Mysore tatayya image

ಲೇಖನಗಳು

1. ದಯಾಸಾಗರ ಎಂ. ವೆಂಕಟಕೃಷ್ಣಯ್ಯನವರು - ಪಿ. ಆರ್. ರಾಮಯ್ಯ

Go Top

ಜಿ. ಓ. ಎಂ 'ತಾತಯ್ಯ', 'ವೃದ್ದ ಪಿತಾಮಹ', 'ದಯಾ ಸಾಗರ' ಎಂಬ ನಾನಾ ಪ್ರಿಯ ನಾಮಗಳಿಂದ ಎಂ. ವೆಂಕಟಕೃಷ್ಣನವರನ್ನು ಅವರ ಸಮಕಾಲೀನರು ಕರೆಯುತ್ತಿದ್ದರು. ಇವರು ೧೯೩೩ರಲ್ಲಿ ಮೃತರಾದರೂ, ಇವರ ಹೆಸರು ಇನ್ನೂ ಅನೇಕ ವರ್ಷಗಳೂ ಜನರ ನೆನಪಿನಲ್ಲಿರುತ್ತದೆ

ಇವರ ಹೆಸರನ್ನು ನಮ್ಮ ಮೈಸೂರಿನವರು ಯಾವತ್ತೂ ಮರೆಯಬಾರದು. ಇವರು ಮೈಸೂರಿನ ಜನರಿಗೆ ಮಾಡಿರುವ ಸೇವೆ ಮತ್ತು ಉಪಕಾರ ಅಪಾರವಾದುದು.

ಅವರ ಕಾಲದಲ್ಲಿ ಅವರು ಮೈಸೂರಿನ ಜನರ ಏಕಮಾತ್ರ ಮುಖಂಡರಾಗಿದ್ದರು. ಅವರು ಸರಕಾರದ ಅಧಿಕಾರದಲ್ಲಿರಲ್ಲ. ಆಗಿನ ಕಾಲದಲ್ಲಿ ಈಗಿನ ಹಾಗೆ ಮುಖ್ಯಮಂತ್ರಿಗಳನ್ನು ಚುನಾಯಿಸುವ ಹಾಗೆ ಮುಖ್ಯಮಂತ್ರಿಗಳನ್ನು ಚುನಾಯಿಸುವ ಅಧಿಕಾರ ಮೈಸೂರಿನ ಜನರಿಗೆ ಇದ್ದಿದ್ದರೆ ಅವರು ಅನೇಕ ವರ್ಷಗಳಕಾಲ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿರುತ್ತಿದ್ದರು. ಇಂಗ್ಲೆಂಡಿನಲ್ಲಿ ಗ್ಲಾಡ್‌ಸ್ಟನ್ ಮುಖ್ಯಮಂತ್ರಿ ಯಾವ ರೀತಿ ಜನಸೇವೆ ಮಾಡಿದನೋ ಇವರೂ ಹಾಗೆಯೇ ಮಾಡುತ್ತಿದ್ದರೆಂದು ಅವರ ಸಮಕಾಲೀನರು ಹೇಳುತ್ತಿದ್ದರು.

ವೆಂಕಟಕೃಷ್ಣಯ್ಯನವರ ಹೆಸರು ಮನೆಮಾತಾಗಿತ್ತು. ಮೈಸೂರಿನಲ್ಲಿ ಮಾತ್ರವೇ ಅಲ್ಲ. ಮದ್ರಾಸ್, ಪೂನಾ, ಬೊಂಬಾಯಿ ಕಲ್ಕತ್ತಾ, ಈ ಊರುಗಳಲ್ಲಿದ್ದ ಪತ್ರಿಕೆಗಳಿಗೆ ಇವರ ಹೆಸರು ಗೊತ್ತಿತ್ತು. ಅಲ್ಲಿನ ಆಗಿನ ಅನೇಕ ಪ್ರಜಾ ನಾಯಕರು ಇವರ ಪ್ರಜಾ ಸೇವೆಯ ಮಹಿಮೆಯನ್ನು ತಿಳಿದಿದ್ದರು.

ಅವರ ಗುರುತಾಗಿ ಮೈಸೂರು ನಗರದಲ್ಲಿ ಈಗಲೂ ಅನೇಕ ಸಂಸ್ಥೆಗಳವೆ. ಅವು ಯಾವುವೆಂದರೆ, ಮರಿಮಲ್ಲಪ್ಪ ಹೈಸ್ಕೂಲ್, ಶಾರದಾವಿಲಾಸ್ ಕಾಲೇಜ್ ಮತ್ತು ಹೈಸ್ಕೂಲ್, ದಳವಾಯಿ ಹೈಸ್ಕೂಲ್, ಸದ್ವಿದ್ಯಾಪಾಠಶಾಲಾ, ಆರ್ಯ ಬಾಲಿಕಾ ಪಾಠ ಶಾಲೆ, ಮೈಸೂರು ಅನಾಥಾಲಯ, ಇನ್ನೂ ಅನೇಕ ಚಿಕ್ಕ ಸಂಸ್ಥೆಗಳು ಇವರಿಂದ ಸ್ಥಾಪಿತವಾಗಿ ಇನ್ನೂ ಬದುಕಿವೆ.

ಇವರು ಬಹಳ ವೈಭವವಾಗಿ ಬಾಳಿದ ಕಾಲದಲ್ಲಿ, ವಾಸಮಾಡುತ್ತಿದ್ದ ಇವರ ಸ್ವಂತ ಮನೆ 'ಪದ್ಮಾಲಯ' ಶೇಷಾದ್ರಿ ಭವನದ ಎದುರಿಗೆ ಈಗಲೂ ಇದೆ. ಇವರು ಕಡೆಗಾಲದಲ್ಲಿದ್ದ ಸ್ವಂತ ಮನೆ ಮತ್ತು ವಾಣಿವಿಲಾಸ ಪ್ರೆಸ್ ಈಗ ಲಕ್ಷ್ಮೀಪುರದಲ್ಲಿದೆ. ಮೈಸೂರ್ ನಗರದಲ್ಲಿ ಶ್ರೀ ಅಗರಂ ರಂಗಯ್ಯನವರು ನಡೆಸುತ್ತಿರುವ ಸಾಧ್ವಿ ಪತ್ರಿಕೆ ಇವರಿಂದ ಸ್ಥಾಪಿತವಾದುದು. ಲಿಟರರಿ ಯೂನಿಯನ್ ಎಂಬ ಸಂಸ್ಥೆ ದಿವಾನ್ ರಂಗಚಾರ್ಲುರವರಿಂದ ಸ್ಥಾಪಿತವಾಗಿ ಇವರಿಂದ ಪೋಷಣೆ ಪಡೆಯಿತು.ಇವರು ಮೈಸೂರು ದಿವಾನರುಗಳೆಲ್ಲರನ್ನೂ ಬಲ್ಲರು. ಅವರ ಬಹಳ ಹತ್ತಿರದ ಮಿತ್ರರಾಗಿದ್ದರು. ಮೊದಲನೇ ದಿವಾನರಾದ ಸಿ. ರಂಗಚಾರ್ಲುರವರು ಇವರ ಗುರುಗಳು. ಎರಡನೇ ದಿವಾನರಾದ ಕೆ. ಶೇಷಾದ್ರಿ ಅಯ್ಯರ್‌ರವರು ಇವರ ರಾಜಕೀಯ ವಿರೋಧಿಗಳೂ, ಮಿತ್ರರೂ ಆಗಿದ್ದರು. ಮೂರನೇ ದಿವಾನರಾದ ಪಿ.ಎನ್ ಕೃಷ್ಣಮೂರ್ತಿಯವರಿಗೆ ಇವರು ಪರಮಮಿತ್ರರು. ನಾಲ್ಕನೇ ದಿವಾನರಾದ ವಿ.ಪಿ. ಮಾಧವರಾಯರೂ ಕೂಡ ದಿವಾನ್ ರಂಗಾಚಾರ್ಲುರವರ ಶಿಷ್ಯರೇ ಆಗಿದ್ದರು. ಆದರೂ ವೆಂಕಟಕೃಷ್ಣಯ್ಯನವರಿಗೂ ಮಾಧವರಾಯರಿಗೂ ರಾಜಕೀಯ ಕುಸ್ತಿಗಳು ಆಗುತ್ತಲೇ ಇದ್ದವು. ಐದನೇ ದಿವಾನರಾದ ಆನಂದರಾಯರೂ ಇವರೂ ಮಿತ್ರರು.ಆರನೇ ದಿವಾನರಾದ ವಿಶ್ವೇಶ್ವರಯ್ಯನವರು ವೆಂಕಟಕೃಷ್ಣಯ್ಯನವರನ್ನು ಭೀಷ್ಮನಂತೆ ಗೌರವಿಸುತ್ತಿದ್ದರು. ಏಳನೇ ದಿವಾನರಾದ ಎಂ. ಕಾಂತರಾಜ ಅರಸರವರಿಗೂ, ಇವರಿಗೂ ಭಿನ್ನಾಭಿಪ್ರಾಯವಿದ್ದರೂ ಪರಸ್ಪರ ಗೌರವವಿತ್ತು. ಎಂಟನೇ ದಿವಾನರಾದ ಎಂ. ಆರ್. ಬ್ಯಾನರ್ಜಿಯವರು ಇವರನ್ನು ಗೌರವ ಸನ್ಮಾನ್ಯರಂತೆ ಕಾಣುತ್ತಿದ್ದರು. ಒಂಭತ್ತನೇ ದಿವಾನ್ ಮಿರ್ಜಾ ಇಸ್ಮಾಯಿಲ್ರವರನ್ನು ವೆಂಕಟಕೃಷ್ಣಯ್ಯನವರು ಬಾಲ್ಯದಿಂದಲೂ ಬಲ್ಲರು. ಆದ್ದರಿಂದ ಶಿಷ್ಯನಿಗೆ ಬುದ್ಧಿವಾದ ಹೇಳುವಂತೆ ನಿಜ ನೀತಿಬೋಧನೆ ಮಾಡುತ್ತಿದ್ದರು.

ಹೀಗೆ ವೆಂಕಟಕೃಷ್ಣಯ್ಯನವರು ಒಂಭತ್ತು ದಿವಾನರುಗಳನ್ನು ನೋಡಿ ಅವರ ವ್ಯವಹಾರಗಳನ್ನೆಲ್ಲಾ ಚೆನ್ನಾಗಿ ಪರಿಶೀಲಿಸುತ್ತಿದ್ದರು.

ಇವರ ಸೇವಾಕಾರ್ಯದ ಗುರುತಾಗಿ ಮೈಸೂರು ಪೌರಸಭೆಯ ಭವನದಲ್ಲೂ, ಮರಿಮಲ್ಲಪ್ಪ ಸ್ಕೂಲ್‌ನಲ್ಲೂ, ಶಾರದಾ ವಿಲಾಸ ಹೈಸ್ಕೂಲ್‌ನಲ್ಲಿಯೂ ಇವರ ಭಾವಚಿತ್ರಗಳು ಪ್ರಕಾಶಿಸುತ್ತಿವೆ.ಇವರು ಮೈಸೂರಿನ ಪ್ರತಿಕೋದ್ಯಮಿಗಳಿಗೆ ಆದಿಗುರು, ಮಹಾಗುರು. ಇವರು ವಿದ್ಯಾರ್ಥಿಗಳಿಗಾಗಿ ಬರೆದು ಪ್ರಕಟಿಸಿದ ಅನೇಕ ಗ್ರಂಥಗಳ ಪೈಕಿ 'ಚೋರಗ್ರಹಣ ತಂತ್ರ','ವಿದ್ಯಾರ್ಥಿಕರಭೂಷಣ','ಬೂಕರ್ ಟಿ. ವಾಷಿಂಗ್‌ಟನ್',' ಟೆಲಿಮಾಕಸ್ಸನ ಸಾಹಸ ಕೃತ್ಯಗಳು', 'ಪರಂತಪ ವಿಜಯ' ಇವುಗಳು ಅನೇಕ ಲೈಬ್ರರಿಗಳಲ್ಲಿಯೂ, ಮನೆಗಳಲ್ಲಿಯೂ ಇರಬಹುದು.

ಆಗಿನಿಂದ ಈಗಿನವರೆಗೂ ಇಂಥ ಮಹನೀಯರು ಮೈಸೂರಿನಲ್ಲಿ ಹುಟ್ಟಲಿಲ್ಲ, ಎಂದು ತಿಳಿದವರು ಹೇಳುತ್ತಾರೆ. ಅವರನ್ನು ಮೀರಿದ ಉಪಾಧ್ಯಾಯರಿರಬಹುದು, ಶಾಸನಸಭಾ ಸದಸ್ಯರಿರಬಹುದು, ಪತ್ರಿಕಾಕರ್ತರಿರಬಹುದು, ಸಾರ್ವಜನಿಕರಿರಬಹುದು, ಗ್ರಂಥಕರ್ತರಿರಬಹುದು, ಆದರೆ ಈ ಎಲ್ಲ ವ್ಯಕ್ತಿಗಳನ್ನೂ ವ್ಯವಹಾರಗಳನ್ನು ತಮ್ಮ ಒಂದು ವ್ಯಕ್ತಿತ್ವದಲ್ಲಿ ಹುದುಗಿಸಿಕೊಂಡು ಅಷ್ಟು ದೀರ್ಘಕಾಲ ಯಶಸ್ವಿಯಾಗಿ ಸಢವೆ ನಡೆಸಿದ ಮಹಾಪುರುಷರು ಎಂ. ವೆಂಕಟಕೃಷ್ಣಯ್ಯನವರನ್ನು ಬಿಟ್ಟರೆ ಮತ್ತೊಬ್ಬರಿಲ್ಲ. ಅವರು ಹುಟ್ಟಿದಾಗ ಬಡವರು, ಬೆಳೆದಾಗ ಬಡವರು, ಅಂತ್ಯಕಾಲದಲ್ಲಿಯೂ ಬಡವರು.

ಐಶ್ವರ್ಯ ಅಧಿಕಾರಗಳ-ಸಂಪಾದನೆಯು ಅವರ ಜೀವನದ ಗುರಿಯಾಗಿರಲಿಲ್ಲ. ಅನ್ಯಾಯವನ್ನು ಧೈರ್ಯವಾಗಿ ಪ್ರತಿಭಟಿಸಿ ಬಡವರಿಗೂ, ಬಲ್ಲಿದವರಿಗೂ ನ್ಯಾಯವನ್ನು ದೊರಕಿಸುವುದಕ್ಕಾಗಿ ಅವರು ಪ್ರಬಲರೊಡನೆಯೂ, ಅಧಿಕಾರಿಗಳೊಡನೆಯೂ ಉಜ್ವಲವಾಗಿ ಕಾದಾಡಿದರು.

ಅಧಿಕಾರಿಗಳ ಬೆದರಿಕೆಗಳಿಗೂ, ಶಿಕ್ಷೆಗಳಿಗೂ, ಅವರು ಅಂಜುತ್ತಿರಲಿಲ್ಲ. ಅಧಿಕಾರಿಗಳ ಮತ್ತು ಅಹಂಕಾರಿಗಳ ಮದವನ್ನು ಇವರು ತುಳಿಯುತ್ತಿದ್ದರು. ಲೇಖನಿಯೇ ಇವರ ಆಯುಧ. ಭಾಷಣವೇ ಇವರ ಶಕ್ತಿ, ಪತ್ರಿಕೆಗಳು, ಸಾರ್ವಜನಿಕ ವೇದಿಕೆ ಅಸೆಂಬ್ಲಿ ಮತ್ತು ನ್ಯಾಯ ವಿಧಾಯಕ ಸಭೆಯೇ ಇವರ ಯುದ್ಧರಂಗ. ಎಷ್ಟೋ ಜನರಿಗೆ ಉಪಕಾರ ಮಾಡಿದ್ದಾಗ್ಯೂ ಯಾರಿಂದಲೂ, ಯಾವ ಕಾಲದಲ್ಲಿಯೂ ಪ್ರತ್ಯುಪಕಾರವನ್ನು ಇವರು ನಿರೀಕ್ಷಿಸುತ್ತಿರಲಿಲ್ಲ.ಅನಾಥಬಂಧು, ಬಡವರಗೆಳೆಯ,ಆರ್ತರಕ್ಷಕ ಇವರಾಗಿದ್ದರು. ವಿದ್ಯಾಲಯಗಳೇ ಇವರ ದೇವರ ಗುಡಿ, ಅನಾಥಾಲಯಗಳೇ ಇವರ ತಪೋವನ, ಬಿಡುವಿಲ್ಲದೇ ದುಡಿಯುವುವುದೇ ಇವರ ತಪಸ್ಸು. ಜನತೆಯೇ ಇವರ ಜನಾರ್ದನ.

ವೆಂಕಟಕೃಷ್ಣಯ್ಯನವರು ಎಲ್ಲರಂತೆಯೇ ದೊಡ್ಡ ಕುಟುಂಬಿ. ಆದರೆ ಅವರ ಪಾಲಿಗೆ ಬಂದಷ್ಟು ಕುಟುಂಬಕಷ್ಟಗಳೂ, ದುಃಖಗಳೂ, ಅನೇಕರಿಗೆ ಬರುವುದಿಲ್ಲ. ಒಬ್ಬರಾಗುತ್ತಲೂ ಒಬ್ಬರು, ಇಬ್ಬರು ಪತ್ನಿಯರೂ ತೀರಿಹೋದರು. ಬಹಳ ಬುದ್ಧಿವಂತನಾದ ವಯಸ್ಸಿಗೆ ಬಂದ, ವಿದ್ಯಾವಂತನಾಗಿ ಕಾಲೇಜ್ ಪ್ರಾಧ್ಯಾಪಕನಾಗಿದ್ದ ಹಿರಿಯ ಮಗನಿಗೆ ಬುದ್ಧಿ ಭ್ರಮಣೆಯಾಗಿ ಕಡೆಯವರೆವಿಗೂ ಆತನು ಸಂಕಟಪಟ್ಟನು. ವಿಶ್ರಾಂತಿಯಿಂದ ಇರುವ ವೃದ್ಧಾಪ್ಯದಲ್ಲಿ ತಾತಯ್ಯನವರಿಗೆ ಹಿರಿಯ ಮಗನ ದೊಡ್ಡ ಸಂಸಾರವನ್ನು ಪೋಷಿಸಿಕೊಂಡುಬರುವ ಜವಾಬ್ದಾರಿಬಿತ್ತು. ಅದನ್ನು ಅವರು ಧೈರ್ಯವಾಗಿ ನಿರ್ವಹಿಸಿದರು. ಅಮಲ್ದಾರ್ ಅಧಿಕಾರಕ್ಕೆ ಏರಿದ ಎರಡನೇ ಪುತ್ರ ಒಂದು ಆಕಸ್ಮಿಕ ಘಟನೆಗೆ ಗುರಿಯಾಗಿ ಮಧ್ಯವಯಸ್ಸಿನಲ್ಲಿಯೇ ಮೃತನಾದ. ಅಪಾರವಾದ ಪುತ್ರಶೋಕವನ್ನು ವೃದ್ಧಪಿತಾಮಹರು ಸಹಿಸಿಕೊಂಡರು. ಒಳ್ಳೆ ವಿದ್ಯಾವತಿಯಾದ ಹೆಣ್ಣು ಮಗಳು ಮತ್ತು ಪ್ರತಿಭಾಶಾಲಿಯಾದ ಅಳಿಯ ಇಬ್ಬರೂ ಬಹಳ ಚಿಕ್ಕವಯಸ್ಸಿನಲ್ಲಿಯೇ ಮೃತರಾದರು. ಇನ್ನೂ ಒಬ್ಬ ಬಹಳ ಚಿಕ್ಕ ವಯಸ್ಸಿನ ಅತ್ಯಂತ ಬುದ್ಧಿಶಾಲಿಯಾದ ಮಗ ಹೈಸ್ಕೂಲ್‌ನಲ್ಲಿ ಇದ್ದಾಗಲೇ ತೀರಿಕೊಂಡು. ಮಗಳ ಇಬ್ಬರು ಗಂಡುಮಕ್ಕಳೂ, ವಯಸ್ಸಿಗೆ ಬಂದವರು ಮೃತಿ ಹೊಂದಿದರು. ವೃದ್ಧಾಪ್ಯದಲ್ಲಿ ತಾವು ಕಟ್ಟಿ ಚೆನ್ನಾಗಿ ಬಾಳಿದ ಮನೆಯಾದ 'ಪದ್ಮಾಲಯ'ವನ್ನು ಸಾಲ ತೀರಿಸಲು ಮಾರಬೇಕಾಯಿತು. ಇವೆಲ್ಲಾ ಕುಟುಂಬದ ದುಃಖಗಳು. ಇದಲ್ಲದೆ ಸಾರ್ವಜನಿಕ ಜೀವನದ ಸಂಬಂಧವಾಗಿಯೂ ಇವರಿಗೆ ಅನೇಕ ಕಷ್ಟ ನಷ್ಟಗಳುಂಟಾದವು. ಇವರು ಮೃತರಾಗುವುದಕ್ಕೆ ಐದು ವರ್ಷ ಮುಂಚೆ ಇವರ ಸ್ತಂಭಗಳಾದ ನಾಲ್ಕೈದು ಪತ್ರಿಕೆಗಳನ್ನು ಸರಕಾರವು ಒಂದೇ ದಿವಸ ಮುಟ್ಟುಗೋಲು ಹಾಕಿತು. ಇನ್ನು ಯಾರಾದರು ಆಗಿದ್ದರೆ ಈ ಕಷ್ಟದಲ್ಲಿ ಕುಗ್ಗಿಹೋಗಬೇಕಾಗಿತ್ತು. ಆದರೆ ತಾತಯ್ಯನವರು ಕುಗ್ಗಲಿಲ್ಲ ಸಂತೋಷಕಾಲದಲ್ಲಿ ಹಿಗ್ಗದೆ, ದುಃಖ ಕಾಲದಲ್ಲಿ ಕುಗ್ಗದೆ ಇವರದು ನಿಜವಾಗಿ ವೈರಾಗ್ಯ ಜೀವನ ಸಂಸಾರಿಯಾಗಿದ್ದರೂ, ಸನ್ಯಾಸಿಯಂತೆ ತ್ಯಾಗಬುದ್ಧಿಯಿಂದ ಇಹಲೋಕಯಾತ್ರೆಯನ್ನು ನಡೆಸಿದರು.

ಯಾವಾಗಲೂ ಇವರು ಆಶಾಜೀವಿಯಾಗಿಯೇ ಇದ್ದರು. ನಿರಾಸೆ ಎಂಬುದು ಇವರ ಹತ್ತಿರ ಸುಳಿಯುತ್ತಿರಲಿಲ್ಲ . ಬಡವರಾಗಿದ್ದರೂ ಇವರ ಉದಾರತೆಯು ಪರೋಪಕಾರ ಭಾವನೆಯು ಅತ್ಯಂತ ಶ್ರೀಮಂತ ಭಾವದಲ್ಲಿಯೇ ಕೂಡಿತ್ತು. ಇಷ್ಟು ವರ್ಷಗಳಾದರೂ ಇಂತವರು ಮತ್ತೊಬ್ಬರು ಮೈಸೂರಿನಲ್ಲಿ ಹುಟ್ಟಲಿಲ್ಲ, ಹುಟ್ಟಲ್ಲ.

