Mysore tatayya image

ತಾತಯ್ಯ ನವರ ಪರಿಚಯ :

ಸ್ವಾತಂತ್ರ್ಯ ಪೂರ್ವದಲ್ಲೇ ದೇಶದ ಮಾದರಿ ಪ್ರಾಂತ್ಯವೆನ್ನಿಸಿಕೊಂಡಿದ್ದ, ದಕ್ಷಿಣಭಾರತದಲ್ಲೇ 'ಶಿಕ್ಷಣಕಾಶಿ' ಎಂಬ ಪ್ರಖ್ಯಾತಿಗೆ ಪಾತ್ರವಾಗಿದ್ದ ಮೈಸೂರು ನಗರವನ್ನು ಕಟ್ಟಿ ಬೆಳೆಸುವಲ್ಲಿ ಬದುಕನ್ನೇ ಸಮರ್ಪಿಸಿ ದುಡಿದ ಮಹನೀಯರಲ್ಲಿ ದಯಾಸಾಗರ ಎಂ.ವೆಂಕಟಕೃಷ್ಣಯ್ಯನವರ ಪಾತ್ರ ಬಲು ದೊಡ್ಡದು. ಮೈಸೂರಿನ ಪತ್ರಿಕೋದ್ಯಮ ಪಿತಾಮಹರಾಗಿ,ರಾಜಗುರು-ರಾಜನೀತಿಜ್ಞರಾಗಿ,ಆದರ್ಶ ಅಧ್ಯಾಪಕರಾಗಿ,ಸಾಮಾಜಿಕ ಕಾರ್ಯಕರ್ತರಾಗಿ, ಶ್ರೇಷ್ಠ ಸಾಹಿತಿಗಳಾಗಿ,ಸ್ತ್ರೀ ವಿದ್ಯಾಭ್ಯಾಸ ಪ್ರವರ್ತಕರಾಗಿ, ಅಸ್ಪೃಶ್ಯೋದ್ಧಾರಕರಾಗಿ, ಶಿಕ್ಷಣ ಸಂಸ್ಥೆಗಳ ಸ್ಥಾಪಕರಾಗಿ,ದೀನದುರ್ಬಲರ ದನಿಯಾಗಿ ಅವರು ಸಲ್ಲಿಸಿದ ಸೇವೆ ಅನುಪಮ ಮತ್ತು ಅವಿಸ್ಮರಣೀಯ.ಅದಕ್ಕಾಗಿಯೇ ಮೈಸೂರಿನ ನಾಗರೀಕರು ಅವರನ್ನು 'ತಾತಯ್ಯ' ನೆಂದು, ವೃದ್ಧಪಿತಾಮಹ,ದಯಾಸಾಗರ ಎಂದು ಕರೆದು ಗೌರವಿಸಿದ್ದು. ಮೈಸೂರಿನ ಇಂದಿನ ನಗರ ಬಸ್ ನಿಲ್ದಾಣದ ಎದುರಿಗಿರುವ 'ತಾತಯ್ಯ ಪಾರ್ಕ್' ನಲ್ಲಿ ಶ್ರೀ ವೆಂಕಟಕೃಷ್ಣಯ್ಯನವರ ಪ್ರತಿಮೆಯನ್ನು ಸ್ಥಾಪಿಸಿ ಮೈಸೂರು ಮಹಾಜನತೆ ಅವರಿಗೆ ಗೌರವ ಸಮರ್ಪಿಸಿದೆ.

