದಲ್ಲಿ ದೊರೆತ ಪ್ರೋತ್ಸಾಹದ ಬಗೆಗೆ ತಮ್ಮ ಅನುಭವದ ಕೆಲವು ಮಾತುಗಳನ್ನು ಅಲ್ಲಿ ಅವರು ಹೇಳಿರುವುದು ಗಮನಾರ್ಹವಾಗಿದೆ.

ವೆಂಕಟಕೃಷ್ಣಯ್ಯನವರು ಬರೆದು ಪ್ರಕಟಿಸಿದ ಸಾಹಿತ್ಯಕೃತಿಗಳು ಎಷ್ಟು, ಅವು ಯಾವುವು, ಪುನರ‍್ಮುದ್ರಣಗಳ ವಿಚಾರ ಹೇಗೆ- ಇವು ಇನ್ನೂ ಖಚಿತವಾಗಬೇಕಾಗಿದೆ. ಪ್ರಸ್ತುತ, ಈ ಕೆಲವು ಕೃತಿಗಳನ್ನು ಗುರುತಿಸುವುದು ಸಾಧ್ಯವಾಗಿದೆ:

  • ’ಆರೋಗ್ಯನಿಧಾನ ಪ್ರಕಾಶಿಕೆ (೧೮೯೬)’,
  • ’ಧನಾರ್ಜನೆಯ ಕ್ರಮ’ (೧೮೯೭),
  • ’ಚೋರಗ್ರಹಣ ತಂತ್ರ’ (೧೮೯೭),
  • ’ಹರಿಶ್ಚಂದ್ರ ಚರಿತ್ರೆ’ (೧೮೯೭),
  • ’ಟೆಲಿಮಾಕಸ್ಸಿನ ಸಾಹಸಚರಿತ್ರೆ’, ಭಾಗ -೧ (೧೯೦೯), ಭಾಗ-೨(೧೯೨೦), ಭಾಗ-೩ (೧೯೩೩),
  • ’ಬೂಕರ್ ಟಿ. ವಾಷಿಂಗ್‌ಟನ್ ರವರ ಚರಿತ್ರೆ’ (೧೯೧೯),
  • ’ವಿದ್ಯಾರ್ಥಿಕರಭೂಷಣ’ (೧೯೨೨),
  • ’ಮ|| ಎಂ.ವೆಂಕಟಕೃಷ್ಣಯ್ಯನವರ ಜೀವನ ಚರಿತ್ರೆ’ (೧೯೨೯),
  • ’ಶ್ರೀರಾಮ ಮಹಿಮೆ’ (೧೯೨೯).

ಈ ೧೧ ಪುಸ್ತಕಗಳಲ್ಲದೆ ತೇದಿಗಳು ನಿರ್ದಿಷ್ಟವಾಗಿ ತಿಳಿಯದ ಈ ಇನ್ನೂ ೪ ಪುಸ್ತಕಗಳನ್ನು ಅವರು ಬರೆದಂತೆ ತಿಳಿಯುವುದು :

  • ’ದೇಶಾಭಿಮಾನ’,
  • ’ಪರಂತಪವಿಜಯ’,
  • ’ಸುಮತಿ ಮದನಕುಮಾರ ಚರಿತ್ರೆ'
  • ’ಬಾಲಬೋಧೆ’.

ಇವುಗಳಲ್ಲಿ ಯಾವುವೂ ಈಚೆಗೆ ಕಾಣಲು ಸಿಕ್ಕುತ್ತಿಲ್ಲ. ಪುನರ್ಮುದ್ರಣಗಳ ವಿಚಾರವೂ ಯಾರ ಮನಸ್ಸಿಗೂ ಬರುತ್ತಿಲ್ಲ. ಇದು ವಿಷಾದದ ಸಂಗತಿ. ವಿಮರ್ಶೆಗಳು ವಿದ್ಯಾದಾಯಿನಿ ಪತ್ರಿಕೆ, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ಮೊದಲಾದೆಡೆ ಬಂದಿದೆ. ಇನ್ನು ಮುಂದಾದರೂ ಇವು ಕೆಲವು ಸಂಯುಕ್ತ ಸಂಪುಟಗಳಲ್ಲಿ ಪುನರ‍್ಮುದ್ರಣಗೊಂಡು ಪ್ರಕಟವಾಗುವುದು ಸಾಧ್ಯವಾದರೆ ವೆಂಕಟಕೃಷ್ಣಯ್ಯನವರ ಜೀವನ ಸಾಧನೆಗಳ, ಸಾಹಿತ್ಯಸೇವೆಯ ಮುಖಗಳು ಇನ್ನಷ್ಟು ಮಟ್ಟಿಗೆ ಸ್ಫುಟಗೊಳ್ಳುವುದು ಸಾಧ್ಯವಿದೆ. ಅದಕ್ಕಾಗಿ ಹಾರೈಸೋಣ.