2. ಮೈಸೂರಿನ ಭೀಷ್ಮ: ವೃದ್ಧಪಿತಾಮಹ, ದಯಾಸಾಗರ ವೆಂಕಟಕೃಷ್ಣಯ್ಯ - ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ

Go Top

ಬದುಕಿನ ಕಷ್ಟ ಕಾರ್ಪಣ್ಯಗಳಲ್ಲಿ ನಲುಗುತ್ತಿರುವವರಿಗೆ ಸಹಾಯಮಾಡುವ ಮೂಲಕ 'ದಯಾಸಾಗರ' ರೆಂದೂ ತಮ್ಮ ಸಾರ್ಥಕ ಸುದೀರ್ಘ ಕಾಲದ ಸಾರ್ವಜನಿಕ ಬದುಕಿನಿಂದ ಕುಟುಂಬದ ಯಜಮಾನನೆಂಬಂತೆ ಜನ ತಮ್ಮನ್ನು ನಡೆಸಿಕೊಂಡ ಕಾರಣದಿಂದ 'ವೃದ್ಧಪಿತಾಮಹ'ರೆಂದೂ ಪ್ರಸಿದ್ಧರಾಗಿದ್ದ ಎಂ. ವೆಂಕಟಕೃಷ್ಣಯ್ಯನವರು ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲ್ಲೂಕಿನ ಅಂತರಸಂತೆ ಹೋಬಳಿಗೆ ಸೇರಿದ ಮಗ್ಗೆ ಎಂಬ ಗ್ರಾಮದಲ್ಲಿ ೫-೯-೧೮೪೪ ರಲ್ಲಿ (ಕ್ರೋಧಿ ಸಂವತ್ಸರದ ನಿಜ ಶ್ರಾವಣ ಬಹುಳ ಅಷ್ಟಮಿ ಗುರುವಾರ) ಕೃಷ್ಣಜನ್ಮಾಷ್ಟಮಿಯ ದಿನದಂದು ಹುಟ್ಟಿದರು. ಸುಬ್ಬಯ್ಯನವರು ಅವರ ತಂದೆ; ಮೈಸೂರು ಅರಮನೆಯಲ್ಲಿ ಆಸ್ಥಾನಪಂಡಿತರಾಗಿದ್ದ ಅಷ್ಟಪದಿ ರಾಮಶಾಸ್ತ್ರಿಗಳ ಮಗಳು ಭಾಗೀರಥಮ್ಮನವರು ಅವರ ತಾಯಿ. ವೆಂಕಟಕೃಷ್ಣಯ್ಯನವರ ತಂದೆ ೧೮೫೪ ರಲ್ಲಿ ಮಗ್ಗೆಯಲ್ಲಿ ಸ್ವರ್ಗಸ್ಥರಾದ ಮೇಲೆ ತಾಯಿ ತಮ್ಮ ಕುಟುಂಬವನ್ನು ಮೈಸೂರಿಗೆ ಕರೆತಂದರು. ಇಲ್ಲಿಗೆ ಬಂದ ಮೇಲೆ ತುಂಬ ಕಾರ್ಪಣ್ಯದ ಬದುಕು ನಡೆಸಬೇಕಾಯಿತು. ಮುಮ್ಮಡಿ ಕೃಷ್ಣರಾಜ ಒಡೆಯರ ಸೇವೆಯಲ್ಲಿ ದುಯ್ಯಂ ಭಕ್ಷಿಗಳಾಗಿದ್ದ ಭಾಗವತ ಸುಬ್ಬರಾಯರು ಕರುಣೆ ತೋರಿ ಈ ಕುಟುಂಬಕ್ಕೆ ಆಶ್ರಯವನ್ನು ಕೊಟ್ಟರು. ತಮ್ಮದೇ ವಠಾರದ ಮನೆಯೊಂದನ್ನು ಕೊಟ್ಟು ಅನುಕೂಲಮಾಡಿದರು. ಅಲ್ಲದೆ ವೆಂಕಟಕೃಷ್ಣಯ್ಯನವರಿಗೆ ತಾವೇ ಉಪನಯನ ಮಾಡಿಸಿ, ವಿದ್ಯಾಭ್ಯಾಸಕ್ಕೆ ಕೂಡ ತಕ್ಕ ಏರ್ಪಾಡು ಮಾಡಿದರು.

ವೆಂಕಟಕೃಷ್ಣಯ್ಯನವರು ಮೊದಲು ಸೇರಿದ್ದು ರಾಜಾಸ್ ಫ್ರೀ ಸ್ಕೂಲಿಗೆ ; ಸುಮಾರು ೩ ವರ್ಷಗಳ ವ್ಯಾಸಂಗ ಅಲ್ಲಿ ನಡೆದ ಮೇಲೆ ಅವರ ಕೆಲವರು ಮಿತ್ರರ ಪ್ರಯತ್ನದಿಂದಾಗಿ, ಅನಂತರ ವೆಸ್ಲಿಯನ್ ಮಿಷನ್ ಸ್ಕೂಲಿಗೆ ಸೇರಿಕೊಂಡರು. ಇಲ್ಲಿ ಐದಾರುವರ್ಷಗಳ ವ್ಯಾಸಂಗ ನಡೆಯಿತು. ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಮೇಲೆ (೧೮೭೩) ಮುಂದೆ ಓದಲು ಅವರಿಗೆ ಅನುಕೂಲವಾಗಲಿಲ್ಲ.

ಮೈಸೂರಿನ ಮರಿಮಲ್ಲಪ್ಪನವರ ಉಪಾಧ್ಯಾಯವೃತ್ತಿ ತೊಡಗಿತು. ಮುಂದೆ ಈ ವೃತ್ತಿಯಲ್ಲೇ ಅವರು ಮುನ್ನಡೆದರು. ಜೊತೆಜೊತೆಗೇ ತಮ್ಮನ್ನು ಸಾರ್ವಜನಿಕ ಸೇವಾರಂಗದಲ್ಲಿಯೂ ಉತ್ಸಾಹದಿಂದ ತೊಡಗಿಸಿಕೊಂಡರು. ಹೀಗೆ ತೊಡಗಿಸಿ ಕೊಂಡವರು ಸರಕಾರದ ಹಾಗೂ ಖಾಸಗಿಯಾದ ಅನೇಕ ಆಡಳಿತಮಂಡಳಿಗಳಲ್ಲಿ, ಸಂಘಸಂಸ್ಥೆಗಳಲ್ಲಿ , ಸಮಿತಿಗಳಲ್ಲಿ ಅವಿಶ್ರಾಂತವಾಗಿ ದುಡಿಯುವ ಮೂಲಕ ತಮ್ಮ ಜೀವನಾಂತ್ಯದವರೆಗೆ (೮-೧೧-೧೯೩೩) ತಾವೇತಾವಾಗಿ ವಿಜೃಂಭಿಸಿದರು. ಅವರ ವೈಯುಕ್ತಿಕ ಜೀವನ ವಿವರಗಳೂ ಸಾರ್ವಜನಿಕಸೇವೆಯ ವಿವರಗಳೂ ಅವರ ಆತ್ಮಕಥೆಯಲ್ಲಿ ಸ್ವಲ್ಪಮಟ್ಟಿಗೆ, ಜೀವನ ಚರಿತ್ರೆಗಳಲ್ಲಿ ಸಾಕಷ್ಟು ವಿಸ್ತಾರವಾಗಿ ಕಂಡುಬರುತ್ತವೆ. ಆದರೆ ದಿಟವಾಗಿ ಗುರುತಿಸತಕ್ಕ ವಿವರಗಳು ಇನ್ನೂ ಬಹಳ ಇವೆ. ಅವು ಹೆಚ್ಚಿನ ಶೋಧನೆಯನ್ನು, ಶೋಧಕರ ಆಸಕ್ತಿಯನ್ನು ಅವಲಂಬಿಸಿ ಮುಂದೆ ನಡೆಯಬೇಕಾದ ಕೆಲಸಗಳು.

ವೆಂಕಟಕೃಷ್ಣಯ್ಯನವರದು ಬಹುಶ್ರುತ ಪಾಂಡಿತ್ಯ, ಬಹುಮುಖ ವ್ಯಕ್ತಿತ್ವ. ಅವರ ದುಡಿಮೆಯ ಕ್ಷೇತ್ರಗಳು ಅವರ ಪಾಂಡಿತ್ಯ ವ್ಯಕ್ತಿತ್ವ ಎರಡರ ಬಲದಿಂದ ಸ್ಥಿರವಾದ ಮುನ್ನಡೆಗೆ ದಾರಿ ತೆಗೆದು, ಹಳೆಯ ಮೈಸೂರು ಸಂಸ್ಥಾನವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಅದರಿಂದ ಅನುಕೂಲಗಳು ಹೆಚ್ಚಿದವು. ಅವರು ಅಧ್ಯಾಪಕರು, ಪತ್ರಿಕಾಕರ್ತರು, ಸಂಘಟಕರು, ಸಾಹಿತಿಗಳು, ರಾಜಕೀಯ ಮುತ್ಸದ್ದಿಗಳು, ಸಂಘಸಂಸ್ಥೆ ಗಳ ಸ್ಥಾಪಕರು. ಹೊಸ ಹೊಸ ವೃತ್ತಪತ್ರಿಕೆಗಳನ್ನು ಬೇರೆ ಬೇರೆ ಕಾಲಘಟ್ಟಗಳಲ್ಲಿ ಹುಟ್ಟುಹಾಕಿದರು. ಆ ಮೂಲಕ ಹಳೆಯ ಮೈಸೂರು ಸಂಸ್ಥಾನದ ಜನಸಮುದಾಯ ದಲ್ಲಿ ವಿಶೇಷವಾಗಿ ವಿದ್ಯಾವಂತರಲ್ಲಿ , ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆ ನಿರಂತರವಾಗಿ ಜಾಗೃತವಾಗಿರುವಂತೆ ನೋಡಿಕೊಂಡರು. ಇದಕ್ಕಾಗಿ ಅವರು ಪಟ್ಟ ಕಷ್ಟನಷ್ಟಗಳು ಅಷ್ಟಿಷ್ಟಲ್ಲ; ಮನೆ, ಜಮೀನುಗಳು ಮಾತ್ರವಲ್ಲ, ಸರ್ವಸ್ವವನ್ನೂ ಕಳೆದುಕೊಂಡು ನಲುಗಿಹೋದರು. ಜೊತೆಗೆ ಕೌಟುಂಬಿಕವಾದ ಸಾವು ನೋವುಗಳು ಅವರನ್ನು ಹಣ್ಣು ಹಣ್ಣು ಮಾಡಿತು. ಹಿತಬೋಧಿನಿ, ವಿದ್ಯಾದಾಯಿನಿ, ವೃತ್ತಾಂತಚಿಂತಾಮಣಿ; ಸಾಧ್ವಿ, ಸಂಪದಭ್ಯುದಯ, Mysore Herald, Mysore Patriot, Wealth of Mysore, Nature Care ಈ ಮೊದಲಾದವು ಅವರು ಆರಂಭಿಸಿ ನಡೆಸಿದ ಪತ್ರಿಕೆಗಳು. ಈ ಪತ್ರಿಕೆಗಳ ಸಂಚಿಕೆಗಳು ಸಿಕ್ಕುವಂತಿದ್ದರೆ, ಅವನ್ನು ಸಂಗ್ರಹಿಸಿ ಅಭ್ಯಾಸಕ್ಕೆ ಒದಗುವಂತೆ ಮಾಡಬೇಕು.

ಸಾರ್ವಜನಿಕ ಸೇವೆಯ ಕ್ಷೇತ್ರದಲ್ಲಿ ಅವರು ಕಟ್ಟಿ ಬೆಳೆಸಿದ ಸಂಘಸಂಸ್ಥೆಗಳು ಹಲವು; ಅವುಗಳಲ್ಲಿ ಕೆಲವಂತೂ ಈಗ ವಟವೃಕ್ಷಗಳಾಗಿ ಬೆಳೆದು ಸುಸಂಪನ್ನವಾದ ರೀತಿಯಲ್ಲಿ ಜನಹಿತವನ್ನು ಸಾಧಿಸುತ್ತಿವೆ. ಮೈಸೂರು ನಗರವೇ ಇವುಗಳಲ್ಲಿ ಹಲವಕ್ಕೆ ಕೇಂದ್ರಗಳು. ಮರಿಮಲ್ಲಪ್ಪಶಾಲೆ, ಶಾರದಾವಿಲಾಸ ಹೈಸ್ಕೂಲು, ಸದ್ವಿದ್ಯಾ ಪಾಠಶಾಲೆ, ಮಹಾರಾಣಿ ಬಾಲಿಕಾ ಪಾಠಶಾಲೆ, ಪಂಚಮ ಕೈಗಾರಿಕಾ ಪಾಠಶಾಲೆ ಮತ್ತು ಎಜುಕೇಷನ್ ಲೀಗ್, ಹಿಂದೂ ಮಿಷನ್, ವಿಧವೆಯರಿಗಾಗಿ ವೊಕೇಷನಲ್ ಇನ್ಸ್ಟಿಟ್ಯೂಟ್, ಅನಾಥಾಲಯ, ಬ್ರಾಹ್ಮಣವಿದ್ಯಾರ್ಥಿ ಸಂಘ, ಬ್ರಾಹ್ಮಣ ಧರ್ಮ ಸಹಾಯಸಭಾ, ಪತ್ರಿಕೋದ್ಯಮಿಗಳ ಸಂಘ, ವೆಲನಾಡು ಮಹಾಸಭೆ, ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಆರಂಭ ವಿಕಾಸಗಳ ವಿವಿಧಘಟ್ಟಗಳಲ್ಲಿ ಅವರು ತಮ್ಮ ಬೆವರು ಹರಿಸಿದರು, ರಕ್ತ ಬಸಿದರು. ಇವುಗಳಲ್ಲಿ ಒಂದೊಂದರ ಚರಿತ್ರೆಯೂ ಒಂದೊಂದು ರೋಮಾಂಚನಕಾರಿಯಾದ ಕಥಾಪ್ರಘಟ್ಟಕ, ಸಾಹಸಗಾಥೆ. ಇವನ್ನು ಇಂದಿನ ಪೀಳಿಗೆಯವರು ಅವಶ್ಯವಾಗಿ ತಿಳಿಯುವುದರಲ್ಲಿ ವಿಶೇಷವಾದ ಪ್ರಯೋಜನವಿದೆ. ಇನ್ನು ರಾಜಕೀಯ ನೆಲೆಯಲ್ಲಿ ಗಣಿಸಬಹುದಾದ ಪ್ರಜಾಪ್ರತಿನಿಧಿಸಭೆ, ನ್ಯಾಯವಿಧಾಯಕ ಸಭೆ, ಮುನಿಸಿಪಲ್ ಕೌನ್ಸಿಲ್, ಎಕನಾಮಿಕ್ ಕಾನ್ಫರೆನ್ಸ್, ಡಿಸ್ಟ್ರಿಕ್ಟ್ ಬೋರ್ಡ್ ಇಲ್ಲೆಲ್ಲ ಅವರ ಪ್ರವೇಶ, ಸೇವೆ, ಸಲಹೆ ಸಹಕಾರಗಳು ಗಣನೀಯ ಪ್ರಮಾಣದಲ್ಲಿದ್ದು ಅವರ ಅಭಿಪ್ರಾಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದ್ದಿತು. ಅವರನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದಿತು. ಡಿ.ವಿ.ಜಿ. ಮೊದಲಾದವರ ಬರಹಗಳಲ್ಲಿ ಇದಕ್ಕೆ ಆಧಾರಗಳು ದೊರೆಯುತ್ತವೆ. ಸರ್ಕಾರದಲ್ಲಿ ಉನ್ನತ ಅಧಿಕಾರಶ್ರೇಣಿ ತಮಿಳು ವಲಸಿಗರ ತೆಕ್ಕೆಗೆ ಜಾರಿಕೊಳ್ಳುತ್ತಿದ್ದ ವೇಳೆ ವೆಂಕಟಕೃಷ್ಣಯ್ಯನವರು 'ಮೈಸೂರು ಮೈಸೂರಿಗರಿಗಾಗಿ' ಎಂಬ ಹೋರಾಟದ ನಾಯಕತ್ವವನ್ನು ವಹಿಸಿದರು. ಮೀಸಲಾತಿ ಸಂಬಂಧವಾದ ಮಿಲ್ಲರ್ ಕಮಿಟಿ ತಂದ ವರದಿಯ ವಿಷಯದಲ್ಲಿ ಅವರು ಸರ್.ಎಂ.ವಿ. ಅವರ ನಿಲುವಿನೊಂದಿಗೆ ಸಹಮತವುಳ್ಳವರಾಗಿದ್ದರು.

ಹೀಗೆಯೇ ಸ್ವಾತಂತ್ರ್ಯ ಚಳುವಳಿಯ ವಿಷಯಕ್ಕೆ ಬಂದರೆ, ಅವರು ತೆರೆಮರೆ ಯಲ್ಲಿಯೇ ಉಳಿದು ಹೋರಾಡದೆ, ಪತ್ರಿಕಾಲೇಖನಗಳ ಮೂಲಕ ಯೋಧರಾಗಿ ಹೋರಾಡಿದರು. "ಭಾರತವು ಬ್ರಿಟಿಷ್ ಆಡಳಿತದಿಂದಾಗಿರುವ ಅನುಕೂಲಗಳನ್ನು ಚೆನ್ನಾಗಿ ಸ್ಮರಿಸುತ್ತದೆ. ಹಾಗೆಯೇ ಬ್ರಿಟಿಷ್ ಸಾಮ್ರಾಜ್ಯ ತನ್ನ ಪ್ರಜೆಗಳ ಮೇಲೆ ಹೇರಿದ ಅನ್ಯಾಯಗಳನ್ನೂ ನೆನೆಯುತ್ತದೆ. ಭಾರತ ಬಲಹೀನವಾಗಿದೆ, ದಾರಿದ್ರ್ಯಸ್ಥಿತಿಯಲ್ಲಿದೆ, ನಿಸ್ಸಹಾಯಕ ಭಿಕ್ಷುಕನ ಅವಸ್ಥೆಗೆ ಇಳಿದಿದೆ. ಹೀಗಿರುವಾಗ ತನ್ನನ್ನು ಒದೆಯುವ ಬೂಟುಗಾಲನ್ನು ಅದು ಮುದ್ದಿಸಬೇಕೇನು?" ಎಂಬುದಾಗಿ ಅವರು ಸಂಪದಭ್ಯುದಯದ ಇಂಗ್ಲಿಷ್ ಆವೃತ್ತಿಯ ಒಂದಾನೊಂದು ಸಂಚಿಕೆಯಲ್ಲಿ ಬರೆದರಲ್ಲದೆ, "ದಯಾಶೀಲವಾದ ನಿರಂಕುಶ ಪ್ರಭುತ್ವ ಹೃದಯಹೀನವಾದ ಪ್ರಜಾಪ್ರಭುತ್ವಕ್ಕಿಂತ ಮೇಲು" ಎಂದು ಕೂಡ ಸಾರಿದರು. ಅವರು ತಮ್ಮ ಬರಹಗಳಲ್ಲಿ ನೇರವಾಗಿಯೂ ನಿಷ್ಠುರವಾಗಿಯೂ ತಮ್ಮ ಖಚಿತವಾದ ಅಭಿಪ್ರಾಯಗಳನ್ನು ಪ್ರಕಟಿಸುತ್ತಿದ್ದರು. ಯಾರ ಮುಲಾಜಿಗೂ ಒಳಗಾಗುತ್ತಿರಲಿಲ್ಲ. ಅವರು ಮೈಸೂರು ಕಾಂಗ್ರೆಸ್ ಸ್ಥಾಪಕರಲ್ಲಿ ತಾವೂ ಒಬ್ಬರಾಗಿದ್ದರು. ಸಾರ್ವಜನಿಕ ಕ್ಷೇತ್ರದಲ್ಲಿ ಒಂದು ಉದ್ಧಾರಕಶಕ್ತಿಯಾಗಿ, ರಾಜಕೀಯ ಕ್ಷೇತ್ರದಲ್ಲಿ ಎಚ್ಚರಿಸುವ ಆತ್ಮಸಾಕ್ಷಿಯಾಗಿ, ಶಿಕ್ಷಣಕ್ಷೇತ್ರದಲ್ಲಿ ಎಚ್ಚರಿಸುವ ಆತ್ಮಸಾಕ್ಷಿಯಾಗಿ, ಶಿಕ್ಷಣಕ್ಷೇತ್ರದಲ್ಲಿ ಜ್ಞಾನಮಯ ಪ್ರದೀಪವಾಗಿ ದಶಕಗಳ ಉದ್ದಕ್ಕೆ ದುಡಿದು ಹಲವು ಜಲಚಿಹ್ನೆಗಳನ್ನು ನಿರ್ಮಿಸಿದ ವೆಂಕಟಕೃಷ್ಣಯ್ಯನವರು ತಮ್ಮಿಂದಾದ ಮಟ್ಟಿಗೆ ಸಾಹಿತ್ಯಕ್ಷೇತ್ರದಲ್ಲಿಯೂ ದುಡಿದರು. ಕನ್ನಡ ಭಾಷೆ ಪುಷ್ಟಿಗೊಳ್ಳುವಂತೆ ಮಾಡಿದರು. ಮೈಸೂರಿನ ತುಂಬ ಹಳೆಯ ಸಾಹಿತ್ಯ ಸಂಸ್ಥೆಯಾದ ಐiಣeಡಿಚಿಡಿಥಿ uಟಿioಟಿ ಚಟುವಟಿಕೆಗಳಲ್ಲಿ ಅವರ ಪಾತ್ರವಿತ್ತು. ಸ್ವತ: ಹಲವು ಗ್ರಂಥಗಳನ್ನು, ಹೇಗೋ ಕಾಲಾವಕಾಶ ಮಾಡಿಕೊಂಡು ಅವರು ಬರೆದು ಪ್ರಕಟಿಸಿದರು. ಅವರ ಈ ಸಾಹಿತ್ಯ ಸೇವೆಯನ್ನು ಗಮನಿಸಿ ಕನ್ನಡ ಸಾಹಿತ್ಯಪರಿಷತ್ತು ಅವರನ್ನು ೧೯೨೨ರಲ್ಲಿ ದಾವಣಗೆರೆಯಲ್ಲಿ ನಡೆದ ೮ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಗೌರವಿಸಿತು. ಅವರ ಅಧ್ಯಕ್ಷ ಭಾಷಣ ಈವರೆಗೆ ಆದ ಅಧ್ಯಕ್ಷಭಾಷಣಗಳಲೆಲ್ಲ ತೀರ ಚಿಕ್ಕದು ಎಂದು ತೋರುತ್ತದೆ. ನಾಲ್ಕೂವರೆ ಪುಟಗಳಲ್ಲಿ ಭಾಷಣ ಮುಗಿಸಿದ್ದರೂ, ಮೈಸೂರಿನಲ್ಲಿ ಭಾಷೆ ಸಾಹಿತ್ಯಗಳಿಗೆ ನವೋದಯ ಪೂರ್ವಕಾಲದಲ್ಲಿ ದೊರೆತ ಪ್ರೋತ್ಸಾಹದ ಬಗೆಗೆ ತಮ್ಮ ಅನುಭವದ ಕೆಲವು ಮಾತುಗಳನ್ನು ಅಲ್ಲಿ ಅವರು ಹೇಳಿರುವುದು ಗಮನಾರ್ಹವಾಗಿದೆ.

ವೆಂಕಟಕೃಷ್ಣಯ್ಯನವರು ಬರೆದು ಪ್ರಕಟಿಸಿದ ಸಾಹಿತ್ಯಕೃತಿಗಳು ಎಷ್ಟು, ಅವು ಯಾವುವು, ಪುನರ‍್ಮುದ್ರಣಗಳ ವಿಚಾರ ಹೇಗೆ- ಇವು ಇನ್ನೂ ಖಚಿತವಾಗಬೇಕಾಗಿದೆ. ಪ್ರಸ್ತುತ, ಈ ಕೆಲವು ಕೃತಿಗಳನ್ನು ಗುರುತಿಸುವುದು ಸಾಧ್ಯವಾಗಿದೆ: 'ಆರೋಗ್ಯನಿದಾನಪ್ರಕಾಶಿಕೆ (೧೮೯೬), 'ಧನಾರ್ಜನೆಯ ಕ್ರಮ' (೧೮೯೭), 'ಚೋರಗ್ರಹಣ ತಂತ್ರ' (೧೮೯೭), 'ಹರಿಶ್ಚಂದ್ರ ಚರಿತ್ರೆ' (೧೮೯೭), 'ಟೆಲಿಮಾಕಸ್ಸಿನ ಸಾಹಸಚರಿತ್ರೆ', ಭಾಗ -೧ (೧೯೦೯), ಭಾಗ-೨(೧೯೨೦), ಭಾಗ-೩ (೧೯೩೩), ಬೂಕರ್ ಟಿ. ವಾಷಿಂಗ್‌ಟನ್ ರವರ ಚರಿತ್ರೆ' (೧೯೧೯), 'ವಿದ್ಯಾರ್ಥಿಕರಭೂಷಣ' (೧೯೨೨), ಮ|| ಎಂ.ವೆಂಕಟಕೃಷ್ಣಯ್ಯನವರ ಜೀವನ ಚರಿತ್ರೆ' (೧೯೨೯), 'ಶ್ರೀರಾಮ ಮಹಿಮೆ' (೧೯೨೯). ಈ ೧೧ ಪುಸ್ತಕಗಳಲ್ಲದೆ ತೇದಿಗಳು ನಿರ್ದಿಷ್ಟವಾಗಿ ತಿಳಿಯದ ಈ ಇನ್ನೂ ೪ ಪುಸ್ತಕಗಳನ್ನು ಅವರು ಬರೆದಂತೆ ತಿಳಿಯುವುದು : 'ದೇಶಾಭಿಮಾನ', 'ಪರಂತಪವಿಜಯ' , ಸುಮತಿ ಮದನಕುಮಾರ ಚರಿತ್ರೆ', 'ಬಾಲಬೋಧೆ'. ಇವುಗಳಲ್ಲಿ ಯಾವುವೂ ಈಚೆಗೆ ಕಾಣಲು ಸಿಕ್ಕುತ್ತಿಲ್ಲ. ಪುನರ್ಮುದ್ರಣಗಳ ವಿಚಾರವೂ ಯಾರ ಮನಸ್ಸಿಗೂ ಬರುತ್ತಿಲ್ಲ. ಇದು ವಿಷಾದದ ಸಂಗತಿ. ವಿಮರ್ಶೆಗಳು ವಿದ್ಯಾದಾಯಿನಿ ಪತ್ರಿಕೆ, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ಮೊದಲಾದೆಡೆ ಬಂದಿದೆ. ಇನ್ನು ಮುಂದಾದರೂ ಇವು ಕೆಲವು ಸಂಯುಕ್ತ ಸಂಪುಟಗಳಲ್ಲಿ ಪುನರ‍್ಮುದ್ರಣಗೊಂಡು ಪ್ರಕಟವಾಗುವುದು ಸಾಧ್ಯವಾದರೆ ವೆಂಕಟಕೃಷ್ಣಯ್ಯನವರ ಜೀವನ ಸಾಧನೆಗಳ, ಸಾಹಿತ್ಯಸೇವೆಯ ಮುಖಗಳು ಇನ್ನಷ್ಟು ಮಟ್ಟಿಗೆ ಸ್ಫುಟಗೊಳ್ಳುವುದು ಸಾಧ್ಯವಿದೆ. ಅದಕ್ಕಾಗಿ ಹಾರೈಸೋಣ.