ಮುಂದೆ ಓದಿ

ಶಿಕ್ಷಣತಜ್ಞ

ಜನಪರರ ದುಃಖ ಸಂಕಷ್ಟಗಳಿಗೆ ಅವರ ನಿರಕ್ಷರತೆಯೇ ಕಾರಣವೆಂಬುದನ್ನು ತೀರಾ ತಾರುಣ್ಯದಲ್ಲಿಯೇ ಕಂಡುಕೊಂಡ ವೆಂಕಟಕೃಷ್ಣಯ್ಯ ಶಾಲೆಗಳನ್ನು ಸ್ಥಾಪಿಸುವುದರ ಮೂಲಕ ಅಂದಿನ ಮೈಸೂರು ನಗರದಲ್ಲಿ ವಿದ್ಯಾಪ್ರಸಾರದ ಚಳುವಳಿಯನ್ನೇ ಕೈಗೊಂಡರು. ಇಂದಿನ ಪ್ರಖ್ಯಾತ ವಿದ್ಯಾಸಂಸ್ಥೆಗಳಾದ ಮರಿಮಲ್ಲಪ್ಪ ಶಾಲೆ,ಮಹಾರಾಣಿ ಕಾಲೇಜ್,ಶಾರದಾವಿಲಾಸ ಕಾಲೇಜ್, ಸದ್ವಿದ್ಯಾ ಪಾಠಶಾಲೆ ಇವೆಲ್ಲಾ ತಾತಯ್ಯನವರ ಕೈಗೂಸುಗಳು.ಶಿಕ್ಷಣಕ್ಕೆ ಅಷ್ಟೇನು ಮಹತ್ವವೂ, ಅವಕಾಶವೂ ಇರದಿದ್ದ ಕಾಲದಲ್ಲಿ ತಾವೇ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ,ಸ್ವತಃ ೩೫ ವರ್ಷ ಅಧ್ಯಾಪಕರಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರಜ್ಞಾನದ ಬೆಳಕು ನೀಡಿದರು. ಒಬ್ಬ ಆದರ್ಶ ಶಿಕ್ಷಕರಾಗಿ ಅವರು ಒಂದು ತಲೆಮಾರಿನವರಲ್ಲಿ ಬದ್ಧತೆ ಹಾಗೂ ಆದರ್ಶವನ್ನು ಬೆಳೆಸಿದರು. ಕಾಲಕ್ರಮದಲ್ಲಿ ಅವರ ಅನೇಕ ಶಿಷ್ಯರು ನ್ಯಾಯಾಂಗ, ವೈದ್ಯರಂಗ, ರಾಜಕೀಯ, ಪತ್ರಿಕೋದ್ಯಮ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿದರು.

ಮುಂದೆ ಓದಿ

ಪತ್ರಿಕೋದ್ಯಮಿ

ಕನ್ನಡ ಪತ್ರಿಕೋದ್ಯಮವು ಇನ್ನೂ ಕಣ್ಣು ಬಿಡುತ್ತಿದ್ದ ಕಾಲದಲ್ಲೇ, ೧೨೫ ವರ್ಷಗಳ ಹಿಂದೆಯೇ ಧೈರ್ಯದಿಂದ ಪತ್ರಿಕಾ ವ್ಯವಸಾಯಕ್ಕೆ ತೊಡಗಿದವರು ತಾತಯ್ಯನವರು. ಪ್ರಾಮಾಣಿಕತೆಯಿಂದ ಪತ್ರಿಕೋದ್ಯಮದ ತತ್ವಗಳನ್ನು ಪಾಲಿಸಿಕೊಂಡು ಸಾರ್ವಜನಿಕ ಸೇವೆ ಮಾಡಿದ ಅನೇಕರಲ್ಲಿ ತಾತಯ್ಯನವರಿಗೆ ಅಗ್ರಸ್ಥಾನ ಸಲ್ಲುವುದು. ಸಾಮಾಜಿಕ ಜಾಗೃತಿಗಾಗಿ ಹಲವು ಪತ್ರಿಕೆಗಳನ್ನು ಆರಂಭಿಸಿ, ನಡೆಸಿದ ತಾತಯ್ಯನವರು 'ಮೈಸೂರು ಪತ್ರಿಕೋದ್ಯಮ ಪಿತಾಮಹ' ಎಂಬ ಗೌರವಕ್ಕೆ ಪಾತ್ರರಾದವರು. ಕನ್ನಡದಲ್ಲಿ ಸ್ವತಂತ್ರ ಪತ್ರಿಕೆಗಳೇ ಇಲ್ಲದಿದ್ದ ಕಾಲದಲ್ಲಿ ಸಾಧ್ವಿ,ಉದಯ ಚಿಂತಾಮಣಿ, ವಿದ್ಯಾದಾಯಿನಿ, ವೃತ್ತಾಂತ ಚಿಂತಾಮಣಿ,ಹಿತಭೋದಿನಿ,ಸಂಪದಭ್ಯುದಯ, ಮುಂತಾದ ಕನ್ನಡ ಪತ್ರಿಕೆಗಳನ್ನು, Wealth of Mysore, Mysore Patriot,The civil and social journal, Nature cure ಮುಂತಾದ ಇಂಗ್ಲೀಷ್ ಪತ್ರಿಕೆಗಳನ್ನು ನಡೆಸಿ ಜನಜಾಗೃತಿಯನ್ನುಂಟು ಮಾಡಿದರು.