ಹೀಗೆಯೇ ಸ್ವಾತಂತ್ರ್ಯ ಚಳುವಳಿಯ ವಿಷಯಕ್ಕೆ ಬಂದರೆ, ಅವರು ತೆರೆಮರೆ ಯಲ್ಲಿಯೇ ಉಳಿದು ಹೋರಾಡದೆ, ಪತ್ರಿಕಾಲೇಖನಗಳ ಮೂಲಕ ಯೋಧರಾಗಿ ಹೋರಾಡಿದರು. "ಭಾರತವು ಬ್ರಿಟಿಷ್ ಆಡಳಿತದಿಂದಾಗಿರುವ ಅನುಕೂಲಗಳನ್ನು ಚೆನ್ನಾಗಿ ಸ್ಮರಿಸುತ್ತದೆ. ಹಾಗೆಯೇ ಬ್ರಿಟಿಷ್ ಸಾಮ್ರಾಜ್ಯ ತನ್ನ ಪ್ರಜೆಗಳ ಮೇಲೆ ಹೇರಿದ ಅನ್ಯಾಯಗಳನ್ನೂ ನೆನೆಯುತ್ತದೆ. ಭಾರತ ಬಲಹೀನವಾಗಿದೆ, ದಾರಿದ್ರ್ಯಸ್ಥಿತಿಯಲ್ಲಿದೆ, ನಿಸ್ಸಹಾಯಕ ಭಿಕ್ಷುಕನ ಅವಸ್ಥೆಗೆ ಇಳಿದಿದೆ. ಹೀಗಿರುವಾಗ ತನ್ನನ್ನು ಒದೆಯುವ ಬೂಟುಗಾಲನ್ನು ಅದು ಮುದ್ದಿಸಬೇಕೇನು?" ಎಂಬುದಾಗಿ ಅವರು ಸಂಪದಭ್ಯುದಯದ ಇಂಗ್ಲಿಷ್ ಆವೃತ್ತಿಯ ಒಂದಾನೊಂದು ಸಂಚಿಕೆಯಲ್ಲಿ ಬರೆದರಲ್ಲದೆ, "ದಯಾಶೀಲವಾದ ನಿರಂಕುಶ ಪ್ರಭುತ್ವ ಹೃದಯಹೀನವಾದ ಪ್ರಜಾಪ್ರಭುತ್ವಕ್ಕಿಂತ ಮೇಲು" ಎಂದು ಕೂಡ ಸಾರಿದರು. ಅವರು ತಮ್ಮ ಬರಹಗಳಲ್ಲಿ ನೇರವಾಗಿಯೂ ನಿಷ್ಠುರವಾಗಿಯೂ ತಮ್ಮ ಖಚಿತವಾದ ಅಭಿಪ್ರಾಯಗಳನ್ನು ಪ್ರಕಟಿಸುತ್ತಿದ್ದರು. ಯಾರ ಮುಲಾಜಿಗೂ ಒಳಗಾಗುತ್ತಿರಲಿಲ್ಲ.ತಾತಯ್ಯನವರು ೧೯೧೫ ರಲ್ಲಿ ಆರಂಭಗೊಂಡ ಕನ್ನಡ ಸಾಹಿತ್ಯ ಪರಿಷತ್ ನ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರವಹಿಸಿದರು. ಮೈಸೂರು ರಾಜ್ಯದಲ್ಲಿ ಸ್ವಾತಂತ್ರ್ಯದ ಕುರಿತು, ಸಾಮಾಜಿಕ ಪಿಡುಗುಗಳ ಕುರಿತು ಜನ ಜಾಗೃತಿ ಮೂಡಿಸುವಲ್ಲಿ ತಾತಯ್ಯ ನವರ ಲೇಖನಗಳ ಪಾತ್ರ ಬಹು ದೊಡ್ಡದು. ಸರ್ಕಾರದ ಕಾನೂನು ಕಾಯ್ದೆ , ರೀತಿ ನೀತಿಗಳ ಕುರಿತು ನಿರ್ಭಯವಾಗಿ , ಸತ್ಯನಿಷ್ಟತೆಯಿಂದ ಬರೆಯುತ್ತಿದ್ದ ತಾತಯ್ಯನವರ ಲೇಖನಗಳು ಸಾಮಾನ್ಯ ಜನರಲ್ಲಿ ಅರಿವು ಮೂಡಿಸುತ್ತಿತ್ತಲ್ಲದೆ ಸರ್ಕಾರದ ಅಧಿಕಾರಿಗಳಿಗೂ ಭಯ ಹುಟ್ಟಿಸುತ್ತಿತ್ತು.