3. ಪಂಕ್ತಿಪಾವನ ವೆಂಕಟಕೃಷ್ಣಯ್ಯನವರು - ಡಿ.ವಿ.ಜಿ

Go Top

ವೆಂಕಟಕೃಷ್ಣಯ್ಯನವರ ಪ್ರಸ್ತಾವದಲ್ಲಿ ನಮ್ಮ ಮೊದಲ ನಮಸ್ಕಾರ ಸಲ್ಲಬೇಕಾದದ್ದು ಅವರ ಶುಶ್ರೂಷೆಯಲ್ಲಿದ್ದ ನಾಲ್ಕಾರು ಮಂದಿ ಶಿಷ್ಯರಿಗೆ. ವೆಂಕಟಕೃಷ್ಣಯ್ಯನವರ ಊಟ ಉಪಚಾರಗಳ ವಿಷಯದಲ್ಲಿಯೂ ದೇಹಾರೋಗ್ಯ ವಿಷಯದಲ್ಲಿಯೂ ಅವರ ಸಾರ್ವಜನಿಕ ಕಾರ್ಯಗಳ ವಿಷಯದಲ್ಲಿಯೂ ಕಾಲಕಾಲಕ್ಕೆ ತಕ್ಕ ಸೇವೆ ಸತ್ಕಾರಗಳನ್ನು ಭಕ್ತಿ ಶ್ರದ್ಧೆಗಳಿಂದ ನಡಸಿದವರು ಆ ವಿದ್ಯಾರ್ಥಿಗಳು. ಅವರ ಗುರುಭಕ್ತಿಯೂ ವೃದ್ಧೋಪಾಸನೆಯೂ ಅಷ್ಟಿಲ್ಲದೆ ಹೋಗಿದ್ದಿದ್ದರೆ ವೆಂಕಟಕೃಷ್ಣಯ್ಯನವರು ಅಷ್ಟು ದೀರ್ಘಕಾಲ ದಕ್ಷತೆಯಿಂದ ಜೀವಿಸಿರುವುದು ಸಾಧ್ಯವಾಗುತ್ತಿರಲಿಲ್ಲವೆಂದು ನನಗೆ ತೋರುತ್ತದೆ. ಅವರು ಎಲ್ಲೆಲ್ಲಿಂದ ಬಂದವರೋ, ಈಗ ಎಲ್ಲೆಲ್ಲಿದ್ದಾರೋ ತಿಳಿಯದು. ಅವರು ಮಹತ್ತ್ವವನ್ನು ಗುರುತಿಸಿ ಅದನ್ನು ಸೇವಿಸಿದವರು. ಅವರಿಗೆ ನಮಸ್ಕಾರ.

ಪ್ರಥಮ ದರ್ಶನ

ವೆಂಕಟಕೃಷ್ಣಯ್ಯನವರನ್ನು ನಾನು ಮೊದಲ ಸಾರಿ ಕಂಡದ್ದು ೧೯೦೨ರಲ್ಲಿ. ಅದಕ್ಕೆ ಮುಂಚೆ ಅವರ ಹೆಸರನ್ನು ಕೇಳಿ ಪ್ರಸಿದ್ಧಿಯನ್ನು ತಿಳಿದಿದ್ದೆ. ೧೯೦೨ರಲ್ಲಿ ನಾನು ಮೈಸೂರಿನ ಮಹಾರಾಜಾಸ್ ಕಾಲೇಜಿನ ಹೈಸ್ಕೂಲ್ ವಿಭಾಗದ ಪೋರ‍್ತ್ ಫಾರ‍್ಮ್ ತರಗತಿಯ ವಿದ್ಯಾರ್ಥಿ. ಅದು ವ್ಯೆಸರಾಯ್ ಲಾರ‍್ಡ್ ಕರ್ಜನ್ ಕಾಲ. ಮೈಸೂರಿನ ಯಾವುದೋ ಸಂಸ್ಥೆಯು ಬಹುಶಃ ಲಿಟರರಿ ಯೂನಿಯನ್ ಬ್ಯಾರೋ ಎಂಬುವನ ಜ್ಞಾಪಕಾರ್ಥವಾಗಿ ಮೌಲ್ಟನ್ ಎಂಬ ಆಂಗ್ಲೇಯ ವಿದ್ವಾಂಸನಿಂದ (ಅಥವಾ ಕತ್ಬರ‍್ಟ್ ಇರಬಹುದು, ಜ್ಞಾಪಕವಿಲ್ಲ) ಒಂದು ಭಾಷಣ ಮಾಲೆಯನ್ನೇರ್ಪಡಿಸಿತ್ತು. ಅದು ರಂಗಚಾರ‍್ಲು ಸ್ಮಾರಕ ಭವನದಲ್ಲಿ. ಆ ಭಾಷಣ ಮಾಲೆಯ ಕಡೆಯ ದಿನ ನಾನು ಅದಕ್ಕಾಗಿ ಹೋಗಿದ್ದೆ. ಭವನವು ಭರ್ತಿಯಾಗಿತ್ತು. ನಾನು ಹೇಗೆಹೇಗೋ ನುಗ್ಗಿ ಹೋಗಿ ಒಂದು ಕಿಟಕಿಯ ಇಕ್ಕಟ್ಟಿನಲ್ಲಿ ನಿಂತಿದ್ದೆ. ಆಗ ನನಗೆ ಇಂಗ್ಲಿಷ್ ಭಾಷೆಯ ಪರಿಚಯವಾಗಲಿ ಲೌಕಿಕ ಪ್ರಜ್ಞೆಯಾಗಲಿ ಆ ಉಪನ್ಯಾಸವನ್ನು ಗ್ರಹಿಸುವಷ್ಟರದ್ದಾಗಿರಲಿಲ್ಲ. ಏನೋ ಹುಡುಗು ಹುಚ್ಚುತನ. ನಾಲ್ಕು ಮಂದಿ ಸ್ನೇಹಿತರು ಹೋದೆ. ಭಾಷಣಕಾರನ ಠೀವಿ, ಅವನ ವಾಕ್ಪ್ರಕಾರ, ಅವನ ಶೈಲಿ--ಇವು ನನಗೆ ಮೆಚ್ಚಿಗೆಯಾದವು. ಬ್ರಿಟಿಷ್ ಸರಕಾರದಿಂದ ಇಂಡಿಯಕ್ಕೆ ದೊರೆತಿರುವ ಮತ್ತು ಇನ್ನೂ ದೊರೆಯಬಹುದಾದ ಲಾಭಗಳನ್ನು ಆತ ವಿಸ್ತರಿಸಿದ್ದ. ಉಪನ್ಯಾಸ ಮುಗಿದ ಮೇಲೆ ಭಾಷಣಕಾರನಿಗೆ ವಂದನೆ ಹೇಳುವುದಕ್ಕಾಗಿ ಗೊತ್ತಾಗಿದ್ದವರು ಯಾರೋ ಎದ್ದು ನಿಲ್ಲುವುದರಲ್ಲಿದ್ದರು. ಅಷ್ಟರೊಳಗಾಗಿ ಸಭಿಕರಲ್ಲಿ ಯಾರೋ ಒಬ್ಬರು 'Mr. Venkatkrishnayya please' ಎಂದು ಕೂಗಿದರು. ಇನ್ನು ಯಾರೋ ಇಬ್ಬರು ಮೂವರು ಅದನ್ನು ಅನುಮೋದಿಸಿ ಕೂಗಿದರು. ಭಾಷಣಕಾರರೂ ಅನುಮೋದಿಸಿ ಕೇಳಿ ಕೊಂಡರು. ವೆಂಕಟಕೃಷ್ಣಯ್ಯನವರು ಎದ್ದು ನಿಂತು ಹೇಳಿದ್ದರ ಸಾರಾಂಶವೇನೆಂದರೆ-- ಈ ಉಪನ್ಯಾಸಗಳು ಚೆನ್ನಾಗಿದ್ದವು. ಒಳ್ಳೆಯ ಭಾಷೆ, ಒಳ್ಳೆಯ ವಾಗ್ಝರಿ. ನಮ್ಮ ಹುಡುಗರು ಇದನ್ನು ಕಲಿತುಕೊಳ್ಳಬೇಕು. ಭಾಷಣಕಾರರು ಬ್ರಿಟಿಷ್ ಸರಕಾರದಿಂದ ಇಂಡಿಯಕ್ಕೆ ಆಗಿರುವ ಉಪಕಾರಗಳನ್ನು ಕುರಿತು ವಿವರಣೆಕೊಟ್ಟರು. ನಾವೆಲ್ಲ ಸಾಮಾನ್ಯವಾಗಿ ಅದನ್ನು ಒಪ್ಪಿಕೊಂಡವರೇ. ಆದರೆ ಇಂಡಿಯ ದೇಶದ ಜನಕ್ಕೆ ತಾವೂ ಬೆಳೆಯಬೇಕು, ತಮ್ಮ ಶಕ್ತಿಯಿಂದ ತಮ್ಮ ದೇಶದ ಆಡಳಿತಗಳನ್ನು ತಾವೇ ನಡೆಸಿಕೊಳ್ಳಬೇಕು-ಎಂದು ಆಶೆಯಿರುವುದು ಸ್ವಾಭಾವಿಕ ತಾನೆ? ಈ ಬಗ್ಗೆ ಬ್ರಿಟಿಷ್ ಸರಕಾರದ ಯೋಚನೆ ಹೇಗಿದೆಯೆಂಬುದನ್ನು ನಮ್ಮ ಉಪನ್ಯಾಸಕರು ವಿವರಿಸಿದ್ದಿದ್ದರೆ ಇನ್ನು ಚೆನ್ನಾಗಿರುತ್ತಿತ್ತು. ಅವರು ಮತ್ತೊಂದು ಸಾರಿ ಮೈಸೂರಿಗೆ ಬಂದು ಈ ವಿಷಯವನ್ನು ಕುರಿತು ಉಪನ್ಯಾಸ ಕೊಡಲು ಅವಕಾಶವಾದರೆ ಚೆನ್ನಾದೀತು.ಇದು ಸುಮಾರು ಐದಾರು ನಿಮಿಷಗಳ ಭಾಷಣ. ಸಭೆಯ ನಾಲ್ಕು ಕಡೆಗಳಿಂದಲೂ ವೆಂಕಟಕೃಷ್ಣಯ್ಯನವರ ಭಾಷಣಕ್ಕೆ ಚಪ್ಪಾಳೆಗಳ ಸುರಿಮಳೆ. ಆಮೇಲೆ ಒಂದು ತಿಂಗಳು ಜನಕ್ಕೆ ಅದೇ ಮಾತು. ನಾನು ಹಾಸ್ಟಲಿನಲ್ಲಿ ವಾಸವಾಗಿದ್ದೆ. ಅಲ್ಲಿನ ವಿದ್ಯಾರ್ಥಿಗಳೆಲ್ಲ ಏನು ಹೊಡೆದರಯ್ಯ! ಎಷ್ಟು ಚೆನ್ನಾಗಿ ಗಸ್ತು ಕೊಟ್ಟರಯ್ಯ! ಹೀಗೆ ಕೊಂಡಾಟ.

ಪ್ರಿಂಟಿಂಗ್ ಆಫೀಸು:

ಆಗ ನಂಜನಗೂಡಿನಲ್ಲಿ ಕೆ. ಲಕ್ಷೀನಾರಣಪ್ಪನವರು ಮುನ್ಸೀಫರಾಗಿದ್ದರು. ಅವರಿಗೂ ವೆಂಕಟಕೃಷ್ಣಯ್ಯನವರಿಗೂ ತುಂಬ ಗಾಢವಾದ ಸ್ನೇಹ. ಲಕ್ಷೀನಾರಣಪ್ಪನವರ ಮಗ ಪದ್ಮನಾಭಯ್ಯನೂ ನಾನೂ ಸಹಪಾಠಿಗಳು. ಒಂದೇ ಕೊಠಡಿಯಲ್ಲಿದ್ದೆವು. ನಾವಿಬ್ಬರೂ ವಾರಕ್ಕೊಂದು ಸಲ ವೆಂಕಟಕೃಷ್ಣಯ್ಯನವರನ್ನು ನೋಡಿ ಬರತಕ್ಕದ್ದೆಂದು ವಿಧಾಯಕ ಮಾಡಿದ್ದರು. ಆಗ ವೆಂಕಟಕೃಷ್ಣಯ್ಯನವರು ವಾಸವಾಗಿದ್ದದ್ದು ಪದ್ಮಾಲಯ ಎಂಬ ವಿಸ್ತಾರವಾದ ಭವ್ಯವಾದ ಮನೆಯಲ್ಲಿ. ಆ ಮನೆಯ ಹಿಂಭಾಗದಲ್ಲಿ ಪ್ರಿಂಟಿಂಗ್ ಆಫೀಸು. ಅಲ್ಲಿಯೇ ಮೈಸೂರು ಹೆರಾಲ್ಡ್ ಇಂಗ್ಲಿಷ್ ಪತ್ರಿಕೆಯೂ ವೃತ್ತಾಂತ ಚಿಂತಾಮಣಿ ಕನ್ನಡ ಪತ್ರಿಕೆಯೂ ಅಚ್ಚಾಗುತ್ತಿದ್ದದ್ದು. ಒಂದು ನ್ಯೂಸ್ ಪೇಪರ್ ಆಫೀಸು ಎಷ್ಟು ಚೆಲ್ಲಾಪಿಲ್ಲಿಯಾಗಿರುತ್ತದೆ, ಅಚ್ಚಿನ ಮಸಿ ಎಲ್ಲೆಲ್ಲಿಯೂ ಹೇಗೆ ಚೆಲ್ಲಿರುತ್ತದೆ. ಎಂಬುದರ ಪರಿಚಯ ನನಗೆ ಮೊದಲು ಆದದ್ದು ಆಗ. ವೆಂಕಟಕೃಷ್ಣಯ್ಯನವರ ವಿಷಯದಲ್ಲಿ ನಮಗೆ ಭಯಭಕ್ತಿಗಳು ಮನಸ್ಸು ತುಂಬ ಇದ್ದವು. ಭಯವಿದ್ದದ್ದರಿಂದ ಸಲಿಗೆಯಿರಲಿಲ್ಲ. ಅವರಿಗೆ ಬಹಳ ಹತ್ತಿರ ನಾನು ಹೋಗಲಿಲ್ಲ: ದೂರದರ್ಶನ, ಅಷ್ಟೆ.

ವ್ಯಕ್ತಿ ಗುಣ

ವೆಂಕಟಕೃಷ್ಣಯ್ಯನವರ ಆಕಾರ ನೋಟಕ್ಕೆ ಇಷ್ಟವಾಗುವಂಥಾದ್ದು. ಮೂರ್ತಿ ಎತ್ತರ, ಅದಕ್ಕೆ ತಕ್ಕ ಗಾತ್ರ. ಬಣ್ಣ ಕೊಂಚ ಮಾಸಲು ಬಿಳುಪು. ಪ್ರಸನ್ನವೂ ಗಂಭೀರವೂ ಆದ ಮುಖಭಾವ. ಮುಖ ಉದ್ದುದ್ದವಲ್ಲ, ಗುಂಡುಗುಂಡೂ ಅಲ್ಲ. ಆದರೂ ಕೆಲವು ಭಾಗಗಳಲ್ಲಿ ದುಂಡಿನ ತೋರಿಕೆ. ಕಣ್ಣುಗಳಲ್ಲಿ ಸೌಮ್ಯಕಾಂತಿ. ಯೌವನದಲ್ಲಿ ಬಹುಶಃ ರೂಪವಂತರಲ್ಲಿ ಗಣನೆಯಾಗುತ್ತಿದ್ದರೆಂದು ನನಗನ್ನಿಸುತ್ತದೆ.ಅವರು ಭಾಷಣಕಾರರೆಂದು ಹೆಸರಾಗಿದ್ದರೂ ಬಹುಭಾಷಿಯಲ್ಲ. ಮಾತಿನಲ್ಲಿ ಬಹುಮಿತ. ಅವಶ್ಯವಿದ್ದಷ್ಟು ಮಾತ್ರ ಮಾತು. ಅವರಿಗೆ ತಾವು ಮಾತನಾಡುವುದಕ್ಕಿಂತ ಇತರರು ಮಾತನಾಡುವುದನ್ನು ಕೇಳುವುದರಲ್ಲಿ ಹೆಚ್ಚು ಇಷ್ಟವೆಂದು ತೋರುತ್ತದೆ. ಸ್ನೇಹ ಸಂಭಾಷಣೆಯಲ್ಲಿ ಅವರು ಕಟುಪದಗಳನ್ನು ಉಪಯೋಗಿಸುತ್ತಿರಲ್ಲಿಲ್ಲ. ಮಾತೂ ಧ್ವನಿಯೂ ಮೃದುವಾಗಿ ಗಂಭೀರವಾಗಿರುತ್ತಿದ್ದವು.ಪುಣ್ಯಾತ್ಮ ದೇವರು ಮಹಾನುಭಾವ ಮಹಾರಾಯ ಇಂಥ ವಿಶೇಷಣ ಪದಗಳು ಅವರಿಗೆ ಬಹುರೂಢಿ. ಅದರಿಂದಲೇ ಎಲ್ಲರನ್ನೂ ಸಂಬೋಧಿಸುವರು. ಅಶ್ಲೀಲ ಪದಗಳನ್ನು ಯಾರಿಗೂ ಪ್ರಯೋಗಿಸಿದ್ದಿಲ್ಲ. ಅವರಿಗೆ ಕೋಪ ಬರುತ್ತಿದ್ದದ್ದು ಅಪರೂಪ. ಬಂದಾಗ ಅದು ವಿಶೇಷವಾಗಿ ಮುಖಭಾವದಲ್ಲಿ ತೋರುತ್ತಿತ್ತೇ ಹೊರತು ಬಾಯಮಾತಿನಲ್ಲಿ ಹೊರಡುತ್ತಿರಲಿಲ್ಲ. ರೇಗುವುದೂ ಕೂಗಾಡುವುದೂ ಬಯ್ಯುವುದೂ ಅವರ ದಾರಿಯಲ್ಲವೆಂದೇ ಹೇಳಬೇಕು.

ಅವರು ಯಾರನ್ನೂ ಅಸಮಾಧಾನ ಪಡಿಸಲಾರದವರು. ಬೆಂಗಳೂರಿಗೆ ಬಂದಾಗ ಅವರಿಗೆ ನಾಲ್ಕಾರು ಕಡೆ ತಿಂಡಿ ಊಟಗಳ ಅವಾಂತರ. ಲಕ್ಷ್ಮೀನಾರಣಪ್ಪನವರ ಮನೆಯಲ್ಲಿ ಬೆಳಿಗ್ಗೆ ಉಪಾಹಾರ ಕಾಫಿಗಳನ್ನು ತಪ್ಪಿಸಿಕೊಳ್ಳುವಂತಿಲ್ಲ. ಬಳಿಕ ಎಂ. ಶಾಮರಾಯರ ಮನೆಗೆ ಹೋಗುವರು. ಅಲ್ಲಿ ಕಾಫಿ ಬೇಡವೆಂದರೆ ಅಸಮಾಧಾನವಾದೀತು. ಕುಡಿದ ಶಾಸ್ತ್ರ ಮಾಡುವರು. ಅಲ್ಲಿಂದ ಎಚ್. ವಿ. ನಂಜುಂಡಯ್ಯನವರ ಮನೆಗೆ. ಅಲ್ಲಿ ಊಟಕ್ಕೆಬ್ಬಿಸುವರು. ಲಕ್ಷ್ಮೀನಾರಣಪ್ಪ ಕಾದಿರುತ್ತಾರೆ ಎಂದು ನೆವ ಹೇಳಿದರೆ, ಅವರು ಇಲ್ಲಿ ಕೊಂಚ ರುಚಿ ನೋಡಿದರೆ ಸರಿ ಎನ್ನುವರು. ಅದರಂತೆ ಅಲ್ಲಿ. ಆಮೇಲೆ ಮಧ್ಯಾಹ್ನ ಲಕ್ಷ್ಮೀನಾರಣಪ್ಪನವರ ಮನೆಗೆ ಬಂದು ಅಲ್ಲಿ ಭೋಜನಕ್ಕೆ ಮುಂಚೆ ಎನಿಮಾ. ಹೀಗೆ ತಾವು ಕಷ್ಟಪಟ್ಟುಕೊಂಡು ಸ್ನೇಹಿತರ ಇಷ್ಟವನ್ನು ನಡಸುವರು. ಅವರು ಎಲ್ಲರಿಗೂ ಎನಿಮಾ ಚಿಕಿತ್ಸೆಯನ್ನು ಉಪದೇಶಿಸುತ್ತಿದ್ದರು. ನನಗೂ ಆ ಉಪದೇಶಆಗಿದೆ.

ಮತಾಚಾರ ವಿಷಯದಲ್ಲಿ ವೆಂಕಟಕೃಷ್ಣಯ್ಯನವರ ಅಂತರಂಗ ಹೇಗಿತ್ತೆಂಬುದನ್ನು ನಾನರಿಯೆ. ಅವರಿಗೆ ದೃಢವಾದ ಭಗವದ್ಭಕ್ತಿಯಿತ್ತೆಂಬುದನ್ನು ಮಾತ್ರ ನಾನು ಹೇಳಬಲ್ಲೆ. ಅವರು ಯಾವ ಬಾಹ್ಯಾನುಷ್ಠಾನವನ್ನೂ ಇಟ್ಟುಕೊಂಡಿದ್ದಂತೆ ನನಗೆ ತೋರುವುದಿಲ್ಲ. ವಿಭೂತಿ, ಜಪ, ಪೂಜೆ, ಪಾರಾಯಣ, ವ್ರತ, ಶಾಸ್ತ್ರಕರ್ಮ-ಇಂಥಾದ್ದು ಯಾವುದನ್ನೂ ಅವರು ಇಟ್ಟುಕೊಂಡಿದ್ದವರಲ್ಲ. ತಮ್ಮ ಮತ ತಮ್ಮ ಅಂತರಂಗದ್ದು. ಅದನ್ನು ಬಹಿರಂಗದಲ್ಲಿ ಇತರರಿಗಾಗಿ ಪ್ರದರ್ಶನ ಮಾಡಬೇಕಾದದ್ದಿಲ್ಲ-ಎಂದು ಅವರು ನಿಶ್ಚಯಮಾಡಿ ಕೊಂಡಿದ್ದಿರಬೇಕು.

ವಿಶ್ವೇಶ್ವರಯ್ಯನವರು ಮತಪ್ರದರ್ಶನ ಮಾಡಿದವರಲ್ಲ. ಗೋಖಲೆಯವರೂ ಹಾಗೆಯೇ. ಆದರೆ ಅವರು ಯಾರೂ ನಾಸ್ತಿಕರಲ್ಲ. ಆಚಾರ ಅನುಷ್ಠಾನಗಳನ್ನಿಟ್ಟುಕೊಂಡವರನ್ನು ಆಕ್ಷೇಪಿಸಿದವರೂ ಹಾಸ್ಯ ಮಾಡಿದವರೂ ಅಲ್ಲ. ವೆಂಕಟಕೃಷ್ಣಯ್ಯನವರ ಅಂತರಂಗವನ್ನು ಸೂಚಿಸುವ ಒಂದು ವಾಕ್ಯವನ್ನು ಅವರು ವೃತ್ತಾಂತ ಚಿಂತಾಮಣಿ ಪತ್ರಿಕೆಯ ಮುಖ ಪತ್ರದ ಮೇಲೆ ವಾರವಾರವೂ ಅಚ್ಚುಮಾಡಿಸುತ್ತಿದ್ದರು.