ಮುಂದೆ ಓದಿ

ಸಾಹಿತಿ-ಚಿಂತಕ

ಸಾಹಿತಿಗಳೂ, ವಿದ್ವಾಂಸರೂ ಆಗಿದ್ದ ತಾತಯ್ಯ ಅರ್ಥಸಾಧನ, ದೇಶಾಭಿಮಾನ, ವಿದ್ಯಾರ್ಥಿ ಕರಭೂಷಣ, ಆರೋಗ್ಯಸಾಧನ ಪ್ರಕಾಶಿಕೆ, ಹರಿಶ್ಚಂದ್ರ ಚರಿತ್ರೆ ಮುಂತಾದ ವಿದ್ವತ್ಪೂರ್ಣ ಗ್ರಂಥಗಳನ್ನು ಬರೆದಿದ್ದಾರೆ. ಕನ್ನಡ ಸಾಹಿತ್ಯ ಪರಂಪರೆಗೆ ಗಣನೀಯ ಕೊಡುಗೆ ಸಲ್ಲಿಸಿರುವ ಶ್ರೀ ವೆಂಕಟಕೃಷ್ಣಯ್ಯನವರನ್ನು ೧೯೨೨ ರಲ್ಲಿ ದಾವಣಗೆರೆಯಲ್ಲಿ ನಡೆದ ೮ ನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆರಿಸಿ ಗೌರವ ಅರ್ಪಿಸಲಾಯಿತು. ತಾತಯ್ಯನವರು ೧೯೧೫ ರಲ್ಲಿ ಆರಂಭಗೊಂಡ ಕನ್ನಡ ಸಾಹಿತ್ಯ ಪರಿಷತ್ ನ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರವಹಿಸಿದರು. ಮೈಸೂರು ರಾಜ್ಯದಲ್ಲಿ ಸ್ವಾತಂತ್ರ್ಯದ ಕುರಿತು, ಸಾಮಾಜಿಕ ಪಿಡುಗುಗಳ ಕುರಿತು ಜನ ಜಾಗೃತಿ ಮೂಡಿಸುವಲ್ಲಿ ತಾತಯ್ಯ ನವರ ಲೇಖನಗಳ ಪಾತ್ರ ಬಹು ದೊಡ್ಡದು. ಸರ್ಕಾರದ ಕಾನೂನು ಕಾಯ್ದೆ , ರೀತಿ ನೀತಿಗಳ ಕುರಿತು ನಿರ್ಭಯವಾಗಿ , ಸತ್ಯನಿಷ್ಟತೆಯಿಂದ ಬರೆಯುತ್ತಿದ್ದ ತಾತಯ್ಯನವರ ಲೇಖನಗಳು ಸಾಮಾನ್ಯ ಜನರಲ್ಲಿ ಅರಿವು ಮೂಡಿಸುತ್ತಿತ್ತಲ್ಲದೆ ಸರ್ಕಾರದ ಅಧಿಕಾರಿಗಳಿಗೂ ಭಯ ಹುಟ್ಟಿಸುತ್ತಿತ್ತು.