ಸುದ್ದಿ ಹಾಗೂ ಕಾರ್ಯಕ್ರಮಗಳು

ಕಾರ್ಯಕ್ರಮ :
ತಾತಯ್ಯ ನವರ ಜನ್ಮದಿನಾಚರಣೆ ಹಾಗೂ ವೆಬ್ ಸೈಟ್ ಲೋಕಾರ್ಪಣೆ : ಸೆಪ್ಟೆಂಬರ್ ೧೧, ೨೦೧೧ , ಶಾರದಾವಿಲಾಸ ಸಭಾಂಗಣ , ಮೈಸೂರು ಮುಂದೆ ಓದಿ

ಗ್ಯಾಲರಿ

Mysore Thathayya Gallery

ಶ್ರೀ ವೆಂಕಟ ಕೃಷ್ಣಯ್ಯ ನವರ ಸಾರ್ವಜನಿಕ ಸೇವೆ ಹಾಗೂ ಅಸ್ಪೃಶ್ಯತಾ ನಿವಾರಣೆ ಮತ್ತು ದೀನ ದಲಿತರ ಬಗೆಗಿನ ಅವರ ಕಾಳಜಿಯ ಪ್ರಯತ್ನಗಳು ನನ್ನ ಮನಸ್ಸು ಗೆದ್ದಿವೆ . ನಾನು ಅವರನ್ನು 'ಮೈಸೂರಿನ ಭೀಷ್ಮ ' ನೆಂದು ಪ್ರಶಂಸಿಸುವೆ . ಮೈಸೂರಿನ ಜನತೆಯಲ್ಲಿ ಅವರು 'Grand old man of Mysore' ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ .

– ಮಹಾತ್ಮಾ ಗಾಂಧಿ

ಶುದ್ಧ, ನಿಷ್ಕಳಂಕ ಜೀವನ ಹಾಗೂ ಸಾಮಾಜಿಕ ಸೇವೆಗೆ ಪ್ರಸಿದ್ಧರಾಗಿರುವ ಶ್ರೀ ವೆಂಕಟಕೃಷ್ಣಯ್ಯ ನವರು ಮೈಸೂರು ಪ್ರಾಂತ್ಯದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ನಿಸ್ವಾರ್ಥವಾಗಿ ದುಡಿದಿದ್ದಾರೆ. ಅವರ ಸರಳತೆ ಹಾಗೂ ಸಾಮಾಜಿಕ ಕಾಳಜಿಯ ಕಾರಣದಿಂದ ಮೈಸೂರಿನ ಜನತೆ ಅವರನ್ನು 'ತಾತಯ್ಯ' ಎಂದು ಪ್ರೀತಿಯಿಂದ ಕರೆದು ಗೌರವಿಸಿದೆ.

– ದಿವಂಗತ ಶ್ರೀ ಚಾಮರಾಜ ಒಡೆಯರ್, ಮೈಸೂರಿನ ಮಹಾರಾಜರು

ಜನತೆಯ ಹಿತಕ್ಕಾಗಿ ಜೀವಾವಧಿ ಸೇವೆ ಮಾಡಿರುವ ವೆಂಕಟಕೃಷ್ಣಯ್ಯನವರ ದೇಶಾಭಿಮಾನ, ಸಾರ್ವಜನಿಕ ಸೇವಾವೃತ್ತಿ ಮತ್ತು ಸ್ವಾರ್ಥತ್ಯಾಗ ಇವುಗಳ ಬಗ್ಗೆ ಗೌರವ ಅಭಿಮಾನವನ್ನು ಹೊಂದಿರುವವರ ಪೈಕಿ ನಾನು ಯಾರಿಗೂ ಹಿಂದಿಲ್ಲ. ಮೈಸೂರಿನಲ್ಲಿ ನನ್ನ ಅಧಿಕಾರ ಸೇವಾವಧಿಯಲ್ಲಿ ಅವರು ನನಗೆ ಇತ್ತ ಬೆಂಬಲದ ಕೃತಜ್ಞತಾಪೂರ್ವಕ ನೆನಪುಗಳು ನನ್ನಲ್ಲಿ ಎಂದಿಗೂ ಉಳಿಯುವುವು.

– ಎಂ. ವಿಶ್ವೇಶ್ವರಯ್ಯನವರು :

ಮೈಸೂರಿನ ಜನತೆಯಲ್ಲಿ ಸ್ವಾತಂತ್ರ್ಯದ ಬಗೆಗಿನ ಜಾಗೃತಿ ಹಾಗೂ ಸಾಮಾಜಿಕ ಅರಿವು ಮೂಡಿಸುವಲ್ಲಿ ಶ್ರೀ ವೆಂಕಟಕೃಷ್ಣಯ್ಯನವರ ಪಾತ್ರ ಅತ್ಯಂತ ಮಹತ್ವಪೂರ್ಣವಾದುದು. ಮೈಸೂರು ಪ್ರಾಂತ್ಯದ ಸಾಮಾಜಿಕ ಹಾಗೂ ಅರ್ಥಿಕ ಬೆಳವಣಿಗೆಗೆ ಅವರು ಅವಿಶ್ರಾಂತವಾಗಿ ದುಡಿದವರು.

– ಶ್ರೀ ವಿ.ವಿ. ಗಿರಿ, ಭಾರತದ ಮಾಜಿ ರಾಷ್ಟ್ರಪತಿಗಳು

The Anathalaya website