ಶ್ಲೋಕಾರ್ಥೇನ ಪ್ರವಕ್ಷ್ಯಾಮಿ
ಯದುಕ್ತಂ ಗ್ರಂಥಕೋಟಿಭಿಃ
ಪರೋಪಕಾರಃ ಪುಣ್ಯಾಯ
ಪಾಪಾಯ ಪರಪೀಡನಮ್

ವಾತ್ಸಲ್ಯ :

೧೯೦೬ ವೇಳೆಗೆ ನನ್ನ ವಿದ್ಯೆ ಪಾರವನ್ನು ಮುಟ್ಟಿತ್ತು. ನಾನು ಬೆಂಗಳೂರಿನಲ್ಲಿ ನಿರುದ್ಯೋಗಿಯಾಗಿ ಅಲೆಯುತ್ತಿದ್ದೆ. ಆ ವರ್ಷ ಸೂರತ್ ಪಟ್ಟಣದಲ್ಲಿ ಕಾಂಗ್ರೆಸ್ ಸಭೆ ಸೇರಿದ್ದು ಸಂಸ್ಥೆ ದ್ವಿಪಕ್ಷವಾಗಿ ಒಡೆದಿತ್ತು ; ಅತಿವಾದಿಗಳ ಪಕ್ಷ ಒಂದು, ಮಿತವಾದಿಗಳ ಪಕ್ಷ ಒಂದು. ಆ ಸಂದರ್ಭ ದೇಶದಲ್ಲೆಲ್ಲ ಕಳವಳವನ್ನು ಉಂಟುಮಾಡಿತು. ನಾನು ಒಂದು ಸಾಹಸ ಮಾಡಿದೆ; ಸಂಯುಕ್ತ ಅಂಡ್ ಯುನೈಟೆಡ್ ಇಂಡಿಯ ಎಂದು ಇಂಗ್ಲಿಷಿನಲ್ಲಿ ಒಂದು ಲೇಖನ ಬರೆದು ಅದನ್ನು ವೆಂಕಟಕೃಷ್ಣಯ್ಯನವರಿಗೆ ಕಳುಹಿಸಿದೆ. ಅವರು ಅದನ್ನು ಮೆಚ್ಚಿ ನನಗೆ ಕಾಗದ ಬರೆದದ್ದಲ್ಲದೆ ಅದನ್ನು ಮೈಸೂರು ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟಪಡಿಸಿದರು. ಅದನ್ನು ಲಘು ಪುಸ್ತಕ ರೂಪದಲ್ಲಿ ಪುರ್ನರ್ಮುದ್ರಣ ಮಾಡಿಸಿದರು. ಅದು, ನನ್ನ ಬಾಲಭಾಷಿತಗಳಲ್ಲಿ ಒಂದು. ಅದನ್ನು ಇಲ್ಲಿ ಪ್ರಸ್ತಾಪಿಸಿರುವುದರ ಉದ್ದೇಶ ವೆಂಕಟಕೃಷ್ಣಯ್ಯನವರ ವಾತ್ಸಲ್ಯವೆಂಥಾದ್ದೆಂಬುದನ್ನು ತೋರಿಸುವುದಲ್ಲದೆ ಬೇರೆಯಲ್ಲ.
ಪರಗುಣಪರಮಾಣೂನ್ ಪರ್ವತೀಕೃತ್ಯ...........! ಇದು ಅವರ ಸ್ವಭಾವ

೧೯೦೭ ರಲ್ಲಿ ನನ್ನ ತಂಗಿಗೆ ವೈಧವ್ಯ ಪ್ರಾಪ್ತವಾಯಿತು. ಆಗ ಆಕೆ ಸುಮಾರು ಹತ್ತು ವರ್ಷದವಳು. ವೆಂಕಟಕೃಷ್ಣಯ್ಯನವರಿಗೆ ಈ ವರ್ತಮಾನ ಹೇಗೋ ತಿಳಿಯಿತು. ಅವರು ನನಗೆ ಕಾಗದ ಬರೆದು ಸಂತಾಪವನ್ನು ಸೂಚಿಸಿ ನೀನು ಆ ಮಗುವನ್ನು ಇಲ್ಲಿಗೆ ಕರೆದುಕೊಂಡು ಬಾ. ನನ್ನ ಮನೆಯಲ್ಲಿಟ್ಟುಕೊಂಡು ನಾನು ಸಾಕುತ್ತೇನೆ; ವಿದ್ಯಾಭ್ಯಾಸ ಮಾಡಿಸುತ್ತೇನೆ. ಆಕೆಯನ್ನು ನಿರುತ್ಸಾಹ ಪಡಿಸಬಾರದು. ಆಕೆ ಸಂತೋಷದ ವಾತಾವರಣದಲ್ಲಿರಬೇಕು. ಇಲ್ಲಿಗೆ ನೀನೇ ಕರೆದು ಕೊಂಡು ಬಾ--- ಇತ್ಯಾದಿಯಾಗಿ. ಆದರೆ ನನ್ನ ತಂದೆತಾಯಿಗಳು ಹಳೆಯ ಕಾಲದವರು. ಪೂರ್ವಾಚಾರನಿಷ್ಠರು. ವೆಂಕಟಕೃಷ್ಣಯ್ಯನವರ ಸಲಹೆಯನ್ನು ಅವರು ಅಂಗೀಕರಿಸದೆಬಿಟ್ಟಿದ್ದರೂ ವೆಂಕಟಕೃಷ್ಣಯ್ಯನವರ ಹೃದಯ ಎಂಥಾದ್ದೆಂಬುದ್ದನ್ನು ಈ ಪ್ರಸಂಗ ತೋರಿಸುತ್ತದೆ.

ಜನಸಂಗ್ರಹ :

೧೯೦೮ ರಲ್ಲಿ ಮೈಸೂರಿನ ವೃತ್ತಪತ್ರಿಕಾವಾಗ್ಬಂಧದ ಕಾನೂನಾಯಿತಷ್ಟೆ? ಅದಕ್ಕೆ ವಿರೋಧ ಪ್ರದರ್ಶನ ಮಾಡಬೇಕೆಂದು ಆಗ ಸಂಸ್ಥಾನದಲ್ಲಿ ನಡೆಯುತ್ತಿದ್ದ ವೃತ್ತಪತ್ರಿಕೆಗಳು ಎರಡು ಮೂರರವಿನಾ ಎಲ್ಲವೂ ಬಾಗಿಲು ಮುಚ್ಚಿದವು.. ಅದರಿಂದ ಸರಕಾರಕ್ಕೇನೂ ನಷ್ಟವಾಗಲಿಲ್ಲ. ಅದು ದಿವಾನ್ ವಿ.ಪಿ. ಮಾಧವರಾಯರ ಕಾಲ. ಕೆಲಮಂದಿ ದೊಡ್ದ ಅಧಿಕಾರಿಗಳ ಸಹಾಯ ಪ್ರೋತ್ಸಾಹಗಳಿಂದ ಬೇರೆ ಜನ ಬಂದು ಬೆಂಗಳೂರಿನಲ್ಲಿ ಪತ್ರಿಕೆಗಳನ್ನು ಹೊರಡಿಸಿದರು. ಮೈಸೂರು ಮೈಲ್ ಎಂಬ ಇಂಗ್ಲಿಷ್ ದಿನಪತ್ರಿಕೆ ಒಂದು. ಅದನ್ನು ನಡಸುತ್ತಿದ್ದಾತ ಷಂಗುಣ್ಣಿ ಮೆನನ್ ಎಂಬ ಮಲೆಯಾಳಿ ದೊಡ್ಡ ಮನುಷ್ಯ. ವೆಂಕಟಕೃಷ್ಣಯ್ಯನವರು ಒಂದು ದಿನ ಮಧ್ಯಾಹ್ನಾನಂತರ ಸುಮಾರು ನಾಲ್ಕು ಘಂಟೆಗೆ ನನ್ನ ಮನೆಗೆ ಬಂದು ಆತನನ್ನು ಹೋಗಿ ನೋಡೋಣ ಬಾ, ಎಂದು ಕರೆದರು. ನಾನು ಹೇಳಿದೆ;

ಆತ ನಮಗೆ ಪ್ರತಿಕಕ್ಷಿಸ್ಥಾನದಲ್ಲಿದ್ದಾನೆ. ಆತನಿಂದ ನಮಗೇನಾದೀತು?

ಇದಕ್ಕೆ ವೆಂಕಟಕೃಷ್ಣಯ್ಯನವರು ಹೇಳಿದರು:
ಆತನ ದಾರಿ ಆತ ಹಿಡಿಯಲಿ. ನಮ್ಮ ದಾರಿಯಲ್ಲಿ ನಾವಿರೋಣ. ನಮ್ಮ ಮರ್ಯಾದೆಯನ್ನು ನಾವು ತೋರಿಸಿದ್ದರಿಂದ ಏನೂ ಬಾಧಕವಿಲ್ಲ. ಸಾರ್ವಜನಿಕ ಕಾರ್ಯದಲ್ಲಿರುವವರು ದ್ವೇಷ ಹಠಗಳನ್ನು ಬಹು ದೂರ ತೆಗೆದುಕೊಂಡು ಹೋಗಬಾರದು. ಯಾವುದೋ ಒಂದು ವಿಷಯದಲ್ಲಿ ಅವನ ಸಹಾಯ ನಮಗೆ ಬೇಕಾಗಬಹುದು

ಆ ದಿನ ನಾವು ಮೈಸೂರು ಮೈಲ್ ಕಾರ್ಯಾಲಯಕ್ಕೆ ಜಟಕಾದಲ್ಲಿ ಕುಳಿತು ಹೋಗುತ್ತಿದ್ದಾಗ ನಾನು ಹೇಳಿದೆ: ದೇಶಕ್ಕಾಗಿ ಸಂತತವಾಗಿ ಕೆಲಸ ಮಾಡುವ ಒಂದು ಸಂಸ್ಥೆ ಅವಶ್ಯ. ಆ ಸಂಸ್ಥೆಯಲ್ಲಿ ದೀಕ್ಷೆ ತೊಟ್ಟ ಸಮರ್ಥರಾದ ಯುವಜನ ಹತ್ತು ಮಂದಿಯೂ ಇರಬೇಕು ಇದಕ್ಕೆ ವೆಂಕಟಕೃಷ್ಣಯ್ಯನವರು.

ನೀನು ಹೇಳುವುದು ಸರಿಯೇ. ಆದರೆ ಆ ಪ್ರಯತ್ನಕ್ಕೆ ಈಗ ಸದ್ಯ ಇರುವ ಪೀಡೆ ತೊಲಗಲಿ. ಆಮೇಲೆ ಸಂಘದ ಯೋಚನೆ ಮಾಡೋಣ.

ವೆಂಕಟಕೃಷ್ಣಯ್ಯನವರಿಗೆ ಪತ್ರಿಕಾ ಲೇಖನ ಅನ್ನೋದಕಗಳಂತೆ ಇತ್ತು. ಒಂದೆರಡು ಆರ‍್ಟಿಕಲ್ಲುಗಳನ್ನಾದರೂ ಬರೆಯದಿದ್ದರೆ ಅವರಿಗೆ ಊಟ ರುಚಿಸದು, ನಿದ್ರೆ ಬಾರದು. ಅವರು ತಮ್ಮ ಪತ್ರಿಕೆಗಳನ್ನು ನಿಲ್ಲಿಸಿದ ಮೇಲೆ ಮೈಸೂರು ಪೇಟ್ರಯಟ್, ಸಾಧ್ವಿ ಈ ವಾರಪತ್ರಿಕೆಯನ್ನು ಹೊರಡಿಸಿದ್ದಲ್ಲದೆ ಸಂಪದಭ್ಯುದಯ ಎಂಬ ದಿನಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆಗಳ ಚರಿತ್ರೆಯನ್ನು ಬರೆಯಲು ನನಗಿಂತ ಸಮರ್ಥರಾದ ಬೇರೆ ಸ್ನೇಹಿತರಿದ್ದಾರೆ. ವೃತ್ತಾಂತ ಚಿಂತಾಮಣಿಯ ಕಾಲದ ಒಂದು ಕಥೆ ಜ್ಞಾಪಕಕ್ಕೆ ಬರುತ್ತದೆ.

ಆಟೀನ್ ರಾಜಾ :

ವೆಂಕಟಕೃಷ್ಣಯ್ಯನವರದು ತಮ್ಮ ದಿನದ ಕೆಲಸಗಳೆಲ್ಲ ಮುಗಿದ ಬಳಿಕ ರಾತ್ರಿ ಒಂಭತ್ತು ಘಂಟೆಯ ಸುಮಾರಿನಲ್ಲಿ ಪದ್ಮಾಲಯದ ಮುಂದುಗಡೆಯ ಹಾಲಿನಲ್ಲಿ ಒಬ್ಬರೇ ಕುಳಿತು ಕೊಂಚ ಹೊತ್ತು ನಿಶ್ಯಬ್ದವಾದ ವಾತಾವರಣದಲ್ಲಿರುವುದು ಪದ್ಧತಿ. ಆಗ ಯಾರೂ ಅಲ್ಲಿಗೆ ಬರುತ್ತಿರಲ್ಲಿಲ್ಲ. ಅವರು ಒಬ್ಬರೇ ಕುಳಿತು ನಿಶ್ಚಿಂತೆಯಿಂದ ಇರುತ್ತಿದ್ದರು. ಅಥವಾ ದೇಶಚಿಂತೆಯಲ್ಲಿ ಮಗ್ನರಾಗಿರುತ್ತಿದ್ದರು. ಇಂಥ ಒಂದು ರಾತ್ರಿ ಒಬ್ಬ ಭೇಟಿಗಾರರು ಬಂದು ಮುಂಬಾಗಿಲು ತಟ್ಟಿದರು. ಅವರು ಎರಡು ಮೂರು ಸಾರಿ ಹಾಗೆ ಬಾಗಿಲು ತಟ್ಟಿದ ಮೇಲೆ ವೆಂಕಟಕೃಷ್ಣಯ್ಯನವರು ಕೂಗಿ ಕೇಳಿದರು:

ಯಾರೋ ಅದು?

ನಾನ್‌ದಾ ಸಾರ್, ಆಟೀನ್ ರಾಜಾ.

ವೆಂಕಟಕೃಷ್ಣಯ್ಯನವರು ಎದ್ದು ಹೋಗಿ ಬಾಗಿಲು ತೆಗೆದು ನೋಡಿದರು. ಬಂದಿದ್ದವರು ಆಗಿನ ಪೋಲೀಸ್ ಸೂಪರಿಂಟೆಂಡೆಂಟರು. ತಮ್ಮ ಮಾತಿನ ವಿವರಣೆಗಳನ್ನು ಅವರೇ ಕೊಟ್ಟರು-ತಮಿಳು ಕನ್ನಡದಲ್ಲಿ. ಇದು ಕೊಯಮತ್ತೂರು ಕುಂಭಕೋಣಗಳ ಕನ್ನಡಿಗರ ಭಾಷೆ.

ನಾನು ಓದಿದೆ ಸಾರ್ ತಮ್ಮ ಪೇಪರಿನಲ್ಲಿ-ವಿಧುರನ ವಿಲಾಪಗಳನ್ನ (Woes of a widower). ಭೋ ಛಂದಾಗಿ ಬರೆದಿದ್ದಾರು. ನಾ ಏನು ಮಾಡಲಿ ಸಾರ್? ಆಟೀನ್ ರಾಜಾ ಅಂತ ಕರೆದಿದ್ದಾರೆ ನನ್ನ. ದೇವರು ನನ್ನ ಹಾಗೆ ಮಾಡಿಧಾನ....

ಹೇಳುವವರು ಕೇಳುವವರು ಇಬ್ಬರೂ ನಗುತ್ತಿದ್ದರು. ಆ ಆಸಾಮಿ ಒಳ್ಳೆಯ ರಸಿಕ, ಹಣವಂತ, ಧೈರ್ಯಶಾಲಿ, ಮತ್ತು ಸರಕಾರದಲ್ಲಿ ಪ್ರತಿಷ್ಠೆಯುಳ್ಳವನು, ಆತ ಲಂಚಕೋರನಲ್ಲ. ಇತರರಿಂದ ಹಣಕಾಸು ಅಪೇಕ್ಷಿಸಿದವನಲ್ಲ.

ಮನಸ್ತಾಪ :

ಪದ್ಮಾಲಯದ ಎದುರುಮನೆ ಕುಮಾರ ಭವನ-ದಿವಾನ್ ಸರ್ ಕೆ. ಶೇಷಾದ್ರಯ್ಯರ್‌ರವರ ವಾಸಗೃಹ. ಶೇಷಾದ್ರಯ್ಯರ್‌ರವರನ್ನು ನೋಡಲಿಕ್ಕಾಗಿ ಪರದೇಶಗಳಿಂದ ಗಣ್ಯ ಜನರು ಆಗಾಗ ಬರುತ್ತಿದ್ದರು. ಈ ಊರಿನಲ್ಲಿ ನಾವು ನೋಡಬೇಕಾದದ್ದು ಏನೇನಿದೆ? ಎಂದು ವಿಚಾರಿಸುವರು. ಶೇಷಾದ್ರಯ್ಯರ್ರವರು ಎದುರು ಮನೆಯಲ್ಲಿದ್ದಾರೆ ನನ್ನ ಪ್ರತಿಕಕ್ಷಿ. ಅವರನ್ನು ನೀವು ನೋಡಬೇಕಾದದ್ದು. ಆತ ಹರ್ಬರ್ಟ್ ಸ್ಪೆನ್ಸರ್ ತಾತ್ತ್ವಿಕನು ಬರೆದಿರುವ ಎಲ್ಲ ಗ್ರಂಥಗಳನ್ನೂ ವ್ಯಾಸಂಗ, ಮಾಡಿದ್ದಾರೆ. ಆತ ವಿಚಾರ ಶೀಲ: ಮತ್ತು ಪ್ರಾಮಾಣಿಕ- ಎಂದು ಹೇಳಿ ವೆಂಕಟಕೃಷ್ಣಯ್ಯನವರನ್ನು ಮೆಚ್ಚಿಕೊಳ್ಳುತ್ತಿದ್ದರು.

೧೮೯೮ ರಲ್ಲಿ ಮಹಾರಾಜ ಚಾಮರಾಜ ಒಡೆಯರವರು ದೈವಾಧೀನರಾದ ಬಳಿಕ ರಾಜ್ಯವನ್ನು ಯಾರು ಹೇಗೆ ನಿರ್ವಹಿssಸತಕ್ಕದ್ದೆಂಬ ಪ್ರಶ್ನೆ ಎದ್ದಿತ್ತು. ಸರ್.ಕೆ. ಶೇಷಾದ್ರಯ್ಯರವರು ತಾವೇ (ರೀಜೆಂಟ್ ರಾಜಪ್ರತಿನಿಧಿಯಾಗಬೇಕೆಂಬ ಉದ್ದೇಶವಿಟ್ಟುಕೊಂಡಿದ್ದರೆಂದೂ ಅದಕ್ಕಾಗಿ ಇಂಡಿಯ ಸರಕಾರದೊಡನೆ ತರದೂದು ನಡೆಸುತ್ತಿದ್ದರೆಂದೂ ಒಂದು ಜನಪ್ರವಾದ ಹೊರಟಿತ್ತು. ರಾಜವ್ಯವಸ್ಥೆ ಹಾಗಾಗತಕ್ಕದ್ದಲ್ಲವೆಂದೂ ಮಹಾರಾಣಿ ವಾಣೀವಿಲಾಸ ಸನ್ನಿಧಾನದವರೇ ರಾಜಪ್ರತಿನಿಧಿಯಾಗಿ ನಿಯಮಿಸಲ್ಪಡಬೇಕೆಂದೂ ದಿವಾನರು ಆಕೆಗೆ ಅಧೀನರಾಗಿರತಕ್ಕದ್ದೆಂದೂ ಇನ್ನೊಂದು ಅಭಿಪ್ರಾಯ ಹೊರಟಿತು. ಈ ಎರಡನೆಯ ಅಭಿಪ್ರಾಯಕ್ಕೆ ಮುಂದಾಳಾದವರು ವೆಂಕಟಕೃಷ್ಣಯ್ಯನವರು. ಹೀಗೆ ಶೇಷಾದ್ರಯ್ಯರ್‌ರವರಿಗೂ ವೆಂಕಟಕೃಷ್ಣಯ್ಯನವರಿಗೂ ಮನಸ್ತಾಪ ಪ್ರಾರಂಭವಾಯಿತು.

ವೆಂಕಟಕೃಷ್ಣಯ್ಯ ದಿವಾನ್ ರಂಗಾಚಾರ‍್ಲುರವರ ಇಷ್ಟ ಶಿಷ್ಯರು. ರಂಗಾಚಾರ‍್ಲುರವರು ಯಾವ ಬ್ರಿಟಿಷ್ ತಾತ್ತ್ವಿಕ ಗ್ರಂಥಗಳಿಂದ ರಾಜಕೀಯ ಭಾವನೆಗಳನ್ನು ಸಂಪಾದಿಸಿಕೊಂಡಿದ್ದರೋ ಆ ಗ್ರಂಥಗಳನ್ನು ವೆಂಕಟಕೃಷ್ಣಯ್ಯನವರೂ ಚೆನ್ನಾಗಿ ನೋಡಿದ್ದರು. ರಂಗಾಚಾರ‍್ಲುರವರ ಪ್ರಾಮಾಣಿಕತೆಯೂ ಚಾರಿತ್ರವೂ ರಾಜ್ಯತಂತ್ರ ದೂರದೃಷ್ಠಿಯೂ ವೆಂಕಟಕೃಷ್ಣಯ್ಯನವರ ಮನಸ್ಸನ್ನು ಪಟ್ಟಾಗಿ ಹಿಡಿದಿದ್ದವು. ರಂಗಾಚಾರ‍್ಲು ಸ್ಥಾಪನೆ ಮಾಡಿದ ಮೈಸೂರು ಪ್ರಜಾಪ್ರತಿನಿಧಿ ಸಭೆಗೆ ಅದರ ನಾಲ್ಕನೆಯ ಅಥವಾ ಐದನೆಯ ಅಧಿವೇಶನದಿಂದ ವೆಂಕಟಕೃಷ್ಣಯ್ಯನವರು ಸದಸ್ಯರಾಗಿದ್ದರು. ಆಗ ಪ್ರಾರಂಭವಾದ ಸದಸ್ಯತ್ವವನ್ನು ಅವರು ಯಾವಜ್ಜೀವವೂ ಶ್ರದ್ಧೆಯಿಂದ ಉಳಿಸಿಕೊಂಡಿದ್ದರು. ಶೇಷಾದ್ರಯ್ಯರ್‌ರವರಿಗಾದರೋ ಪ್ರಜಾಪ್ರತಿನಿಧಿ ಸಭೆಯ ವಿಷಯದಲ್ಲಿ ಅಷ್ಟು ಹೆಚ್ಚಿನ ಅಭಿಮಾನವಿರಲ್ಲಿಲ್ಲ. ಆಡಳಿತದ ಕಾರ್ಯಗಳು ಬೇಗಬೇಗನೆಯೂ ನಿರಾತಂಕವಾಗಿಯೂ ನಡೆಯಲು ಸಭೆಯಿಂದ ಅಡ್ಡಿಯೆಂದು ಶೇಷಾದ್ರಯ್ಯರವರ ಅಭಿಪ್ರಾಯ. ರಾಜ್ಯದ ರಥಕ್ಕೆ ಪ್ರಜಾಸಭೆಯು ಹೆದ್ನದಂತೆ ಆಗುತ್ತದೆಂದು ಕಾರ್ಯತತ್ಪರರಾದ ರಾಜ್ಯ ನಿರ್ವಾಹಕರು ಭಾವಿಸುತ್ತಾರೆ. ಹೀಗೂ ವೆಂಕಟಕೃಷ್ಣಯ್ಯನವರ ಮನೋಗತಕ್ಕೂ ಶೇಷಾದ್ರಯ್ಯರ್‌ರವರ ಮನೋಗತಕ್ಕೂ ವಿರೋಧ ಅನಿವಾರ್ಯವಾಯಿತು.

ವೆಂಕಟಕೃಷ್ಣಯ್ಯನವರು ತಮ್ಮ ಪತ್ರಿಕಾಲೇಖನಗಳಲ್ಲಿ ವೆಂಕಟಕೃಷ್ಣಯ್ಯರ್‌ರವರ ಆಡಳಿತದ ನ್ಯೂನತೆಗಳನ್ನು ನಿಸ್ಸಂಕೋಚವಾಗಿ ಎತ್ತಿ ಹಾಕುತ್ತ ಬಂದರು. ಇದರ ಘಾಟು ಶೇಷಾದ್ರಯ್ಯರ್‌ರವರಿಗೆ ಸಹಿಸಲಾಗದಷ್ಟು ಕಟುವಾಯಿತು. ಪ್ರಜಾಪ್ರತಿನಿಧಿಸಭೆಯಲ್ಲಿ ಒಂದು ಸಾರಿ ಪ್ರಜಾಪ್ರತಿನಿಧಿಸಭೆಯಲ್ಲಿ ವೆಂಕಟಕೃಷ್ಣಯ್ಯರ್‌ನವರ ಮುಂದಾಳುತನದಲ್ಲಿ ಕೆಲಮಂದಿ ಸದಸ್ಯರು ಸೇರಿ ಸರಕಾರಕ್ಕೆ ಒಂದು ಮನವಿ ಮಾಡಿದರು. ಸಭೆ ಹನ್ನೆರಡು ತಿಂಗಳಿಗೆ ಒಂದು ಸಲ ಸೇರುತ್ತದೆ. ಪ್ರಜಾಪರವಾದ ವಿಚಾರಣೆ ಮೇಲ್ತನಿಖೆಗಳಿಗೆ ಅಷ್ಟು ಸಾಲದು. ಪ್ರಜಾಪ್ರತಿನಿಧಿಗಳು ಒಂದು ಸಾರಿ ಸಭೆ ಸೇರಿ ಆದ ಬಳಿಕ ಇನ್ನೊಂದು ಸಾರಿ ಸೇರುವಷ್ಟರೊಳಗಾಗಿ ಸರಕಾರದ ಕಾರುಬಾರುಗಳನ್ನು ಪ್ರಜಾಸಭೆಯ ದೃಷ್ಟಿಯಿಂದ ವಿಮರ್ಶನೆ ಮಾಡುವುದಕ್ಕೂ ಹೊಸಹೊಸ ಕಾನೂನು ಕಟ್ಟುಪಾಡುಗಳನ್ನು ಪರಿಶೀಲಿಸಿ ಸೂಚನೆ ಕೊಡುವುದಕ್ಕೂ ಒಂದು ಸ್ಥಾಯೀ ಸಮಿತಿಯನ್ನು (ಸ್ಟ್ಯಾಂಡಿಂಗ್ ಕಮಿಟಿ) ಸರಕಾರವು ರಚಿಸಿ ಅದಕ್ಕೆ ತಕ್ಕ ಅಧಿಕಾರ ಕೊಡಬೇಕು. ಇದು ಆ ಮನವಿಯ ಸಾರಾಂಶ. ಸರಕಾರವು ಇದಕ್ಕೆ ಲಕ್ಷ್ಯ ಕೊಡಲಿಲ್ಲ. ಮನವಿ ಮಾಡಿದವರಲ್ಲಿ ಯುರೋಪಿಯನ್ ಪ್ಲಾಂಟರುಗಳಾದ ಕ್ರಾಫರ‍್ಡ್ ಮೊದಲಾದವರೂ ಇದ್ದರು. ಮನವಿದಾರರ ಪರವಾಗಿ ಸರಕಾರಕ್ಕೆ ಜ್ಞಾಪಕಪತ್ರಗಳನ್ನು ಬರೆದದ್ದಾಯಿತು. ಸರಕಾರ ಅದನ್ನು ಗಮನಿಸಲಿಲ್ಲ.