ಮುಂದೆ ಓದಿ

ಸಾಮಾಜಿಕ ಸುಧಾರಕ

ದೀನದಲಿತರ ಉದ್ಧಾರಕರಾಗಿಯಂತೂ ಅವರ ಕೊಡುಗೆ ಅದ್ವಿತೀಯ. ಕಳೆದ ೧೨೦ ವರ್ಷಗಳಿಂದ ಅನಾಥ ವಿದ್ಯಾರ್ಥಿಗಳನ್ನು ಪೋಷಿಸಿ ಇಂದಿಗೂ 'ತಾತಯ್ಯನವರ ಅನಾಥಾಲಯ'ವೆಂದೇ ಖ್ಯಾತವಾಗಿರುವ ಮೈಸೂರು ಅನಾಥಾಲಯ ಅವರ ತ್ಯಾಗಕ್ಕೆ ಒಂದು ಜೀವಂತ ಸ್ಮಾರಕ. ದಟ್ಟದರಿದ್ರರಾದ,ತಬ್ಬಲಿಗಳಾದ ವಿದ್ಯಾರ್ಥಿಗಳಿಗಾಗಿ ಅನಾಥಾಲಯವನ್ನು ಸ್ಥಾಪಿಸಿದರು. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದನ್ನು ಬಹುತೇಕರು ವಿರೋಧಿಸುತ್ತಿದ್ದ ಕಾಲದಲ್ಲಿ ಸ್ವತಃ ತಾವೇ ಹೆಣ್ಣುಮಕ್ಕಳಿಗಾಗಿ ಶಾಲೆ ಆರಂಭಿಸಿದರು.ವಿಧವಾ ವಿವಾಹ ಏರ್ಪಡಿಸಿದರು. ವಿಧವೆಯರಿಗಾಗಿ ವೃತ್ತಿಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಮನೆ ತಪ್ಪಿದ, ತಬ್ಬಲಿ ಹೆಣ್ಣುಮಕ್ಕಳು ಪರಾಶ್ರಯಕ್ಕೆ ಬೀಳುವುದನ್ನು ತಪ್ಪಿಸಲು ಅವರಿಗಾಗಿ ಒಂದು ಉದ್ಯೋಗ ಕೇಂದ್ರವನ್ನು ಸ್ಥಾಪಿಸಿದರು.ಅಸ್ಪೃಶ್ಯರಿಗಾಗಿ ಶಾಲೆಗಳನ್ನು ಆರಂಭಿಸಿದರಲ್ಲದೆ ಅವರಿಗೆ ವೃತ್ತಿಶಿಕ್ಷಣವನ್ನು ಕಲಿಸುವ ಏರ್ಪಾಟು ಮಾಡಿದರು.

ಮುಂದೆ ಓದಿ

ಸುದ್ದಿ ಹಾಗೂ ಕಾರ್ಯಕ್ರಮಗಳು

ಕಾರ್ಯಕ್ರಮ :
ತಾತಯ್ಯ ನವರ ಜನ್ಮದಿನಾಚರಣೆ ಹಾಗೂ ವೆಬ್ ಸೈಟ್ ಲೋಕಾರ್ಪಣೆ : ಸೆಪ್ಟೆಂಬರ್ ೧೧, ೨೦೧೧ , ಶಾರದಾವಿಲಾಸ ಸಭಾಂಗಣ , ಮೈಸೂರು ಮುಂದೆ ಓದಿ

ಗ್ಯಾಲರಿ

Mysore Thathayya Gallery

ಶ್ರೀ ವೆಂಕಟ ಕೃಷ್ಣಯ್ಯ ನವರ ಸಾರ್ವಜನಿಕ ಸೇವೆ ಹಾಗೂ ಅಸ್ಪೃಶ್ಯತಾ ನಿವಾರಣೆ ಮತ್ತು ದೀನ ದಲಿತರ ಬಗೆಗಿನ ಅವರ ಕಾಳಜಿಯ ಪ್ರಯತ್ನಗಳು ನನ್ನ ಮನಸ್ಸು ಗೆದ್ದಿವೆ . ನಾನು ಅವರನ್ನು 'ಮೈಸೂರಿನ ಭೀಷ್ಮ ' ನೆಂದು ಪ್ರಶಂಸಿಸುವೆ . ಮೈಸೂರಿನ ಜನತೆಯಲ್ಲಿ ಅವರು 'Grand old man of Mysore' ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ .

– ಮಹಾತ್ಮಾ ಗಾಂಧಿ

ಶುದ್ಧ, ನಿಷ್ಕಳಂಕ ಜೀವನ ಹಾಗೂ ಸಾಮಾಜಿಕ ಸೇವೆಗೆ ಪ್ರಸಿದ್ಧರಾಗಿರುವ ಶ್ರೀ ವೆಂಕಟಕೃಷ್ಣಯ್ಯ ನವರು ಮೈಸೂರು ಪ್ರಾಂತ್ಯದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ನಿಸ್ವಾರ್ಥವಾಗಿ ದುಡಿದಿದ್ದಾರೆ. ಅವರ ಸರಳತೆ ಹಾಗೂ ಸಾಮಾಜಿಕ ಕಾಳಜಿಯ ಕಾರಣದಿಂದ ಮೈಸೂರಿನ ಜನತೆ ಅವರನ್ನು 'ತಾತಯ್ಯ' ಎಂದು ಪ್ರೀತಿಯಿಂದ ಕರೆದು ಗೌರವಿಸಿದೆ.

– ದಿವಂಗತ ಶ್ರೀ ಚಾಮರಾಜ ಒಡೆಯರ್, ಮೈಸೂರಿನ ಮಹಾರಾಜರು

ಜನತೆಯ ಹಿತಕ್ಕಾಗಿ ಜೀವಾವಧಿ ಸೇವೆ ಮಾಡಿರುವ ವೆಂಕಟಕೃಷ್ಣಯ್ಯನವರ ದೇಶಾಭಿಮಾನ, ಸಾರ್ವಜನಿಕ ಸೇವಾವೃತ್ತಿ ಮತ್ತು ಸ್ವಾರ್ಥತ್ಯಾಗ ಇವುಗಳ ಬಗ್ಗೆ ಗೌರವ ಅಭಿಮಾನವನ್ನು ಹೊಂದಿರುವವರ ಪೈಕಿ ನಾನು ಯಾರಿಗೂ ಹಿಂದಿಲ್ಲ. ಮೈಸೂರಿನಲ್ಲಿ ನನ್ನ ಅಧಿಕಾರ ಸೇವಾವಧಿಯಲ್ಲಿ ಅವರು ನನಗೆ ಇತ್ತ ಬೆಂಬಲದ ಕೃತಜ್ಞತಾಪೂರ್ವಕ ನೆನಪುಗಳು ನನ್ನಲ್ಲಿ ಎಂದಿಗೂ ಉಳಿಯುವುವು.

– ಎಂ. ವಿಶ್ವೇಶ್ವರಯ್ಯನವರು :

ಮೈಸೂರಿನ ಜನತೆಯಲ್ಲಿ ಸ್ವಾತಂತ್ರ್ಯದ ಬಗೆಗಿನ ಜಾಗೃತಿ ಹಾಗೂ ಸಾಮಾಜಿಕ ಅರಿವು ಮೂಡಿಸುವಲ್ಲಿ ಶ್ರೀ ವೆಂಕಟಕೃಷ್ಣಯ್ಯನವರ ಪಾತ್ರ ಅತ್ಯಂತ ಮಹತ್ವಪೂರ್ಣವಾದುದು. ಮೈಸೂರು ಪ್ರಾಂತ್ಯದ ಸಾಮಾಜಿಕ ಹಾಗೂ ಅರ್ಥಿಕ ಬೆಳವಣಿಗೆಗೆ ಅವರು ಅವಿಶ್ರಾಂತವಾಗಿ ದುಡಿದವರು.

– ಶ್ರೀ ವಿ.ವಿ. ಗಿರಿ, ಭಾರತದ ಮಾಜಿ ರಾಷ್ಟ್ರಪತಿಗಳು

The Anathalaya website