ಅನಂತರ ಮನವೆದಾರರು ತಮ್ಮ ಸಹಸದಸ್ಯರ ಸಭೆಯೊಂದನ್ನು ಕರೆದು ಆ ಸಭೆ ಒಂದು ಸ್ಥಾಯೀ ಸಮಿತಿಯನ್ನು ನಿಯಮಿಸುವಂತೆ ಮಾಡಿದರು. ಹೀಗೆ ನಿಯಮಿತವಾದ ಸಮಿತಿಯ ಪರವಾಗಿ ಅದನ್ನು ಸರಕಾರ ಅಂಗೀಕರಿಸಿ ಮನ್ನಿಸಬೇಕೆಂದು ಪತ್ರ ಬರೆದದ್ದಾಯಿತು. ಅದಕ್ಕೂ ಜವಾಬು ಬರಲಿಲ್ಲ. ಅಲ್ಲಿಂದ ಮುಂದೆ ನಡೆದ ಪ್ರಜಾಪ್ರತಿನಿಧಿ ಸಭೆಯ ಅಧಿವೇಶನದಲ್ಲಿ ಸಮಿತಿಯ ವಿಚಾರವನ್ನು ಸದಸ್ಯರು ಎತ್ತಿದರು. ಸಭಾಧ್ಯಕ್ಷರಾದ ದಿವಾನ್ ಶೇಷಾದ್ರಯ್ಯರ್ರವರಿಗೆ ಕೋಪ ಬಂದಿತು. ಮಾತುಗಳು ಎರಡು ಕಡೆಯೂ ಬಿಸಿಬಿಸಿ ಯಾದವು. ವೆಂಕಟಕೃಷ್ಣಯ್ಯನವರು ಕೇಳಿದರು :

  • V : “What about that Commitee?”
  • S : “That Committee is burnt.”
  • V : “Many members of it do not burn their bodies.”
  • S : “then it is buried.”
  • V : “Its ghosts will be raised.” ಹೀಗೆ ನಡೆಯಿತು ಕೋಲಾಹಲ.

ಶೇಷಾದ್ರಯ್ಯರ್‌ರವರ ದೊಡ್ಡತನ :

ಆದರೆ ಶೇಷಾದ್ರಯ್ಯರವರು ವ್ಯಕ್ತಿಶಃ ದೊಡ್ಡ ಮನುಷ್ಯರು. ರಾಜಕೀಯರಂಗದ ಸ್ನೇಹ-ವಿರೋಧಗಳನ್ನು ವೈಯಕ್ತಿಕ ಕ್ಷೇತ್ರಕ್ಕೆ ತರುತ್ತಿರಲಿಲ್ಲ. ವೈಯಕ್ತಿಕ ಕ್ಷೇತ್ರದಲ್ಲಿ ಅವರು ವೆಂಕಟಕೃಷ್ಣಯ್ಯನವರ ದೊಡ್ಡ್ಟತನವನ್ನು ಮನಸಾರ ಒಪ್ಪಿಕೊಂಡಿದ್ದರು. ಶೇಷಾದ್ರಯ್ಯರ್‌ರವರ ಮಕ್ಕಳಲ್ಲಿ ಇಬ್ಬರು ಮೂವರು ವೆಂಕಟಕೃಷ್ಣಯ್ಯನವರ ಖಾಸಾ ಶಿಷ್ಯರು. ಕೃಷ್ಣಯ್ಯರ್‌ರವರು ಡೆಪ್ಯುಟಿಕಮಿಷನರಾಗಿದ್ದಾಗ ವೆಂಕಟಕೃಷ್ಣಯ್ಯನವರು ಮಾಡಿದ ಶಿಫಾರಸುಗಳಿಗೆಲ್ಲ ಗೌರವ ಕೊಟ್ಟು ನಡೆಸಿದರು.

ವೆಂಕಟಕೃಷ್ಣಯ್ಯನವರು ಶಿಫಾರಸು ಪತ್ರಕೊಡುವುದರಲ್ಲಿ ನಿಸ್ಸೀಮರು. ಯಾರಿಗೆ ಏನು ಬೇಕಾದರೂ ಬರೆದುಕೊಡುವರು. ಬೇಕೆಂದು ಕೇಳಿದವನಿಗೆ ಇಲ್ಲವೆಂದದ್ದೇ ಇಲ್ಲ. ಹೀಗೆ ಅಯೋಗ್ಯರು ಮುಂದೆ ಬಂದ ಸಂದರ್ಭಗಳೂ ಎಷ್ಟೋ ಉಂಟು.

ಅವಿಚಾರದ ಶಿಫಾರಸು :

ಒಂದಾನೊಂದು ಇಲಾಖೆಯ ಒಬ್ಬ ಭಾರಿ ಉದ್ಯೋಗಸ್ಥರು ಯಾವುದೋ ಅಕಾರ್ಯ ನಡೆಸಿದ್ದರೆಂದು ಅವರ ಮೇಲೆ ದೂರು ಬಂದು ಅದರ ವಿಚಾರಣೆಯಾದ ಅನಂತರ ಆ ಅಧಿಕಾರಿಯನ್ನು ನಿರ್ಬಂಧವಾಗಿ ನಿವೃತ್ತಿ ಮಾಡಿಸಲಾಯಿತು. ಆ ಅಧಿಕಾರಿ ವೆಂಕಟಕೃಷ್ಣಯ್ಯನವರಲ್ಲಿ ಮರೆಹೊಕ್ಕ. ದಿನದಿನವೂ ಆತನಿಂದ ಆಗಿದ್ದ ಅನ್ಯಾಯವೆಂದು ಹೇಳಲಾದ ದೂರು ಸತ್ಯವಲ್ಲವೆಂದೂ ಆ ಅಧಿಕಾರಿ ಪರಮ ಪ್ರಾಮಾಣಿಕನೆಂದೂ ಸತ್ಯಸಂಧನೆಂದೂ ಭಗವದ್ಭಕ್ತನೆಂದೂ ಮಹಾನಿಃಸ್ಪೃಹನೆಂದೂ ಲೇಖನಗಳು ಆರಂಭವಾದವು. ಬಹುದಿನ ಹೀಗೆ ನಡೆಯಿತು. ಆದರಿಂದ ಏನೂ ಫಲವಾದಂತೆ ತೋರಲಿಲ್ಲ. ಆಮೇಲೆ ವೆಂಕಟಕೃಷ್ಣಯ್ಯನವರು ಆ ಆಧಿಕಾರಿಯನ್ನು ಕುರಿತು ಪ್ರಶಂಸೆ ಮಾಡಿ ಒಂದು ಪತ್ರವನ್ನು ದಿವಾನ್ ವಿಶ್ವೇಶ್ವರಯ್ಯನವರಿಗೆ ಕಳಿಸಿದರು. ದಿವಾನರು ಪ್ರತ್ಯುತ್ತರ ಬರೆದು ವೆಂಕಟಕೃಷ್ಣಯ್ಯನವರನ್ನು ಮುಖತಃ ನೋಡುವಂತೆ ಆಹ್ವಾನಿಸಿದರು. ಅಂದು ವೆಂಕಟಕೃಷ್ಣಯ್ಯನವರ ಜೊತೆಯಲ್ಲಿ ನಾನೂ ಹೋಗಿದ್ದೆ. ವಿಶ್ವೇಶ್ವರಯ್ಯನವರು ಕುಶಲಪ್ರಶ್ನೆಗಳಾದ ಮೇಲೆ ಒಂದು ಕಾಗದದ ಕಟ್ಟನ್ನು ವೆಂಕಟಕೃಷ್ಣಯ್ಯನವರ ಕೈಗೆ ಕೊಟ್ಟು ಅದನ್ನು ನೋಡಬೇಕೆಂದರು. ವೆಂಕಟಕೃಷ್ಣಯ್ಯನವರು ಅದನ್ನೆಲ್ಲ ಸಾವಧಾನವಾಗಿ ಓದಿ ಕಾಗದದ ಕಟ್ಟನ್ನು ಮೇಜಿನ ಮೇಲಿಟ್ಟು, ನೋಡಿದಿರಾ| ಆತ ಇದನ್ನೆಲ್ಲ ನನಗೆ ಹೇಳಲೇ ಇಲ್ಲವಲ್ಲ| ಏನೇನೋ ಮಾಡಿಕೊಂಡಿದ್ದಾನಲ್ಲ| -ಎಂದರು. ವಿಶ್ವೇಶ್ವರಯ್ಯನವರು ಹೇಳಿದರು:

ನೋಡಿ, ನೀವು ಪೇಪರುಗಳಲ್ಲಿ ಬರೆದು ನನಗೆ ಕಾಗದ ಕಳಿಸಿ ಇಷ್ಟೆಲ್ಲ ರಗಳೆ ಮಾಡಿದಿರಿ. ನಿಮ್ಮ ಕೈ ಗೆ ನಾನುಕೊಟ್ಟದ್ದು ಒಂದು ಸಮಿತಿಯವರ ರಿಪೋರ್ಟು. ಆ ಸಮಿತಿಯ ಮೆಂಬರುಗಳಿಗಿಂತ ಸತ್ಯ ಸಂಧರೂ ಸಮರ್ಥರೂ ಆದ ದೊಡ್ಡ ಮನುಷ್ಯರನ್ನು ನಾನು ಎಲ್ಲಿಯೂ ಕಂಡಿಲ್ಲ. ನೀವು ಅದನ್ನು ಅಂಗೀಕರಿಸುತ್ತೀರಷ್ಟೇ?

ವೆಂಕಟಕೃಷ್ಣಯ್ಯನವರು : ಇಲ್ಲದೆ ಉಂಟೆ? ಅವರೆಲ್ಲ ಸತ್ಯ ಸಂಧರು, ನಿಃಸ್ಪೃಹರಾದವರು.

ವಿಶ್ವೇಶ್ವರಯ್ಯನವರು : ನಿಮ್ಮ ಸ್ನೇಹಿತರನ್ನು ಪ್ರಾಸಿಕ್ಯೂಟ್ ಮಾಡಬೇಕೆಂದು ಶಿಫಾರಸು ಮಾಡಿದ್ದಾರೆ. ನಿಮಗಾಗಿ ಆ ಪ್ರಾಸಿಕ್ಯೂಷನ್ ಕ್ರಮವನ್ನು ನಾನು ತಡೆದಿದ್ದೇನೆ. ಇನ್ನು ಮೇಲೆ ಆ ಮನುಷ್ಯನ ವಿಷಯ ರಗಳೆ ಮಾಡಿದರೆ ಪ್ರಾಸಿಕ್ಯೂಷನ್ ಮಾಡಿಸಿ ಕೋರ‍್ಟಿನವರು ಸತ್ಯಾಂಶವನ್ನು ಹೊರಗೆ ಹಾಕುವಂತೆ ಮಾಡಬೇಕಾಗುತ್ತದೆ,

ವೆಂಕಟಕೃಷ್ಣಯ್ಯನವರು ಆ ಮನುಷ್ಯನನ್ನು ಒಳ್ಳೆಯ ಮಾತುಗಳಲ್ಲಿ ಶಪಿಸುತ್ತ, ನಗುತ್ತ ಹೊರಕ್ಕೆ ಬಂದರು. ಪ್ರೊ|| ವೆಂಕಟನಾರಣಪ್ಪವರಂತೆ ವೆಂಕಟಕೃಷ್ಣಯ್ಯನವರೂ ಮೊದಲು ನಂಬುವುದು; ಮನುಷ್ಯ ಅಯೋಗ್ಯನೆಂದು ಗೊತ್ತಾದ ಮೇಲೆ ಎಂಥ Clever rascal ಎಂದು ಶ್ಲಾಘನೆ ಮಾಡುವುದು ಪದ್ಧತಿ.

ಬರವಣಿಗೆ :

ವೆಂಕಟಕೃಷ್ಣಯ್ಯನವರು ಒಳ್ಳೆಯ ವಿದ್ವಾಂಸರು.ಆದರೆ ವಿದ್ವತ್ತೆಯನ್ನು ಎಂದೂ ಪ್ರಕಾಶಪಡಿಸಿದವರಲ್ಲ. ಅವರು ಸಂಸ್ಕೃತ ಸಾಹಿತ್ಯದಲ್ಲಿ ಚೆನ್ನಾಗಿ ಪರಿಶ್ರಮ ಮಾಡಿದ್ದರು. ಅವರ ಇಂಗ್ಲಿಷಂತೂ ವೀರ್ಯವತ್ತಾದದ್ದು, ಮತ್ತು ಗಂಭೀರವಾದದ್ದು. ಅವರ ಕನ್ನಡ ಸರಳತೆಗೂ ಲಾಲಿತ್ಯಕ್ಕೂ ಓಜಸ್ಸಿಗೂ ಆದರ್ಶಪ್ರಾಯವಾದದ್ದು. ಅವರ ಕನ್ನಡ ಗ್ರಂಥಗಳಲ್ಲಿ ನಮ್ಮ ಲಕ್ಷ್ಮೀನಾರಾಣಪ್ಪನವರು ಎರಡನ್ನು ಪದೇ ಪದೇ ಉದಾಹರಿಸುತ್ತಿದ್ದರು: ಒಂದು ಧನಾರ್ಜನೆಯ ಕ್ರಮ; ಇನ್ನೊಂದು ಚೋರಗ್ರಹಣ ತಂತ್ರ. ಈ ಮಾತನ್ನು ಲಕ್ಷ್ಮೀನಾರಾಣಪ್ಪನವರು ವೆಂಕಟಕೃಷ್ಣಯ್ಯನವವರ ಎದುರಿಗೇ ಅವರ ಮುಖಕ್ಕೆ ತಿಕ್ಕಿದಂತೆ ಹೇಳುವರು; ವೆಂಕಟಕೃಷ್ಣಯ್ಯನವರು ತಾವೂ ಮನಸಾರ ನಗುವರು:

ಧನಾರ್ಜನೆಯ ಕ್ರಮ ತಿಳಿದವರು ನ್ಯೂಸ್ ಪೇಪರ್ ಕೆಲಸಕ್ಕೆ ಬರುವುದಿಲ್ಲ- ಎಂಬುದು ಲಕ್ಷ್ಮೀನಾರಾಣಪ್ಪನವರ ಮೊದಲನೆಯ ಟೀಕೆ. ನಿಮ್ಮ ಕ್ರಮದಲ್ಲಿ ಧನಾರ್ಜನೆ ಮಾಡ ಹೊರಟರೆ ಪದ್ಮಾಲಯವನ್ನು ಮಾರಬೇಕಾಗಿ ಬಂದದ್ದೇ ಅದಕ್ಕೆ ದೃಷ್ಟಾಂತ. ಇನ್ನು ಚೋರಗ್ರಹಣ ತಂತ್ರ. ನಿಮಗೆ ಮನಿ ಆರ‍್ಡರು ಬರುತ್ತದೆ- ಎಂದಾದರೂ ಹಣ ಎಣಿಸಿದ್ದೀರಾ?

ಧನಾರ್ಜನೆಯ ಕ್ರಮ

ಲಕ್ಷ್ಮೀನಾರಣಪ್ಪನವರು ಒಂದು ಜಾಗರೂಕತೆಯನ್ನು ಪದ್ಧತಿಯಲ್ಲಿಟ್ಟುಕೊಂಡಿದ್ದರು. ವೆಂಕಟಕೃಷ್ಣಯ್ಯನವರು ಯಾವಾಗ ಬೆಂಗಳೂರಿಗೆ ಬಂದರೂ ಲಕ್ಷ್ಮೀನಾರಣಪ್ಪನವರ ಮನೆಯಲ್ಲಿಯೇ ಇಳಿದುಕೊಳ್ಳುತ್ತಿದ್ದರು. ಅವರು ವಾಪಸ್ ಹೊರಟಾಗ ಲಕ್ಷ್ಮೀನಾರಣಪ್ಪನವರು ರೈಲ್ವೆ ಸ್ಟೇಷನ್ನಿಗೆ ಬಂದು ಒಂದು ಚೀಟಿಯಲ್ಲಿ ಎಷ್ಟು ಹಣವಿದೆಯೆಂದು ಗುರುತು ಹಾಕಿ ಆ ಚೀಟಿಯನ್ನೂ ಆ ಹಣವನ್ನೂ ವೆಂಕಟಕೃಷ್ಣಯ್ಯನವರ ಧೋತ್ರದ ಸೆರಗಿನಲ್ಲಿ ಗಂಟು ಹಾಕಿ ಅ ಗಂಟನ್ನು ಹಿಡಿಯಲ್ಲಿ ಸಿಕ್ಕಿಸಿ ಭದ್ರ, ಭದ್ರ ಎನ್ನುತ್ತಿದ್ದರು.

ಇಷ್ಟೆಲ್ಲ ಮಾಡಿದರೂ ಅಷ್ಟು ಹಣ ಮೈಸೂರಿಗೆ ತಲುಪುತ್ತಿರಲಿಲ್ಲ. ಬಿಡದಿ ಸ್ಟೇಷನ್ನಿನಲ್ಲಿ ಬೆತ್ತ ಮಾರುವವನು ಒಂದು ಬೆತ್ತ ತೋರಿಸಿದನೆನ್ನಿ.

ಇದೆಷ್ಟೋ ಪುಣಾತ್ಮ?

ಮೂರೇ ರೂಪಾಯಿ ಬುದ್ದಿ. ಬಲು ಪಸಂದಾಗೈತೆ. ಮೂರು ರೂಪಾಯಿ ಕಳೆಯಿತು

ರಾಮನಗರದ ಸ್ಟೇಷನ್ನಿನಲ್ಲಿ ಬಾಳೆಹಣ್ಣು. ನಾಲ್ಕು ಬಾಳೆ ಹಣ್ಣಿಗೆ ಎಂಟಾಣೆ ಹೋಯಿತು. ಎಷ್ಟೋಸಾರಿ ಒಂದು ರೂಪಾಯಿ ಬಂದಾ ಕೊಡುವರು. ಚಿಲ್ಲರೆ ವಾಪಸ್ ಕೇಳೋಣವೇ ಇಲ್ಲ.

ಒಂದು ಸಾರಿ ಚೆನ್ನಪಟ್ಟಣದ ಸ್ಟೇಷನ್ನಿಂದ ಬಣ್ಣದ ಗೊಂಬೆ ಬುಗುರಿಗಳನ್ನು ತಂದರು. ಲಕ್ಷ್ಮೀನಾರಣಪ್ಪನವರು ಕೇಳಿದರು:

ಇದು ಯಾರಿಗೆ?

ಮಕ್ಕಳಿಗೆ ಆಡೋದಕ್ಕೆ, ಇರಲಿ.

ಈ ಮನೆಯಲ್ಲಿ ಬೊಂಬೆಯಾಟ ಆಡುವವರು ಯಾರಿದ್ದಾರೆ. ವೆಂಕಟಕೃಷ್ಣಯ್ಯ ನನ್ನ ಕಡೆ ಕೈ ತೋರಿಸಿದರು! ನಾ ಕೇಳಿದೆ:

ನನಗೇನು?

ಹೌದು

ಇನ್ನೊಂದು ಸಾರಿ ಖಾರಾಬೂಂದಿ ಲಡ್ಡು ಪಟ್ಟಣಗಳನ್ನು ಮದ್ದೂರಿನಿಂದ ತಂದರು. ಲಕ್ಷ್ಮೀನಾರಣಪ್ಪನವರು ರೇಗಿ ಕೂಗಾಡಿದರು ವೆಂಕಟಕೃಷ್ಣಯ್ಯನವರು ಪಾಪ ಮಗು ತಿನ್ನಲಿ ಎಂದು ಅದನ್ನೆಲ್ಲ ನನ್ನ ಕೈಯಲ್ಲಿ ರಾಶಿ ಮಾಡಿದರು. ಹೀಗೆ ಹುಚ್ಚಾಟ. ಹಣವೆಂದರೆ ಹಿಡಿತವಿಲ್ಲ. ಇದು ಅವರ ಧನಾರ್ಜನೆಯ ಕ್ರಮ.

ಧರ್ಮಸತ್ರ :

ವೆಂಕಟಕೃಷ್ಣಯ್ಯನವರ ಜೀವನಮಾನದಲ್ಲಿ ಅವರು ವ್ಯಕ್ತಿಶಃ ಶಾಂತಿ ವಿಶ್ರಾಂತಿಗಳನ್ನು ಅನುಭವಿಸಿದ ಕಾಲ ಯಾವುದೋ ನಾನು ಕಾಣೆ. ನನ್ನ ಐವತ್ತು ಅರುವತ್ತು ವರ್ಷಗಳ ಅನುಭವದಲ್ಲಿ ಅವರಿಗೆ ಖಾಸಗಿ ವ್ಯಕ್ತಿಜೀವನ (Pಡಿivಚಿಣe ಟiಜಿe) ಇದ್ದಂತೆಯೇ ತೋರಲಿಲ್ಲ. ಅವರ ಮನೆ ಧರ್ಮಛತ್ರ. ಅವರು ಕುಳಿತಿದ್ದ ಕಡೆ ಸಂತೆ. ಊಟಕ್ಕೂ ಮಾತಿಗೂ ಯಾರುಯಾರೋ ಬಂದು ಸೇರುತ್ತಿದ್ದರು. ಪರಿಚಿತರು ಅಪರಿಚಿತರು, ಸ್ನೇಹಿತರು, ಕಪಟಸ್ನೇಹಿತರು, ವಿದ್ಯಾರ್ಥಿಗಳು, ಸಾರ್ವಜನಿಕರು, ಅಧಿಕಾರಿಗಳು, ಪಂಡಿತರು, ಉಪಾಧ್ಯಾಯರು ಇರುತ್ತಿದ್ದರು. ಯಾರಿಗೆ ಏನು ಉದ್ದೇಶವಿತ್ತೋ ಗೊತ್ತಾಗುತ್ತಿರಲಿಲ್ಲ.ಗೊತ್ತಾದ ಉದ್ದೇಶವಿದ್ದವರು ಇಬ್ಬರೋ ಮೂವರೋ ಇದ್ದರೆ, ಬೇರೋಜಗಾರರು ಎಂಟುಹತ್ತು ಮಂದಿ. ಹೀಗೆ ಸಾಗುತ್ತಿತ್ತು ದಿನ, ಬೆಳಗ್ಗೆ ಐದು ಘಂಟೆಯಿಂದ ರಾತ್ರಿ ಹತ್ತು ಘಂಟೆಯವರೆಗೂ. ಅವರಿಗೆ ಊಟದ ಹೊತ್ತು, ನಿದ್ದೆ ಹೊತ್ತು ಎನ್ನದೆ ಜನ ಬಂದದ್ದೂ ಬಂದದ್ದೇ, ಹೋದದ್ದೂ ಹೋದದ್ದೇ, ಈ ಜನಸಂದಣಿ ದಸರಾ ಕಾಲದಲ್ಲಿಯೂ ಮಹಾರಾಜರ ವರ್ಧಂತಿಯ ಕಾಲದಲ್ಲಿಯೂ ಇನ್ನೂ ಹೆಚ್ಚಾಗಿರುತ್ತಿತ್ತು.

ಅವರು ಪದ್ಮಾಲಯದಲ್ಲಿದ್ದಾಗ ನಾನು ಕಂಡ ಒಂದು ಬೆಳಗ್ಗಿನ ಅನುಭವವನ್ನು ಹೇಳುತ್ತೇನೆ. ಸುಮಾರು ಆರೂಮುಕ್ಕಾಲು ಏಳು ಘಂಟೆಯ ವೇಳೆಗೆ ಇಬ್ಬರು ಮೂರು ಮಂದಿ ಬಂದಿರುವರು. ಏಳು ಘಂಟೆಯ ವೇಳೆಗೆ ಐದಾರು ಮಂದಿ. ಅವರಲ್ಲಿ ಕೆಲವರು ಲಾಯರುಗಳು. ಒಬ್ಬಿಬ್ಬರು ಇತರ ಗಣ್ಯವ್ಯಕ್ತಿಗಳು. ಅವರಲ್ಲಿ ಯಾರೋ ಒಬ್ಬರು ಯಾವುದೋ ಊರಿನ ಸುದ್ದಿಯನ್ನೆತ್ತುವರು. ಆ ನೆವದಿಂದ ಏನು ಅನ್ಯಾಯ!" ಕೇಳುವವರೇ ಇಲ ಎಂದು ಕೂಗಾಡುವರು. ಇನ್ನೊಬ್ಬರು ಯಾವನೋ ಅಧಿಕಾರಿಯನ್ನು ನಿಂದಿಸುವರು. ಹೀಗೆ ಕೂಗಾಟ ರೇಗಾಟಗಳು ಏಳು ಏಳೂವರೆ ಘಂಟೆಯವರೆಗೆ ನಡೆಯುವುದು. ಎಲ್ಲರಿಗೂ ಉಪ್ಪಿಟ್ಟು ಕಾಫಿಗಳ ಸೇವೆ ನಡೆಯುವುದು. ಬಳಿಕ ಅವರೆಲ್ಲ ಎದ್ದು ಒಬ್ಬೊಬ್ಬರಾಗಿ ದಾರಿ ಹಿಡಿಯುವರು. ಇದು ದೊಡ್ಡಮನುಷ್ಯರುಗಳ ದೇಶಸೇವೆಯ ರೀತಿ.

ವೆಂಕಟಕೃಷ್ಣಯ್ಯನವರಿಗೆ ಆ ಜನದ ಯೋಗ್ಯತೆ ತಿಳಿದಿರಲಿಲ್ಲವೆಂದಲ್ಲ. ಅನೇಕ ಮಂದಿ ಸ್ನೇಹಿತರು ಅವರನ್ನು ಯಾವುದೋ ತಂಟೆಗೆ ಸಿಕ್ಕುಹಾಕಿಸಿ ಸಮಯದಲ್ಲಿ ಕೈಕೊಟ್ಟದನ್ನು ಅವರು ಮರೆತಿರಲಿಲ್ಲ. ಆದರೆ ಅವರು ಯಾರನ್ನು ಎಂದೂ ಹಂಗಿಸಿದವರಲ್ಲ. ಅವರು ಹೀಗೆ ಎಲ್ಲರನ್ನೂ ಕ್ಷಮಿಸಿ ಎಲ್ಲರನ್ನೂ ಆದರಿಸುತ್ತಿದ್ದುದಕ್ಕೆ ಮೂರು ಕಾರಣಗಳನ್ನು ನಾನು ಊಹಿಸಿಕೊಂಡಿದ್ದೇನೆ (೧) ಅವರದು ದಾಕ್ಷಿಣ್ಯದ ಪ್ರಕೃತಿ.ಸ್ವಭಾವದಲ್ಲ್ಲಿಯೇ ಅವರು ಮೃದುಲ.(೨) ಸಾರ್ವಜನಿಕ ಕಾರ್ಯದಲ್ಲಿರುವವರು ಯಾರನ್ನೂ ವಿರೋಧ ಮಾಡಿಕೊಳ್ಳಬಾರದು. ಯಾವ ಸಮಯದಲ್ಲಿ ಯಾರಿಂದ ಏನು ಸಹಾಯ ಬೇಕಾದೀತೋ! (೩) ಪ್ರತಿಯೊಬ್ಬನಿಗೂ ತನ್ನನ್ನು ತಾನು ತಿದ್ದಿಕೊಳ್ಳುವುದಕ್ಕೆ ಅವಕಾಶ ಕೊಡಬೇಕು. ಅವನನ್ನು ಬೈದು ಛೀಮಾರಿ ಹಾಕಿದರೆ ಅವನಿಗೆ ರೋಷ ಬರುತ್ತದೆ ; ತಿದ್ದಿಕೊಳ್ಳುವ ಪ್ರವೃತ್ತಿಯನ್ನು ಆ ರೋಷ ಹೋಗಲಾಡಿಸುತ್ತದೆ.

ಈ ಯೋಜನೆಗಳಿಂದಲೋ ಹೇಗೋ; ವೆಂಕಟಕೃಷ್ಣಯ್ಯನವರು ಎಲ್ಲರಲ್ಲಿಯೂ ವಿನಯದಿಂದಲೂ ವಿಶ್ವಾಸದಿಂದಲೂ ನಡೆದುಕೊಳ್ಳುತ್ತಿದ್ದರು. ಜನ ಅವರನ್ನು ದಯಾಸಾಗರ, ದಯಾಸಾಗರ ಭೀಷ್ಮಾಚಾರ್ಯ- ಎಂದು ಕರೆದಿದ್ದಾರೆ. ಅದು ಅನುಚಿತವೆಂದಾಗಲಿ ಉತ್ಪ್ರೇಕ್ಷೆಯೆಂದಾಗಲೀ ಯಾರೂ ಹೇಳರು. ಆದರೆ ನಾನು ಅವರನ್ನು ಜೋನಿಬೆಲ್ಲದ ಗುಡಾಣ ಎಂದು ಕರೆದೇನು. ಬೇಕಾದವರು ಬೇಕಾದಂತೆ ಕಿತ್ತುತಿಂದರು.

ಸರ್ವತೋಮುಖತೆ :

ಚಿಕ್ಕಮಗಳೂರಿನ ಕಾಫಿ ಪ್ಲಾಂಟರ್ ಶ್ರೀನಿವಾಸರಾಯರು ವೆಂಕಟಕೃಷ್ಣಯ್ಯ ಅತ್ಯಂತ ಪ್ರೀತಿಯಿಂದ ಹಾಸ್ಯ ಮಾಡುತ್ತಿದ್ದರು; ಮೈಸೂರಿನ ದರೋಡೆಕಾರರ ಸಂಘ ಎಂದು ಪುಂಡಾಡಿ ಜನರು ಒಂದು ಸಂಘ ಮಾಡಿ ಅದಕ್ಕೆ ಅಧ್ಯಕ್ಷರಾಗಬೇಕೆಂದು ವೆಂಕಟಕೃಷ್ಣಯ್ಯನವರನ್ನು ಕೇಳಿದ್ದಿದ್ದರೆ ಇವರು ಬೇಡವೆನ್ನುತ್ತಿರಲಿಲ್ಲ- ಎಂದು.

೧೯೧೦-೧೭ ರಲ್ಲಿ ಮರಿಮಲ್ಲಪ್ಪನವರ ಹೈಸ್ಕೂಲಿನಲ್ಲಿ ಒಂದೇ ಮಧ್ಯಾಹ್ನ ಎರಡು ಘಂಟೆಯಿಂದ ಏಳರ ವರೆಗೆ ಮೂರೋ ನಾಲ್ಕೋ ಕಾನ್ಫೆರೆನ್ಫ್‌ಗಳು ನಡೆದವು. ಪ್ರತಿಯೊಂದಕ್ಕೂ ವೆಂಕಟಕೃಷ್ಣಯ್ಯನವರೇ ಅಧ್ಯಕ್ಷರು, ಥಿಯೊಸಾಫಿಕಲ್ ಸೊಸೈಟಿ, ಆರ್ಯಸಮಾಜ, ಸಮಾಜ ಸುಧಾರಣೆ, ವಿತಂತು ಸಂರಕ್ಷಣೆ, ಗೋಸಂರಕ್ಷಣೆ-ಈ ನಾನಾ ಉದ್ದೇಶಗಳಲ್ಲಿ ಒಂದೊಂದಕ್ಕೂ ಒಂದೊಂದು ಪರಿಷತ್ತು. ಎಲ್ಲದರಲ್ಲಿಯೂ ವೆಂಕಟಕೃಷ್ಣಯ್ಯನವರೇ ಮುಖ್ಯ ಪಾತ್ರ. ನಾನು ಆ ಸಭೆಗಳಲ್ಲಿ ಹಾಜರಿದ್ದೆ. ಅವರ ವಿವಿಧಾಸಕ್ತಿಯನ್ನು ನೋಡಿದೆ. ಪ್ರತಿಯೊಂದು ವಿಷಯದಲ್ಲಿಯೂ ಯಾರಿಗೂ ಬೇಸರವಾಗದಂತೆ, ಅಸಮಾಧಾನವಾಗದಂತೆ ಮಾತನಾಡಿದರು. ಆಯಾ ವಾದದಲ್ಲಿದ್ದ ಗುಣಗಳನ್ನು ಮಾತ್ರ ಒಂದೆರಡು ಮಾತುಗಳಲ್ಲಿ ಗಂಭೀರವಾಗಿ ಹೇಳುವರು.

ಹೀಗೆ ಅವರು ಎಲ್ಲರಿಗೂ ಬೇಕಾದವರು. ಅಂದರಿಕೀ ಮಂಚಿವಾಡು ಅನಂತಯ್ಯ.

ಶಾಸನ ಸಭೆಯಲ್ಲಿ :

೧೯೧೫-೧೬ ರಲ್ಲಿ ಮೈಸೂರಿನ ಶಾಸನ ಸಭೆಯಲ್ಲಿ (ಲೆಜಿಸ್ಲೆಟಿವ್‌ಕೌನ್ಸಿಲ್) ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಬಂಧಪಟ್ಟ ಒಂದು ಕಾನೂನು ವಿಚಾರದಲ್ಲಿತ್ತು. ವೆಂಕಟಕೃಷ್ಣಯ್ಯನವರೂ ಆಗ ಆ ಸಭೆಯಲ್ಲಿದ್ದರು. ಆಗ ಕೌನ್ಸಿಲ್ ಮೆಂಬರಾಗಿದ್ದ ಸರ್.ಎ.ಆರ್. ಬ್ಯಾನರ್ಜಿಯವರು ಆ ಕಾನೂನನ್ನು ಸಭೆಗೆ ಒಪ್ಪಿಸಿದರು. ಆ ಸಂದರ್ಭದಲ್ಲಿ ಅವರು ಹೀಗೆ ಹೇಳಿದರು: ಮೈಸೂರು ಪಟ್ಟಣದಿಂದ ಅನೇಕ ಮನವೆಗಳು ಬಂದಿವೆ. ಅವುಗಳಲ್ಲಿ ಒಂದು: 'ಮಿ|| ಎಂ. ವೆಂಕಟಕೃಷ್ಣಯ್ಯ, ಲಿಟೆರರಿ ಯೂನಿಯನ್ನಿನ ಪ್ರಸಿಡೆಂಟರು ಹೀಗೆ ಬರೆದಿದ್ದಾದರೆ. ಇನ್ನೋಂದು ಮಿ|| ಎಂ.ವೆಂಕಟಕೃಷ್ಣಯ್ಯ, ಮುನಿಸಿಪಲ್ ಕೌನ್ಸಿಲ್ ಮೆಂಬರು ಕೌನ್ಸಿಲಿನಲ್ಲಿ ಹೀಗೆ ಸೂಚಿಸಿದ್ದಾರೆ. ಮೂರನೆಯದು ಮಿ|| ಎಂ. ವೆಂಕಟಕೃಷ್ಣಯ್ಯ, ಉಪಾಧ್ಯಾಯ ಸಂಘದ ಅಧ್ಯಕ್ಷರು ಹೀಗೆ ಬರೆದಿದ್ದಾರೆ. ನಾಲ್ಕನೆಯದು ಮಿ|| ವೆಂಕಟಕೃಷ್ಣಯ್ಯನವರು, ಪಂಡಿತ ಮಂಡಲಿ ಹೀಗೆ ಬರೆದಿದ್ದಾರೆ.ಐದನೆಯದು ಮಿ|| ವೆಂಕಟಕೃಷ್ಣಯ್ಯನವರು, ಮಹಾಜನಸಭೆಯ ಅಧ್ಯಕ್ಷರು ಹೀಗೆ ಹೇಳಿದ್ದಾರೆ'.

ಬ್ಯಾನರ್ಜಿಯವರು ಈ ರೀತಿ ಏಳೆಂಟು ಸಂಸ್ಥೆಗಳ ಹೆಸರನ್ನು ಹೇಳಿ ಈ ಅಭಿಪ್ರಾಯಗಳನ್ನು ಓದಿ ಕಡೆಗೆ ಈ ಸಭೆಯಲ್ಲಿ ಒಬ್ಬ ವೆಂಕಟಕೃಷ್ಣಯ್ಯನವರು ಕುಳಿತಿದ್ದಾರೆ. ಅವರು ಏನು ಹೇಳುತ್ತಾರೋ ಕುತೂಹಲದಿಂದ ನಿರೀಕ್ಷಿಸಿಕೊಂಡಿದ್ದೇನೆ. ಈ ಮೇಲಣ ಏಳೆಂಟು ಅಭಿಪ್ರಾಯಗಳಲ್ಲಿ ಇವರದು ಯಾವುದಾದರೂ ಉಂಟೇ? ಅಥವಾ ಇವರದು ಒಂಭತ್ತನೆಯದೊ?

ಬ್ಯಾನರ್ಜಿಯವರ ಈ ವ್ಯಾಖ್ಯಾನವನ್ನು ವೆಂಕಟಕೃಷ್ಣಯ್ಯನವರು ಕೇಳುತ್ತ, ಎಲ್ಲರೊಡನೆಯೂ ಸೇರಿ ನಕ್ಕು, ಆಮೇಲೆ ಹೀಗೆ ಉತ್ತರ ಕೊಟ್ಟರು:

ನಾನು ಅನೇಕ ಸಭೆ ಸಂಸ್ಥೆಗಳಿಗೆ ಸೇರಿದ್ದೇನೆ. ಆಯಾ ಸಭೆಯ ಆಯಾ ಸಂಸ್ಥೆಯ ಅಭಿಪ್ರಾಯವನ್ನು ಅಲ್ಲಲ್ಲಿ ನಿರ್ಣಯವಾದಂತೆ ಮನವೆ ಮಾಡಿದ್ದೇನೆ. ಅದು ಸಭೆಯ ಅಧ್ಯಕ್ಷನ ಕರ್ತವ್ಯ. ಈಗ ನಾನು ಇಲ್ಲಿ ನನ್ನ ಸ್ವಂತ ಅಧಿಕಾರದಲ್ಲಿ ((Personal capacity) ) ತೋರಿದ್ದನ್ನು ಹೇಳುತ್ತೇನೆ

ಇದು ವೆಂಕಟಕೃಷ್ಣಯ್ಯನವರ ಸರ್ವತೋಮುಖತೆ. ಅವರು ಯಾರನ್ನೂ ನೋಯಿಸಲಾರರು.

ಗೃಹಜೀವನ :

ವೆಂಕಟಕೃಷ್ಣಯ್ಯನವರು ನೆಮ್ಮದಿಯನ್ನು ಕಂಡ ಕಾಲ ಯಾವುದೋ ಕಾಣೆನೆಂದು ಹೇಳಿದೆ. ೧೯೧೩ ರಲ್ಲೋ ೧೯೧೪ ರಲೋ ದಸರಾ ಸಮಯದಲ್ಲಿ ನಾನು ಅತಿಥಿಯಾಗಿದ್ದೆ. ಆಗ ಅವರು ರಮಾವಿಲಾಸ ಅಗ್ರಹಾರದ ಒಂದು ಮನೆಯಲ್ಲಿದ್ದರು. ಅವರ ಮಗ ನಾರಾಯಣರಾಯರು ನನಗೆ ಪ್ರಿಯಮಿತ್ರರಾಗಿದ್ದರು. ನಾರಾಯಣರಾಯರ ಕುಟಂಬ ಶ್ರೀಮತಿ ರುಕ್ಮಿಣಿಯಮ್ಮನವರು ನನ್ನ ಪತ್ನಿಗೆ ಒಡಹುಟ್ಟಿದವರೋ ಎಂಬಂತೆ ಇದ್ದರು ರುಕ್ಕಮ್ಮನವರು. ನಾರಾಯಣರಾಯರೂ ರುಕ್ಕಮ್ಮನವರೂ ಅವರ ಮಗ (ಈಗ ಐ.ಸಿ.ಎಸ್.)ಐದಾರು ವರ್ಷದ ಹುಡುಗ ಎಂ. ಸುಬ್ಬರಾಯರೂ ವೆಂಕಟಕೃಷ್ಣಯ್ಯನವರೊಡನೆ ಇದ್ದರು. ನಾನು ಅಲ್ಲಿ ಬಿಡಾರ ಮಾಡಿದ್ದು ನಾರಾಯಣರಾಯರ ಮತ್ತು ಅವರ ಭಾರ್ಯೆಯ ಪ್ರೀತಿಯ ಒತ್ತಾಯದಕಾರಣದಿಂದ. ವೆಂಕಟಕೃಷ್ಣಯ್ಯನವರು ಗೃಹ ಜೀವನದಲ್ಲಿ ಅಷ್ಟಿಷ್ಟು ನೆಮ್ಮದಿ ಕಂಡ ಕಾಲ ಇದು ಎಂದು ನನ್ನ ತಿಳಿವಳಿಕೆ. ಮಗು ಸುಬ್ಬರಾಯನನ್ನು ಬಂದವರೆಲ್ಲ ನೋಡಿ ಸಂತೋಷಪಡುತ್ತಿದ್ದರು. ಸುಂದರವಾದ ರೂಪ, ಸುಂದರವಾದ ಬಣ್ಣ, ಮುಖದಲ್ಲಿ ಬಹುಮಟ್ಟಿಗೆ ತಾತನ ಹೋಲಿಕೆ. ಮಾತಿನಲ್ಲಿ ಚಟುವಟಿಕೆ. ಇದನ್ನೆಲ್ಲ ಬಂದವರು ಮೆಚ್ಚಿಕೊಂಡಿದ್ದರು. ಆ ಮೆಚ್ಚಿಗೆಯನ್ನು ವೆಂಕಟಕೃಷ್ಣಯ್ಯನವರು ದೂರದಿಂದ ಕಂಡು ಹಿಗ್ಗುತ್ತಿದ್ದರು. ಆ ಹಿಗ್ಗು ವೆಂಕಟಕೃಷ್ಣಯ್ಯನವರ ಕಣ್ಣುಗಳಿಂದಲೇ ತೋರುತ್ತಿತ್ತೇ ಹೊರತು ಅವರ ಬಾಯಿಂದ ಹೊರಟದ್ದಲ್ಲ.

ಲೇಖನಕಾರ್ಯ

ವೆಂಕಟಕೃಷ್ಣಯ್ಯನವರು ಬೆಳಗಿನ ಜಾವ ನಾಲ್ಕು ಘಂಟೆಗೇ ಏಳುತ್ತಿದ್ದರು. ಸುಮಾರು ಐದು ಘಂಟೆಗೆ ತಲೆಗೆ ಒಂದು ಲಪ್ಪಟ್ಟೆ ಬಿಗಿದು ಆರ‍್ಟಿಕಲ್ ಬರೆಸಲು ಕೂಡುತ್ತಿದ್ದರು. ಅವರು ಹೇಳಿದ್ದನ್ನು ಶಿಷ್ಯರೊಬ್ಬರು ಬರೆದುಕೊಳ್ಳುತ್ತಿದ್ದರು. ಇಂಗ್ಲಿಷಿನಲ್ಲಿ ಅಥವಾ ಕನ್ನಡದಲ್ಲಿ ವೆಂಕಟಕೃಷ್ಣಯ್ಯನವರು ಸಾಮಾನ್ಯವಾಗಿ ಮದರಾಸು ಮೈಲ್ ಪತ್ರಿಕೆಯ ಒಂದು ಸಂಚಿಕೆಯನ್ನು ಕೈಯಲ್ಲಿ ಹಿಡಿದು ಅಂದಿನ ವಿಷಯವನ್ನು ಆರಿಸಿಕೊಳ್ಳುತ್ತಿದ್ದರು. ಆ ಪತ್ರಿಕೆ ವೆಂಕಟಕೃಷ್ಣಯ್ಯನವರಿಗೆ ಸೂಚನೆ ಕೊಟ್ಟು ಮನಸ್ಸನ್ನೆಬ್ಬಿಸುತ್ತಿತ್ತು. ಬರವಣಿಗೆಯ ಮನೋಭಾವವೂ ಶೈಲಿಯೂ ವೆಂಕಟಕೃಷ್ಣಯ್ಯನವರದೇ. ಅವರದು ಸರಳವಾದ ಶೈಲಿ; ಸ್ವಾಭಾವಿಕವಾದದ್ದು. ಅವರ ಕನ್ನಡ ಜನರೂಢಿಗೆ ಅನುಸಾರವಾಗಿ, ಆದರೆ ಸಂಸ್ಕೃತದಲ್ಲಿ ವ್ಯುತ್ಪನ್ನರಾದವರ ಪದಸೌಷ್ಠವದಿಂದ ಕೂಡಿ ರಂಜಕವಾಗಿರುತ್ತಿತ್ತು. ಅವರ ಇಂಗ್ಲಿಷು ವೀರ್ಯವತ್ತಾದದ್ದು. ಅದರಲ್ಲಿ ಅವರು ಒಳ್ಳೊಳ್ಳೆಯ ಇಡಿಯಮುಗಳನ್ನು (Idiom) ಉಪಯೋಗಿಸುತ್ತಿದ್ದರು.

ಈ ಲೇಖನಕಾರ್ಯ ಸುಮಾರು ಏಳರವರೆಗೆ ನಡೆಯುವುದು. ಅದರ ಮಧ್ಯದಲ್ಲಿ ಕಾಫಿ. ನಂತರ ವಾಕಿಂಗ್.

ವ್ರತನಿಷ್ಠೆ :

ಅವರ ಪತ್ರಿಕಾ ವ್ಯವಸಾಯವನ್ನು ನೆನಪಿಗೆ ತಂದುಕೊಂಡಾಗ ಒಂದು ದುಃಖದ ಪ್ರಕರಣ ಜ್ಞಾಪಕಕ್ಕೆ ಬರುತ್ತದೆ. ಸುಮಾರು ೧೯೦೨ ರಲ್ಲೋ ೧೯೦೩ರಲ್ಲೋ ಅವರಿಗೆ ಒಂದು ಪುತ್ರವಿಯೋಗವಾಯಿತು. ಅವರಿಗಿದ್ದ ಒಬ್ಬ ಮಗಳೂ ಆಕೆಯ ಗಂಡ ದಕ್ಷಿಣಾ ಮೂರ್ತಿ ಎಂಬಾತನೂ (ಬಹುಶಃ ಪ್ಲೇಗಿನಿಂದ) ತೀರಿಕೊಂಡರು. ಈ ದುಃಖಸಂದರ್ಭಗಳಲ್ಲಿ ಯಾವುದೋ ಒಂದು ನಡೆದಾಗ ಮನೆಯಿಂದ ಶವ ಹೊರಡುವುದರ ಮುನ್ನ ವೆಂಕಟಕೃಷ್ಣಯ್ಯನವರು ಏನೋ ಪುಣ್ಯಾತ್ಮ-ಈ ಹೊತ್ತಿನ ಆರ್ಟಿಕಲ್ ಇನ್ನೂ ಬರೆಯಲಿಲ್ಲವೇನೋ? ಕಾಗದ ಕಡ್ಡಿ ತೆಗೆದುಕೊಂಡು ಬಾ - ಎಂದು ಹೇಳಿ ಅಂದಿನ ಲೇಖನ ಬರೆಯಿಸಿ ಮುಗಿಸಿದರು. ಇಂಥಾದ್ದು ಅವರಿಗಿದ್ದ ಕರ್ತವ್ಯನಿಷ್ಠೆ.

ಪರಿಹಾಸಾಸ್ಪದ :

ವೆಂಕಟಕೃಷ್ಣಯ್ಯನವರು ಬ್ರಿಟಿಷ್‌ರೆಸಿಡೆಂಟರೋಡನೆ ಮರ್ಯಾದೆಗೆ ತಕ್ಕಷ್ಟು ಸಂಪರ್ಕವನ್ನಿಟ್ಟುಕೊಂಡಿದ್ದರು. ಒಂದು ಸಾರಿ ಸರ್ ಡೊನಾಲ್ ರಾಬರ್ಟ್‌ಸನ್ ಎಂಬ ರೆಸಿಡೆಂಟ್ ಸಾಹೇಬನನ್ನು ನೋಡಲು ಹೋದರು. ಆತನು ಇವರನ್ನು ಸ್ನೇಹದಿಂದ ಸ್ವಾಗತಿಸಿ ಸೋಫದ ಮೇಲೆ ಕುಳ್ಳಿರಿಸಿ ಮಾತುಕಥೆಗೆ ಆರಂಭಿಸಿದನು. ಮೂರು ನಾಲ್ಕು ನಿಮಿಷ ಕಳೆದಮೇಲೆ

ಮಿ||ವೆಂಕಟಕೃಷ್ಣಯ್ಯನವರೇ, ಒಂದು ನಿಮ್ಮ ಸ್ವಂತ ವಿಷಯ ಹೇಳುತ್ತೇನೆ. ಮಾಫ್ ಮಾಡಬೇಕು.

ಏನದು? ಅಪ್ಪಣೆಯಾಗಲಿ.

ನಿಮಗೆ ಏನೋ ನೋವಿರುವಂತೆ ಕಾಣುತ್ತದೆ.

ಏನೂ ಇಲ್ಲವಲ್ಲ.?

ಇಲ್ಲ. ನೀವು ಕುಳಿತಿರುವ ರೀತಿಯನ್ನು ನೋಡಿದರೆ ನನ್ನ ಮನಸ್ಸಿಗೆ ಹಾಗನ್ನಿಸುತ್ತದೆ. ಆದದ್ದರಿಂದ ನನಗೆ ಅಪ್ಪಣೆ. ಕೊಡಬೇಕು.
ಹೀಗೆ ಹೇಳುತ್ತ ಆ ಸಾಹೇಬನು ತನ್ನ ಜವಾನನನ್ನು ಕರೆದು ವೆಂಕಟಕೃಷ್ಣಯ್ಯನವರ ಪಾದಗಳ ಕಡೆ ನೋಡು ಎಂದ. ಆ ಜವಾನನು ವೆಂಕಟಕೃಷ್ಣಯ್ಯನವರ ಬೂಡ್ಸು ಎಡಗಾಲಿನದು ಬಲಗಾಲಿನ ಮೇಲೆಯೂ ಬಲಗಾಲಿನದು ಎಡಗಾಲಿನ ಮೇಲೆಯೂ ಬಿಗಿಯಾಗಿ ಕಟ್ಟದ್ದದ್ದನ್ನು ನೋಡಿ ಮುಸಿನಗೆ ನಗುತ್ತ ದಾರಗಳನ್ನು ಬಿಚ್ಚಿ ಎಡಗಾಲಿನದನ್ನು ಎಡಗಾಲಿಗೂ ಬಲಗಾಲಿನದನ್ನು ಬಲಗಾಲಿಗೂ ತೊಡಿಸಿ ಬಿಗಿಯಿಲ್ಲದಂತೆ ದಾರಗಳನ್ನು ಕಟ್ಟದ. ವೆಂಕಟಕೃಷ್ಣಯ್ಯನವರು ನನಗೆ ತಿಳಿಂiiಲೇ ಇಲ್ಲವಲ್ಲ ಇದು! ಎಂದು ನಗುತ್ತ ಉತ್ತರ ಹೇಳಿದರು. ಕಸ ಗುಡಿಸಿದವರು ಬೂಡ್ಸನ್ನು ಹೇಗೆ ಇಟ್ಟಿದ್ದರೋ ಹಾಗೆಯೇ ಇವರು ಮೆಟ್ಟಿಕೊಂಡು ದಾರ ಕಟ್ಟಕೊಂಡಿದ್ದರಂತೆ.

ಬೋಧನಕ್ರಮ :

ವೆಂಕಟಕೃಷ್ಣಯ್ಯನವರ ಬೋಧನಕ್ರಮವನ್ನು ಕುರಿತು ಅನೇಕ ಮಂದಿ ಶಿಷ್ಯರಿಂದ ನಾನು ಕೇಳಿದ್ದೇನೆ. ಅವರು ವಿಶೇಷವಾಗಿ ಪಾಠ ಹೇಳುತ್ತಿದ್ದ ವಿಷಯಗಳು ಇಂಗ್ಲಿಷ್ ಸಾಹಿತ್ಯ ಮತ್ತು ಚರಿತ್ರೆ. ಆದರೆ ವಿಷಯದ ನಿಷ್ಕರ್ಷೆ ಎಷ್ಟು ಮಾತ್ರವೂ ಇರಲಿಲ್ಲ. ಪಠ್ಯ ಪುಸ್ತಕದ ಒಂದು ಪಾಠವನ್ನು ನೆವ ಮಾತ್ರವಾಗಿರಿಸಿಕೊಂಡು ಆ ಪ್ರಸ್ತಾವದಿಂದ ಪ್ರಪಂಚದ ಎಲ್ಲ ಭಾಗಗಳಿಗೂ ಪ್ರಯಾಣ ಮಾಡುತ್ತಿದ್ದರು.ಕೆಲವು ಹೆಸರುಗಳನ್ನಂತೂ ಅವರು ದಿನದಿನವೂ ಸ್ಮರಣೆ ಮಾಡಬೇಕು. ರಗ್ಬಿಯ ಆರ‍್ನಾಲ್ಡ್, ಗ್ಲ್ಯಾಡ್‌ಸ್ಟನ್, ಟೆಲಿಮಾಕಸ್, ಲಿಂಕನ್, ಜಾರ್ಜ್ ವಾಷಿಂಗ್‌ಟನ್, ಬೂಕರ್‌ಟಿ ವಾಷಿಂಗ್‌ಟನ್, ಬೆಂಜಮಿನ್ ಫ್ರಾಂಕ್‌ಲಿನ್-ಇನ್ನೂ ಅನೇಕ ಮಂದಿ ಮಹಾಪುರುಷರು ಪಾಠಕಾಲದಲ್ಲಿ ಅಲ್ಲಿ ತಾಂಡವವಾಡುತ್ತಿದ್ದರು. ವಿದ್ಯಾರ್ಥಿಗಳಿಗಾದರೋ ಕುತೂಹಲ ಕ್ಷಣೇ ಕ್ಷಣೇ ಹೊಸದಾಗುತ್ತಿತ್ತು. ಮಾತಿನ ಝರಿ, ವಿಷಯದ ಗಾಂಭೀರ್ಯ, ಎರಡಕ್ಕಿಂತ ಹೆಚ್ಚಾಗಿ ಹೇಳುವವರು ತಮ್ಮನ್ನೇ ಮರೆತುಕೊಂಡು ಉತ್ಸಾಹಪಡುತ್ತಿದ್ದದ್ದು ವಿದ್ಯಾರ್ಥಿಗಳಿಗೆ ಸ್ಫೂರ್ತಿಪ್ರದವಾಗಿರುತ್ತಿತ್ತು. ಪರೀಕ್ಷಾರ್ಥವಾಗಿ ಅವರು ಪಾಠ ಹೇಳಿದವರಲ್ಲ. ವಿದ್ಯಾರ್ಥಿಗಳು ಶೀಲವಂತರಾಗಬೇಕೆಂದು ಅವರ ಮುಖ್ಯ ಉದ್ದೇಶ. ದೇಶಭಕ್ತಿ ಬೋಧನೆ ಅವರಲ್ಲಿ ಪ್ರತ್ಯಕ್ಷವಾಗಿತ್ತು.

ದಂಡನೆ

ವೆಂಕಟಕೃಷ್ಣಯ್ಯನವರು ವಿದ್ಯಾರ್ಥಿಗಳನ್ನು ದಂಡಿಸುತ್ತಿದ್ದದ್ದೂ ಉಂಟು. ತಪ್ಪು ಮಾಡಿದವನೆಂದು ತಿಳಿದು ವಿದ್ಯಾರ್ಥಿಯನ್ನು ಬೆತ್ತದಿಂದ ತೀಡುತ್ತಿದ್ದರು. ಅವನ ಕಣ್ಣಿನಲ್ಲಿ ನೀರು ಉಕ್ಕಿದೊಡನೆಯೇ ಗುರುಗಳ ಕಣ್ಣು ನೀರು ತುಂಬುವುದು. ಬೆತ್ತವನ್ನು ಬದಿಗೆ ಹಾಕಿ ಹುಡುಗನನ್ನು ಬಾಚಿ ತಬ್ಬಿಕೊಳ್ಳುವರು. ತಮ್ಮ ಕೊಠಡಿಗೆ ಅವನನ್ನು ಕರೆದುಕೊಂಡು ಹೋಗಿ ಬಾಯಿತುಂಬ ಪೆಪ್ಪರ್‌ಮಿಂಟು, ದ್ರಾಕ್ಷಿ, ಕಲ್ಲುಸಕ್ಕರೆಗಳನ್ನು ತುಂಬುತ್ತಿದ್ದರು. ಅವರ ರೂಮಿನಲ್ಲಿ ಖರ್ಜೂರ ಬಾದಾಮಿ ಮೊದಲಾದವವನ್ನು ತುಂಬಿದ ಗಾಜಿನ ಜಾಡಿಗಳನ್ನು ಬೀರುವಿನಲ್ಲಿ ನಾನು ಕಣ್ಣಾರ ಕಂಡಿದ್ದೇನೆ. ಅದೆಲ್ಲ ವಿದ್ಯಾರ್ಥಿಗಳಿಗಾಗಿ ಮುಖ್ಯವಾಗಿ ಏಟು ತಿಂದ ವಿದ್ಯಾರ್ಥಿಗಳಿಗಾಗಿ. ಹೀಗಾಗಿ ವಿದ್ಯಾರ್ಥಿಗಳಲ್ಲಿಯೇ ಒಂದು ಸಂಚು ನಡೆಯುತ್ತಿತ್ತು; ಒಬ್ಬನನ್ನು ಒಡಂಬಡಿಸಿ ಅವನ ಮೇಲೆ ದೂರು ಹೇಳಿ ಅವನನ್ನು ಹೊಡಿಸುವುದು ,ಆಮೇಲೆ ಬಂದ ತಿಂಡಿಗಳನ್ನು ಎಲ್ಲರೂ ಹಂಚಿಕೊಳ್ಳುವುದು. ಹೀಗೆ ಮಾಡಿದವರಲ್ಲಿ ಒಬ್ಬ ವಿದ್ಯಾರ್ಥಿ ನನಗೆ ಸ್ನೇಹಿತನಾಗಿದ್ದವ.

ಸತ್ಕಾರ :

ಕಡೆಯ ದಿನಗಳಲ್ಲಿ ಅವರು ಅಡ್ವೊಕೇಟ್ ಚಂದ್ರಶೇಖರಯ್ಯರ್ ರವರ ಮನೆಯಲ್ಲಿ ಹಗಲಿನ ಭೋಜನ ಮಾಡುತ್ತಿದ್ದರು. ರಾತ್ರಿ ಉಪವಾಸ ಹಾಲು, ನೀರು ಬೇಕಾದರೆ ವಿದ್ಯಾರ್ಥಿಗಳು ತಂದು ಕೊಡುವರು. ರೈ|| ಆ|| ಶ್ರೀನಿವಾಸಶಾಸ್ತ್ರಿಗಳಿಗೆ ವೆಂಕಟಕೃಷ್ಣಯ್ಯನವರಲ್ಲಿ ಅತ್ಯಂತ ಪೂಜ್ಯಭಾವ. ಅವರು ಮೈಸೂರಿಗೆ ಹೋದಾಗಲೆಲ್ಲ ಮೊದಲೇ ವೆಂಕಟಕೃಷ್ಣಯ್ಯನವರಿಗೆ ತಿಳಿಸಿ ಅವರ ದರ್ಶನಕ್ಕಾಗಿ ಹೋಗುತ್ತಿದ್ದರು. ಒಂದು ಸಾರಿ ಶಾಸ್ತ್ರಿಗಳು ಅಲ್ಲಿಗೆ ಹೋಗಿದ್ದಾಗ ವೆಂಕಟಕೃಷ್ಣಯ್ಯನವರು ಒಂದು ತಟ್ಟೆಯ ತುಂಬ ಹಣ್ಣು, ಖರ್ಜೂರ ದ್ರ್ರಾಕ್ಷಿಗಳನ್ನೂ ಇತರ ತಿಂಡಿಗಳನ್ನೂ ಇರಿಸಿ ಶಾಸ್ತ್ರಿಗಳ ಮುಂದಿಟ್ಟರು. ಶಾಸ್ತ್ರಿಗಳು ನಾನು ಏನೂ ಮುಟ್ಟುವಂತಿಲ್ಲವಲ್ಲ? ವ್ಯಾಧಿಗ್ರಸ್ತನಾಗಿದ್ದೇನಲ್ಲ? ಎಂದರು. ವೆಂಕಟಕೃಷ್ಣಯ್ಯನವರು ನಿಮ್ಮಂಥವರು ಬಂದರೆ ನಿಮ್ಮನ್ನು ಊಟಕ್ಕೆ ಏಳಿರೆಂದು ಹೇಳುವ ಸಂತೋಷ ನನ್ನ ಪಾಲಿಗಿಲ್ಲವಲ್ಲ? ನೀವು ಏನೂ ತೆಗೆದುಕೊಳ್ಳದೆ ಹೋದರೆ ನನ್ನ ಮನಸ್ಸು ಕಳವಳಪಡುತ್ತೆ ಎನ್ನುತ್ತ ಕಣ್ಣೀರಿಟ್ಟರು. ನಾನು ಆಗ ಅಲ್ಲಿದ್ದೆ.

ಪ್ರಜಾಪಕ್ಷ :

೧೯೨೬-೨೭ ಪ್ರಜಾಪಕ್ಷವೆಂಬ ಕಕ್ಷಿ ಮೈಸೂರಿನಲ್ಲಿ ಪ್ರಬಲವಾಗಿತ್ತಷ್ಟೆ? ಆಗ ಒಂದು ಸಂಗತಿ ನಡೆಯಿತು. ಪ್ರಜಾಪ್ರತಿನಿಧಿ ಸಭೆ ಆಗ ಜಗನ್ಮೋಹನ ಬಂಗಲೆಯಲ್ಲಿ ಸೇರುತ್ತಿತ್ತು.ಸಭೆ ವೇದಿಕೆಯ ಮೇಲೆ ದಿವಾನರೂ ಅವರ ಸಹೋದ್ಯೋಗಿಗಳೂ ಕೂಡತ್ತಿದ್ದರು. ಅವರ ಎಡಗಡೆ ಪಶ್ಚಿಮಾಭಿಮುಖವಾಗಿ ಮುಂದಿನ ಸಾಲಿನ ಮೊದಲಿನ ಐದಾರು ಕುರ್ಚಿಗಳಲ್ಲಿ ವೆಂಕಟಕೃಷ್ಣಯ್ಯನವರು ಶ್ರೀನಿವಾಸರಾಯರು, ವಾಸುದೇವರಾಯರು ಮೊದಲಾದ ಹಿರಿಯ ಸದಸ್ಯರು ಕೂಡುತ್ತಿದ್ದರು. ಇದು ಬಹು ವರ್ಷಗಳಿಂದ ಬಂದಿದ್ದ ರೂಢಿ. ಪ್ರಜಾಪಕ್ಷದ ನಾಯಕರು ಕೆಲವರು ವೆಂಕಟಕೃಷ್ಣಯ್ಯನವರದು ಏನು ಹೆಚ್ಚು? 'ಅವರೇಕೆ ಮೊದಮೊದಲಿನ ಪೀಠಗಳಿಲ್ಲಿ ಕೂಡಬೇಕು? ನಾವೇಕೆ ಕೂಡಬಾರದು?' ಎಂದುಮಾತನಾಡಿಕೊಂಡು ಹನ್ನೆರಡು ಘಂಟೆಗೆ ಪ್ರಾರಂಭವಾಗಬೇಕಾಗಿದ್ದ ಸಭೆ ಹನ್ನೊಂದಕ್ಕೇ ಬಂದು ಮೊದಲಿನ ಪೀಠಗಳಲ್ಲಿ ಕುಳಿತರು. ಅಬ್ಬಾಸ್‌ಖಾನ್ ಸಾಹೇಬರು, ಜಿ. ಪರಮಶಿವಯ್ಯನವರು, ಎಚ್. ದಾಸಪ್ಪನವರು ಮೊದಲಾದವರು ಆ ಪೀಠಗಳಲ್ಲಿದ್ದವರು.

ಹನ್ನೆರಡು ಘಂಟೆಗೆ ಸರಿಯಾಗಿ ದಿವಾನ್ ಮಿರ್ಜಾಸಾಹೇಬರು ಸಭಾಮಂದಿರವನ್ನು ಪ್ರವೇಶಿಸಿ ಅಲ್ಲಿ ಮುಂದುಗಡೆ ಪೀಠಸ್ಥರಾಗಿದ್ದವರನ್ನು ಕಂಡರು. ಯಾವ ಮಾತನ್ನೂ ಆಡಲಿಲ್ಲ. ಅದಕ್ಕೆ ಎಂಟು ಹತ್ತು ನಿಮಿಷಕ್ಕೆ ಮುಂಜೆ ವೆಂಕಟಕೃಷ್ಣಯ್ಯನವರೂ ಅವರ ಸ್ನೇಹಿತರೂ ಬಂದಿದ್ದರು. ಮುಂದಿನ ಸಾಲಿನ ಪೀಠಗಳು ಭರ್ತಿಯಾಗಿದ್ದದ್ದನ್ನು ಕಂಡು 'ಅವರು ಅಲ್ಲಿರಲಿ. ಜಾಗ ಖಾಲಿಯಿರುವ ಕಡೆ ನಾವು ಕೂಡೋಣ. ಅದರಲ್ಲೇನು ವ್ಯತ್ಯಾಸ?' ಎನ್ನತ್ತ ಒಂದು ಮೂಲೆಯಲ್ಲಿದ್ದ ಕುರ್ಚಿಗಳ ಮೇಲೆ ಕುಳಿತರು. ಸಭಾಕಾರ್ಯ ಆರಂಭವಾಯಿತು. ಯಾವುದೇ ವಿಷಯ ಚರ್ಚೆಗೆ ಬಂದಿತು. ಅದನ್ನು ಕುರಿತು ಅಗ್ರಾಸನದ ಸಮೀಪದಲ್ಲಿದ್ದ ಮುಖಂಡರುಗಳೆಲ್ಲ ಭಾಷಣ ಮಾಡಿದರು. ಆ ಭಾಷಣಗಳು ಮುಗಿದ ಮೇಲೆ, ವಿಷಯವನ್ನು ಸಭೆಯ ತೀರ್ಮಾನಕ್ಕೊಡ್ಡುವ ಮುನ್ನ ಮಿರ್ಜಾ ಸಾಹೇಬರವರು ಅಧ್ಯಕ್ಷಸ್ಥಾನದಿಂದ ವೆಂಕಟಕೃಷ್ಣಯ್ಯನವರ ಕಡೆ ತಿರುಗಿ ಕೇಳಿದರು;

M : “Mr. Venkatakrishnaiya have you nothing to say?”
V : “Many members have spoken. Perhaps they have discussed it enough .”
M : “I am anxious to knowyour views government can`t ignore the view of a Veteran like you.”
ಸಬೆsಯ ಬಹುಭಾಗಕ್ಕೆ ಸಂತೋಷವಾಗಿ ಚಪ್ಪಾಳೆ ಬಂದಿತು. ಮಿರ್ಜಾರವರು ಪಕ್ಷಪಾತ ಮಾಡಿದರೆಂದೂ ಸಭೆಗೆ ಅವಮಾನ ಮಾಡಿದರೆಂದೂ ಗುಸು ಗುಸು ನಡೆಯಿತು. ವೆಂಕಟಕೃಷ್ಣಯ್ಯನವರ ನಡೆತೆಯಲ್ಲಿ ಅಂತರಂಗದಲ್ಲಾಗಲಿ ಯಾವ ಹೆಚ್ಚುಕಡಮೆಯೂ ಆಗಲಿಲ್ಲ.

ಕಡೆಕಡೆಯ ದಿನಗಳಲ್ಲಿ ಮಿರ್ಜಾಸಾಹೇಬರಿಗೂ ವೆಂಕಟಕೃಷ್ಣಯ್ಯನವರಿಗೂ ಮನಸ್ತಾಪ ಬಂದದ್ದುಂಟು. ಮಿರ್ಜಾಸಾಹೇಬರು ಆಗ ಮಾಡಿದ್ದನ್ನು ನಾನು ಆಗಲೂ ಒಪ್ಪಲಿಲ್ಲ. ಅದು ಘನತೆಯ ದಾರಿಯಲ್ಲವೆಂದೂ ಉದಾರತೆಯಲ್ಲವೆಂದೂ ನ್ಯಾಯವಲ್ಲವೆಂದೂ ಈಗಲೂ ಅಭಿಪ್ರಾಯವಿಟ್ಟುಕೊಂಡಿದ್ದೇನೆ.

ವೆಂಕಟಕೃಷ್ಣಯ್ಯನವರ ಅವಸಾನಕಾಲದಲ್ಲಿ ಅವರ ದರ್ಶನಕ್ಕಾಗಿ ನಾನು ಕೃಷ್ಣರಾಜೇಂದ್ರ ಆಸ್ಪತ್ರೆಗೆ ಹೋಗಿದ್ದೆ. ಅವರು ಎಂದಿನಂತೆ ಪ್ರಸನ್ನಚಿತ್ತರಾಗಿದ್ದರು. ಚಿಂತೆಯ ಚಿಹ್ನೆಯೇನೂ ಕಾಣಿಸಲ್ಲಿಲ್ಲ ಆಗ ಸುತ್ತಮುತ್ತ ಇದ್ದ ಶುಶ್ರೂಷಾಕರ್ತರು ಅವರ ಶಿಷ್ಯರು. ಬಹು ವರ್ಷಗಳಿಂದ ವೆಂಕಟಕೃಷ್ಣಯ್ಯನವರು ಮನಸ್ಸನ್ನು ತಯಾರು ಮಾಡಿಕೊಂಡಿದ್ದರು.

ಏಕಾಕೀ ನಿಸ್ಪೃಹಃ ಶಾನ್ತಃ
ಪಾಣಿಪಾತ್ರೋ ದಿಗಂಬರಃ|
ಕದಾ ಶಂಭೋ ಭವಿಷ್ಯಾಮಿ
ಕರ್ಮನಿರ್ಮೂಲನಕ್ಷಮ||

4. ಕನ್ನಡ ಪತ್ರಿಕೋದ್ಯಮದ ಪಿತಾಮಹ ತಾತಯ್ಯನವರು - ನಾಡಿಗ ಕೃಷ್ಣಮೂರ್ತಿ

Go Top

೧೮೩೧ರಿಂದ ೧೮೮೧ರ ವರೆಗಿನ ಕಾಲವು ಮೈಸೂರಿನ ಆಡಳಿತದಲ್ಲಿ ಒಂದು ಪರ್ವಕಾಲ. ಆಗ ಮೈಸೂರು ಸಂಸ್ಥಾನದ ಆಡಳಿತವು ಬ್ರಿಟಿಷ್ ಕಮೀಷನರ ನೇರವಾದ ಆಡಳಿತದಲ್ಲಿತ್ತು. ಲಾರ್ಡ್‌ರಿಪ್ಪನ್ನನು ಪುನಃ ವೈಸರಾಯನಾಗಿ ಭಾರತಕ್ಕೆ ಬಂದಾಗ ಮೈಸೂರಿನ ಆಡಳಿತವು ಮುಮ್ಮಡಿ ಕೃಷ್ಣರಾಜ ಒಡೆಯರ್‌ರವರವಶಕ್ಕೆ ಬಂದಿತು. ಆಗ ಪುನಃ ಕನ್ನಡ ಪತ್ರಿಕಾವ್ಯವಸಾಯಕ್ಕೆ ರಾಜಮನೆತನದವರು ಬೆಂಬಲವನ್ನಿತ್ತರು. ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ಸ್ವತಂತ್ರವಾಗಿ ಕೊಡಲಾರಂಭಿಸಿದರು. ಹಾಗೆ ಧೈರ್ಯದಿಂದ ಪತ್ರಿಕಾವ್ಯವಸಾಯಕ್ಕೆ ತೊಡಗಿದವರರಲ್ಲಿ ಮುಖ್ಯರಾದವರು ಮೈಸೂರಿನ ವೃಧ್ಧಪಿತಾಮಹ ಎಂ.ವೆಂಕಟಕೃಷ್ಣಯ್ಯನವರು. ಪ್ರಾಮಾಣಿಕತೆಯಿಂದ ಸಂಪಾದನೆಮಾಡಿ ಪತ್ರಿಕೋದ್ಯಮದ ತತ್ವಗಳನ್ನು ಪಾಲಿಸಿಕೊಂಡು ಸಾರ್ವಜನಿಕ ಸೇವೆ ಮಾಡಿದ ಅನೇಕರಲ್ಲಿ ಅಗ್ರಸ್ಥಾನ ತಾತಯ್ಯನವರಿಗೆ ಸಲ್ಲುವುದು. ಉದಾತ್ತ ಧ್ಯೇಯಗಳನ್ನಿಟ್ಟುಕೊಂಡು ಕನ್ನಡ ಪತ್ರಿಕೋದ್ಯಮದ ಮೂಲಕ ಸಾರ್ವಜನಿಕ ಸೇವೆ ಮಾಡಿದ ತಾತಯ್ಯನವರನ್ನು ಕನ್ನಡ ಪತ್ರಿಕೋದ್ಯಮದ ಪಿತಾಮಹ ರೆಂದು ಕರೆದು ಅವರನ್ನು ಸ್ಮರಿಸಿಕೊಳ್ಳಲಾಗಿದೆ.

ಆಧುನಿಕ ಕನ್ನಡ ಪತ್ರಿಕೋದ್ಯಮದ ಅಡಿಪಾಯವನ್ನು ಹಾಕಿದ ಕೀರ್ತಿಯು ತಾತಯ್ಯನವರದು. ಸರಳವಾಗಿ ಮತ್ತು ನೇರವಾಗಿ ಪ್ರಭಾವಯುತವಾದ ಅವರ ಬರವಣಿಗೆಗೆ ಅವರ ಲೇಖನಗಳು ಹೆಸರುವಾಸಿಯಾಗಿದ್ದವು. ಅವರು ಸ್ವಭಾವತಃ ಬುದ್ದಿವಂತರೂ, ದಕ್ಷರೂ, ಪ್ರಾಮಾಣಿಕರೂ, ವಿದ್ವಾಂಸರೂ ಆಗಿದ್ದರು. ಸಾರ್ವಜನಿಕ ವಿಷಯಗಳಲ್ಲಿ ಶಿಸ್ತು ಮತ್ತು ಸತ್ಯಸಂಧತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರು. ಆಗ ಮೈಸೂರಿನ ದಿವಾನರಾಗಿ ಕೆ. ರಂಗಾಚಾರ‍್ಲುರವರು ನೇಮಿತರಾಗಿದ್ದರು. ಅವರು ಪ್ರಜಾನುರಾಗಿಗಳಾಗಿದ್ದರು. ಪ್ರಜಾಪ್ರಭುತ್ವದ ತತ್ವಗಳನ್ನು ಕ್ರಮವಾಗಿ ಜಾರಿಗೆ ತರಬೇಕೆಂದು ಅಭಿಪ್ರಾಯವುಳ್ಳವರಗಿದ್ದರು. ಅವರಿಗೆ ಬೆಂಬಲ ಕೊಡಲು ವೆಂಕಟಕೃಷ್ಣಯ್ಯನವರು ವೃತ್ತಾಂತ ಚಿಂತಾಮಣಿ ಎಂಬ ವಾರಪತ್ರಿಕೆಯನ್ನು ೧೮೮೫ರಲ್ಲಿ ಪ್ರಾರಂಭಿಸಿದರು. ಅದು ಅದ್ಭುತ ಜಯಗಳಿಸಿತು. ಅನಂತರ ಅವರು ಅನೇಕ ಪತ್ರಿಕೆಗಳನ್ನು ಕನ್ನಡದಲ್ಲಿಯೂ, ಇಂಗ್ಲೀಷಿನಲ್ಲಿಯೂ ಪ್ರಾರಂಭಿಸಿದರು. 'ಹಿತ ಬೋಧಿನಿ' 'ವೃತ್ತಾಂತ ಚಿಂತಾಮಣಿ' ಸಂಪದಭ್ಯುದಯ, ಸಾಧ್ವಿ, ಪೌರ ಸಾಮಾಜಿಕ ಪತ್ರಿಕೆ ಎಂಬುವನ್ನು ಕನ್ನಡದಲ್ಲಿಯೂ, ಮೈಸೂರು ಪೇಟ್ರಿಯಟ್, ವೆಲ್ತ್ ಆಫ್ ಮೈಸೂರು, ನೇಚರ್ ಕ್ಯೂರ್ ಮತ್ತು ಮೈಸೂರು ಹೆರಾಲ್ಡ್ ಎಂಬ ಪತ್ರಿಕೆಗಳನ್ನು ಇಂಗ್ಲಿಷ್‌ನಲ್ಲಿಯೂ ಪ್ರಾರಂಭಿಸಿದರು. ಮೈಸೂರು ಹೆರಾಲ್ಡ್ ಪತ್ರಿಕೆಯು ತುಂಬಾ ಜನಾದರಣೀಯವಾಗಿತ್ತು. ಬಹಳ ಜನರು ಆ ಪತ್ರಿಕೆಯನ್ನು ಓದುತ್ತಿದ್ದರು. ಲೇಖನಗಳು ಶ್ರೇಷ್ಠಮಟ್ಟದಲ್ಲಿರುತ್ತಿದ್ದವು. ವೆಂಕಟಕೃಷ್ಣಯ್ಯನವರು ಪತ್ರಿಕೋದ್ಯಮವನ್ನು ತಮ್ಮ ಜೀವನದ ಮುಖ್ಯ ಕೆಲಸಗಳಲ್ಲೊಂದೆಂದು ಪರಿಗಣಿಸಿ ತಮ್ಮ ಕೊನೆಯ ದಿನಗಳನ್ನು ಪತ್ರಿಕೋದ್ಯಮದ ಬೆಳವಣಿಗೆಯಲ್ಲೇ ಕಾಲ ಕಳೆದರು. ಕನ್ನಡ ಭಾಷೆಯಲ್ಲಿ ಇಂದು ಪತ್ರಿಕೋದ್ಯಮವು ಉತ್ತಮ ರೀತಿಯಲ್ಲಿ ಬೆಳೆದಿದ್ದರೆ ಅದಕ್ಕೆ ವೆಂಕಟಕೃಷ್ಣಯ್ಯನವರೇ ಕಾರಣ. ವೆಂಕಟಕೃಷ್ಣಯ್ಯನವರು ಪತ್ರಿಕೋದ್ಯಮ ವ್ಯವಸಾಯದಲ್ಲಿ ಸ್ವತಃ ನುರಿತವರಾದರೂ ಮುಂದೆ ಈ ವ್ಯವಸಾಯವು ಬೆಳೆಯಲು ತರುಣರನ್ನು ತರಬೇತು ಮಾಡಬೇಕೆಂದು, ಯುವಕ ಬರಹಗಾರರಿಗೆ ಉತ್ತೇಜನ ಕೊಡುತ್ತಿದ್ದರು. ಹಾಗೆ ಸ್ಫೂರ್ತಿ ಪಡೆದವರಲ್ಲಿ ಎಂ. ಗೋಪಾಲಕೃಷ್ಣ ಅಯ್ಯಂಗಾರ್ ಮತ್ತು ಎಂ. ಶ್ರೀನಿವಾಸ ಅಯ್ಯಂಗಾರ್ ಎಂಬಿಬ್ಬ ಸಹೋದರರು ಮುಖ್ಯರಾದವರು. ವೆಂಕಟಕೃಷ್ಣಯ್ಯನವರ ನೇತೃತ್ವದಲ್ಲಿ ಅವರು ಸಂಪೂರ್ಣ ತರಬೇತಿಯನ್ನು ಪಡೆದರು. ಅನಂತರ ಅವರು ಬೆಂಗಳೂರಿಗೆ ಹೋಗಿ ಕನ್ನಡ ನಡೆಗನ್ನಡಿ ಎಂಬ ಪತ್ರಿಕೆಯನ್ನು ೧೮೯೫ರಲ್ಲಿ ಸಾಪಿಸಿದರು. ಇದು ಜನಾದರಣೀಯ ವಾರಪತ್ರಿಕೆಯಾಗಿತ್ತು. ಇದರ ಜೊತೆಯಲ್ಲಿ ಮೈಸೂರು ಸ್ವ್ಯಾಂಡರ‍್ಡ್ ಎಂಬ ದ್ವಿವಾರ ಪತ್ರಿಕೆಯನ್ನು ಪ್ರಾರಂಭಿಸಿದರು. ಮೈಸೂರು ಸಂಸ್ಥಾನದಲ್ಲಿ ಸಂಪೂರ್ಣವಾಗಿ ಪತ್ರಿಕಾವೃತ್ತಿಯನ್ನೇ ತಮ್ಮ ಊರುಗೋಲನ್ನಾಗಿ ಮಾಡಿಕೊಂಡ ಪ್ರಥಮ ಪತ್ರಿಕೋದ್ಯಮಿಗಳು ಈ ಸಹೋದರರು. ಕನ್ನಡ ನಡೆಗನ್ನಡಿ ಪತ್ರಿಕೆಯು ಜನತೆಯ ಮೇಲೆ ನೈತಿಕ ಮತ್ತು ಬೌದ್ಧಿಕ ಪ್ರಭಾವವನ್ನು ಬೀರಿತು. ಜನತೆಯ ಆಶೋತ್ತರಗಳಿಗೆ ಹೋರಾಟ ನಡೆಸುತ್ತಿದ್ದ ಈ ಪತ್ರಿಕೆಗಳು ಶೀಘ್ರದಲ್ಲಿಯೇ ಸರ್ಕಾರದ ಕೋಪಕ್ಕೆ ಬಲಿಯಾಗಬೇಕಾಯಿತು. ಆಗಿನ ದಿವಾನರುಗಳಾಗಿದ್ದ ಸರ್.ಪಿ.ಎನ್. ಕೃಷ್ಣಮೂರ್ತಿ ಮತ್ತು ವಿ.ಪಿ. ಮಾಧವ ರಾಯರು ಸಂಪಾದಕರುಗಳಿಗೆ ಹೇಳಿ ಕಳುಹಿಸಿ ಎಚ್ಚರಿಕೆಯನ್ನು ಕೊಟ್ಟರು. ಆ ವೇಳೆಗಾಗಲೇ ಪತ್ರಿಕೆಗಳು ಮತ್ತು ಜನರು ಸ್ವಾತಂತ್ರ್ಯ ಚಳುವಳಿಯ ಗಾಳಿಯನ್ನು ಕುಡಿದವರಾಗಿದ್ದರು. ಧೈರ್ಯದಿಂದ ಸರ್ಕಾರದ ದಬ್ಬಾಳಿಕೆಯನ್ನು ಎದುರಿಸಿದರು. ಬ್ರಿಟಿಷ್ ಸರ್ಕಾರಕ್ಕೆ ಕೈಗೊಂಬೆಯಾಗಿದ್ದ ಮೈಸೂರು ಸರ್ಕಾರಕ್ಕೆ ಪತ್ರಿಕಾಸ್ವಾತಂತ್ರ್ಯವನ್ನು ಮೊಟಕುವುದರ ಹೊರತು ಇನ್ನೊಂದು ಮಾರ್ಗವಿರಲಿಲ್ಲ. ಮೈಸೂರಿನ ನ್ಯಾಯವಿಧಾಯಕ ಸಭೆಯು ೧೯೦೮ರಲ್ಲಿ ಒಂದು ಶಾಸನವನ್ನು ಅಂಗೀಕರಿಸಿ ರಾಷ್ಟ್ರೀಯ ಆಂದೋಳನಕ್ಕೆ ಸಹಾಯ ಮಾಡುವ ಮತ್ತು ಸ್ವತಂತ್ರವಾಗಿ ಸರ್ಕಾರದ ಆಡಳಿತವನ್ನು ಟೀಕಿಸುವ ಪತ್ರಿಕೆಗಳ ಸ್ವತಂತ್ರವನ್ನು ಕುಂಠಿತಗೊಳಿಸುವ ಕ್ರಮವನ್ನು ಕೈಗೊಂಡಿತು. ಈ ಕಾನೂನಿನ ಪ್ರಕಾರ ಕನ್ನಡ ನಡೆಗನ್ನಡಿ ಪತ್ರಿಕೆಯನ್ನು ಸರ್ಕಾರವು ನಿಲ್ಲಿಸಿ ಸಂಪಾದಕರುಗಳಾದ ಗೋಪಾಲ ಐಯ್ಯಂಗಾರ್ ಮತ್ತು ಶ್ರೀನಿವಾಸ ಅಯ್ಯಂಗಾರ್‌ರವರನ್ನು ಗಡೀಪಾರು ಮಾಡಲಾಯಿತು. ಮೈಸೂರು ಸಂಸ್ಥಾನವು ಆಗ ಮಹಾರಾಜರ ಆಡಳಿತಕ್ಕೊಳಪಟ್ಟಿತ್ತು. ಈ ಪತ್ರಿಕೋದ್ಯಮಿ ಸಹೋದರರು ಮದರಾಸಿನಿಂದ ಬಂದಿದ್ದರು. ಆದುದರಿಂದ ಮೈಸೂರು ಸಂಸ್ಥಾನದ ಪ್ರಜೆಗಳಲ್ಲದ ಇವರನ್ನು ಅವರ ಸ್ವಸ್ಥಾನವಾದ ಮದರಾಸಿಗೆ ಗಡೀಪಾರು ಮಾಡಲಾಯಿತು. ಸೂರ್ಯೋದಯ ಪ್ರಕಾಶಿಕಾ ಪತ್ರಿಕೆಯು ೧೯೦೮ನೇ ಪತ್ರಿಕಾಕಾನೂನನ್ನು ಟೀಕಿಸಿ ಬರೆದುದರಿಂದ ೧೯೦೭ರಲ್ಲಿ ನವರತ್ನ ಕೃಷ್ಣಸ್ವಾಮಿಯವರು ಸ್ಥಾಪಿಸಿದ ಭಾರತಿ ಎಂಬ ಕನ್ನಡ ದಿನಪತ್ರಿಕೆಯು ಸರ್ಕಾರದ ಆಗ್ರಹಕ್ಕೆ ಪಾತ್ರವಾಗಿ, ಈ ಶಾಸನಕ್ಕೆ ತುತ್ತಾಗಿ ನಿಂತುಹೋಯಿತು.

ಸರ್ಕಾರದ ಈ ದಬ್ಬಾಳಿಕೆಯ ಕ್ರಮಗಳನ್ನು ಮೈಸೂರಿನ ಕನ್ನಡ ಪತ್ರಿಕೋದ್ಯಮಿಗಳು ಸಹಿಸಲಿಲ್ಲ. ವೆಂಕಟಕೃಷ್ಣಯ್ಯನವರ ನಾಯಕತ್ವದಲ್ಲಿ ಸಭೆ ಸೇರಿ ಸಂಸ್ಥಾನದಲ್ಲಿದ್ದ ಎಲ್ಲಾ ಕನ್ನಡ ಪತ್ರಿಕೆಗಳನ್ನು ಈ ಕರಾಳ ಶಾಸನದ ವಿರುದ್ಧ ನಿಲ್ಲಿಸಿಬಿಡಬೇಕೆಂದು ತೀರ್ಮಾನಿಸಿದರು. ವೆಂಕಟಕೃಷ್ಣಯ್ಯನವರು ಖುದ್ದಾಗಿ ದಿವಾನರುಗಳನ್ನು ಭೇಟಿ ಮಾಡಿ ಈ ಶಾಸನವು ಹೇಗೆ ಜನತೆಯ ಹಕ್ಕು ಭಾಧ್ಯತೆಗಳನ್ನು ಹತ್ತಿಕ್ಕಿರುವುದೆಂಬುದನ್ನು ಮನಗಾಣಿಸಿದರು. ಪತ್ರಿಕಾ ಸ್ವಾತಂತ್ರವನ್ನು ಕಿತ್ತುಕೊಳ್ಳುವುದರಿಂದ ಜನತೆಯ ಜನ್ಮಸಿದ್ಧವಾದ ಆ ಹಕ್ಕುಗಳಿಗೆ ಹೇಗೆ ಕುಂದಕ ಬಂದಿತೆಂಬುದನ್ನು ತಿಳಿಯಪಡಿಸಿದರು. ಆಡಳಿತಗಾರರು ಈ ಯಾವ ವಾದಗಳಿಗೂ ಜಗ್ಗಲಿಲ್ಲ. ಜನತೆಯ ಹೋರಾಟವು ಕುಗ್ಗಲಿಲ್ಲ. ಅಲ್ಲಲ್ಲಿ ಶಾಸನದ ಹಿಡಿತವನ್ನು ತಪ್ಪಿಸಿಕೊಳ್ಳಲು ಕೈಬರಹದ ಭಿತ್ತಿಪತ್ರಗಳು ಆಡಳಿತದ ಲೋಪದೋಷಗಳನ್ನು ತೋರಿಸಿ ಹೊರಬಂದವು.ಸರ್ಕಾರವೇ ಇಂತಹ ಚಟುವಟಿಕೆಗಳಿಗೆ ಸ್ಫೂರ್ತಿ ಕೊಟ್ಟಂತಾಯಿತು. ಈ ಶಾಸನವು ಎರಡು ವರ್ಷಗಳವರೆಗೆ ಜಾರಿಯಲ್ಲಿತ್ತು. ಆಮೇಲೆ ಪುನಃ ಕನ್ನಡ ಪತ್ರಿಕೆಗಳು ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಪ್ರಾರಂಭವಾದವು. ವೆಂಕಟಕೃಷ್ಣಯ್ಯನವರು೧೯೧೧ರಲ್ಲಿ ಸಾಧ್ವಿ ಎಂಬ ಪತ್ರಿಕೆಯನ್ನು ಸ್ಥಾಪಿಸಿದರು.

ಪತ್ರಿಕೋದ್ಯಮ ಶಿಕ್ಷಣವನ್ನು ವಿಶ್ವವಿದ್ಯಾಲಯದ ಮಟ್ಟದಲ್ಲಿ ಕೊಡಬೇಕೆಂಬ ಅಭಿಪ್ರಾಯವನ್ನು ಬಲವಾಗಿ ಪುಷ್ಟೀಕರಿಸಿ ಅದಕ್ಕೆ ಬೆಂಬಲ ಕೊಟ್ಟವರು ವೆಂಕಟಕೃಷ್ಣಯ್ಯನವರು. ಮೈಸೂರು ವಿಶ್ವವಿದ್ಯಾಲಯವು ಆಗಿನ್ನೂ ಪತ್ರಿಕೋದ್ಯಮ ಶಿಕ್ಷಣವನ್ನು ಕೊಡುತ್ತಿರಲಿಲ್ಲ. ಆದರೂ ಮುಂದೆ ಎಂದಾದರೂ ಪತ್ರಿಕೋದ್ಯಮ ಶಿಕ್ಷಣವು ಬಂದೇ ಬರುವುದೆಂಬ ನಂಬಿಕೆಯಿದ್ದ ವೆಂಕಟಕೃಷ್ಣಯ್ಯನವರು, ಎರಡು ಸಾವಿರ ರೂಪಾಯಿಗಳನ್ನು ವಿಶ್ವವಿದ್ಯಾನಿಲಯಕ್ಕೆ ದತ್ತಿಕೊಟ್ಟು ಪತ್ರಿಕೋದ್ಯಮ ಶಾಸ್ರ್ತದಲ್ಲಿ ಶ್ರೇಷ್ಠ ರೀತಿಯ ಯಶಸ್ಸನ್ನು ಪಡೆದ ವಿದ್ಯಾರ್ಥಿಗೆ ಬಹುಮಾನವನ್ನು ಕೊಡಬೇಕೆಂದು ತಿಳಿಸಿದ್ದರು. ಮೂವತ್ತು ವರ್ಷಗಳ ನಂತರ ತಾತಯ್ಯನವರು ಕಂಡ ಕನಸು ನನಸಾಯಿತು. ೧೯೫೧ನೇ ಇಸವಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಮಹಾರಾಜಾ ಕಾಲೇಜಿನಲ್ಲಿ ಪತ್ರಿಕೋದ್ಯಮ ಶಾಸ್ತ್ರವನ್ನು ಬಿ.ಎ.ಡಿಗ್ರಿ ಪದವಿಗೆ ಒಂದು ಐಚ್ಛಿಕ ವಿಷಯವನ್ನಾಗಿಟ್ಟಿತು. ಅಂದಿನಿಂದ ಇಂದಿನವರಗೆ ಪತ್ರಿಕೋದ್ಯಮ ಶಾಸ್ತ್ರದಲ್ಲಿ ಪ್ರಥಮ ತರಗತಿಯಲ್ಲಿ ಉತ್ತೀರ್ಣನಾಗಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಈ ಬಹುಮಾನವನ್ನು ವೆಂಕಟಕೃಷ್ಣಯ್ಯನವರ ಜ್ಞಾಪಕಾರ್ಥವಾಗಿ ಕೊಡಲಾಗುವುದು. ಈ ಬಹುಮಾನವನ್ನು ವೃದ್ಧಪಿತಾಮಹ ವೆಂಕಟಕೃಷ್ಣಯ್ಯ ಪತ್ರಿಕೋದ್ಯಮ ಬಹುಮಾನ ಎಂದು ಕರೆಯಲಾಗಿದೆ. ನಿಜವಾಗಿಯೂ ವೆಂಕಟಕೃಷ್ಣಯ್ಯನವರು ಪತ್ರಿಕೋದ್ಯಮವು ಬೆಳೆಯಲು ತುಂಬಾ ನೆರವಿತ್ತರು. ಆದುದರಿಂದಲೇ ಅವರನ್ನು ಮೈಸೂರಿನಲ್ಲಿ ಕನ್ನಡ ಪತ್ರಿಕೋದ್ಯಮದ ಪಿತಾಮಹರು ಎಂದು ಕರೆಯಲಾಗುತ್ತಿದೆ.

ಸುದ್ದಿ ಹಾಗೂ ಕಾರ್ಯಕ್ರಮಗಳು

ಕಾರ್ಯಕ್ರಮ :
ತಾತಯ್ಯ ನವರ ಜನ್ಮದಿನಾಚರಣೆ ಹಾಗೂ ವೆಬ್ ಸೈಟ್ ಲೋಕಾರ್ಪಣೆ : ಸೆಪ್ಟೆಂಬರ್ ೧೧, ೨೦೧೧ , ಶಾರದಾವಿಲಾಸ ಸಭಾಂಗಣ , ಮೈಸೂರು ಮುಂದೆ ಓದಿ

ಗ್ಯಾಲರಿ

Mysore Thathayya Gallery

ಶ್ರೀ ವೆಂಕಟ ಕೃಷ್ಣಯ್ಯ ನವರ ಸಾರ್ವಜನಿಕ ಸೇವೆ ಹಾಗೂ ಅಸ್ಪೃಶ್ಯತಾ ನಿವಾರಣೆ ಮತ್ತು ದೀನ ದಲಿತರ ಬಗೆಗಿನ ಅವರ ಕಾಳಜಿಯ ಪ್ರಯತ್ನಗಳು ನನ್ನ ಮನಸ್ಸು ಗೆದ್ದಿವೆ . ನಾನು ಅವರನ್ನು 'ಮೈಸೂರಿನ ಭೀಷ್ಮ ' ನೆಂದು ಪ್ರಶಂಸಿಸುವೆ . ಮೈಸೂರಿನ ಜನತೆಯಲ್ಲಿ ಅವರು 'Grand old man of Mysore' ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ .

– ಮಹಾತ್ಮಾ ಗಾಂಧಿ

ಶುದ್ಧ, ನಿಷ್ಕಳಂಕ ಜೀವನ ಹಾಗೂ ಸಾಮಾಜಿಕ ಸೇವೆಗೆ ಪ್ರಸಿದ್ಧರಾಗಿರುವ ಶ್ರೀ ವೆಂಕಟಕೃಷ್ಣಯ್ಯ ನವರು ಮೈಸೂರು ಪ್ರಾಂತ್ಯದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ನಿಸ್ವಾರ್ಥವಾಗಿ ದುಡಿದಿದ್ದಾರೆ. ಅವರ ಸರಳತೆ ಹಾಗೂ ಸಾಮಾಜಿಕ ಕಾಳಜಿಯ ಕಾರಣದಿಂದ ಮೈಸೂರಿನ ಜನತೆ ಅವರನ್ನು 'ತಾತಯ್ಯ' ಎಂದು ಪ್ರೀತಿಯಿಂದ ಕರೆದು ಗೌರವಿಸಿದೆ.

– ದಿವಂಗತ ಶ್ರೀ ಚಾಮರಾಜ ಒಡೆಯರ್, ಮೈಸೂರಿನ ಮಹಾರಾಜರು

ಜನತೆಯ ಹಿತಕ್ಕಾಗಿ ಜೀವಾವಧಿ ಸೇವೆ ಮಾಡಿರುವ ವೆಂಕಟಕೃಷ್ಣಯ್ಯನವರ ದೇಶಾಭಿಮಾನ, ಸಾರ್ವಜನಿಕ ಸೇವಾವೃತ್ತಿ ಮತ್ತು ಸ್ವಾರ್ಥತ್ಯಾಗ ಇವುಗಳ ಬಗ್ಗೆ ಗೌರವ ಅಭಿಮಾನವನ್ನು ಹೊಂದಿರುವವರ ಪೈಕಿ ನಾನು ಯಾರಿಗೂ ಹಿಂದಿಲ್ಲ. ಮೈಸೂರಿನಲ್ಲಿ ನನ್ನ ಅಧಿಕಾರ ಸೇವಾವಧಿಯಲ್ಲಿ ಅವರು ನನಗೆ ಇತ್ತ ಬೆಂಬಲದ ಕೃತಜ್ಞತಾಪೂರ್ವಕ ನೆನಪುಗಳು ನನ್ನಲ್ಲಿ ಎಂದಿಗೂ ಉಳಿಯುವುವು.

– ಎಂ. ವಿಶ್ವೇಶ್ವರಯ್ಯನವರು :

ಮೈಸೂರಿನ ಜನತೆಯಲ್ಲಿ ಸ್ವಾತಂತ್ರ್ಯದ ಬಗೆಗಿನ ಜಾಗೃತಿ ಹಾಗೂ ಸಾಮಾಜಿಕ ಅರಿವು ಮೂಡಿಸುವಲ್ಲಿ ಶ್ರೀ ವೆಂಕಟಕೃಷ್ಣಯ್ಯನವರ ಪಾತ್ರ ಅತ್ಯಂತ ಮಹತ್ವಪೂರ್ಣವಾದುದು. ಮೈಸೂರು ಪ್ರಾಂತ್ಯದ ಸಾಮಾಜಿಕ ಹಾಗೂ ಅರ್ಥಿಕ ಬೆಳವಣಿಗೆಗೆ ಅವರು ಅವಿಶ್ರಾಂತವಾಗಿ ದುಡಿದವರು.

– ಶ್ರೀ ವಿ.ವಿ. ಗಿರಿ, ಭಾರತದ ಮಾಜಿ ರಾಷ್ಟ್ರಪತಿಗಳು

The Anathalaya website